ಕೆಎಸ್‌ನ ಭಾವಗೀತೆಗಳ ಪುಸ್ತಕ ಓದುಗರಿಗೆ
ಕೆಎಸ್‌ನ ಭಾವಗೀತೆಗಳ ಪುಸ್ತಕ ಓದುಗರಿಗೆ
ಒಳ್ಳೆಯ ಕಂಠ ಇರುವ ಹಾಡುಗಾರರಿಗೆ ಈ ಪುಸ್ತಕ ತುಂಬಾ ಉಪಯೋಗಕ್ಕೆ ಬರುವುದರಲ್ಲಿ ಅನುಮಾನವಿಲ್ಲ. ಕೆ.ಎಸ್.ನ. ಅವರ ಭಾವಗೀತೆಗಳಿಗಾಗಿ ಅವರ 27 ಕವನ ಸಂಕಲನಗಳನ್ನು ತಡಕುವ ತ್ರಾಸನ್ನು ಅಂಕಿತ ‘ಹಾಡು ಹಸೆ’ ಪ್ರಕಟಿಸುವ ಮೂಲಕ ಹೋಗಲಾಡಿಸಿದೆ.
ತೊಡರುವ ನಾಲಗೆ ಮಲ್ಲಿಗೆಯ ಕವಿಯ ಭಾವನೆಗಳನ್ನು ನಿಧಾನವಾಗಿ ಸಹೃದಯರ ಕಿವಿಗೆ ದಾಟಿಸುತ್ತಿತ್ತು. ಈ ಭಾನುವಾರ (ನ. 16) ಕೆ.ಎಸ್.ನರಸಿಂಹ ಸ್ವಾಮಿಯವರ ಬನಶಂಕರಿಯ ಮನೆಯಂಗಳದಲ್ಲಿ ಮನೆಮಟ್ಟಿನಂತಹ ಸಂಭ್ರಮ. ಕೆ.ಎಸ್.ನ ಭಾವಗೀತೆಗಳನ್ನು ಅಲ್ಲಿ ಗುನುಗುನಿಸುತ್ತ ಕೂತಿದ್ದವರೇ ಹೆಚ್ಚು. ಇದನ್ನು ಕೇಳಿಸಿಕೊಳ್ಳಲು ವೇದಿಕೆ ಮೇಲೆ ಸಾಹಿತಿಗಳಾದ ಡಾ.ಚಂದ್ರಶೇಖರ ಕಂಬಾರ, ಡಾ.ಸುಮತೀಂದ್ರ ನಾಡಿಗ ಹಾಗೂ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಇದ್ದರು. ಅಂಕಿತ ಪುಸ್ತಕ ಹೊರತಂದಿರುವ ಮಲ್ಲಿಗೆ ಕವಿಯ ಆಯ್ದ ಭಾವಗೀತೆಗಳ ಸಂಕಲನ ‘ಹಾಡು ಹಸೆ’ಯ ಅನಾವರಣದ ಸಮಾರಂಭ ಅದು. ತಮ್ಮ ಕೃತಿಯನ್ನು ತಾವೇ ಅನಾವರಣಗೊಳಿಸುವ ಅಪರೂಪದ ಅವಕಾಶ ಕೆ.ಎಸ್.ನ ಅವರದ್ದಾಗಿತ್ತು.
ಒಂದು ಕಾಲದಲ್ಲಿ ವಿಮರ್ಶಕರು ಕೆ.ಎಸ್.ನ. ಕವನಗಳ ಕುರಿತು ಕಟುವಾಗಿ ಬರೆದರು. ಆದರೆ ಅದರಿಂದ ವಿಚಲಿತರಾಗಿ ಅವರು ಕಾವ್ಯಮಾರ್ಗ ಬದಲಿಸಲಿಲ್ಲ. ಮತ್ತೆ ಮತ್ತೆ ಓದಬೇಕೆನಿಸುವ, ಓದಿದಷ್ಟೂ ಖುಷಿ ಕೊಡುವ ಕವನಗಳನ್ನು ಕೆ.ಎಸ್.ನ. ರಚಿಸಿದ್ದಾರೆ. ನವ್ಯದ ಯುಗ ಆರಂಭವಾದಾಗ ನಾವೆಲ್ಲ ವಿಮರ್ಶಕರ ಮಧ್ಯೆ ಇದ್ದೆವು. ಆದರೆ ನರಸಿಂಹ ಸ್ವಾಮಿ ಜನರ ನಡುವೆ ಇದ್ದರು. ಸಾಂಸ್ಕೃತಿಕ ವಿಘಟನೆಯಂಥ ತಮ್ಮ ಕಾಲದ ತಲ್ಲಣಗಳಿಗೆ ಕೆ.ಎಸ್.ನ. ಧ್ವನಿ ಕೊಟ್ಟಿದ್ದಾರೆ ಎಂದು ಚಂದ್ರಶೇಖರ ಕಂಬಾರ ಹೊಗಳಿದರು.
ಕೆ.ಎಸ್.ನ ಅವರ ಕವಿತೆಗಳಲ್ಲಿ ಮಾತು ಅಸ್ಪಷ್ಟ, ಆದರೆ ಭಾವನೆಗಳು ಸುಸ್ಪಷ್ಟ . ನರಸಿಂಹ ಸ್ವಾಮಿಯವರಂತೆ ಶುದ್ಧ ಹಾಡುಗಳನ್ನು ಬರೆದವರು ಮತ್ತು ಕಾಳಿಂಗರಾಯರಂತೆ ಶುದ್ಧ ಹಾಡುಗಳನ್ನು ಹಾಡಿದವರು ಕನ್ನಡದಲ್ಲಿ ಮತ್ತಾರೂ ಇಲ್ಲ ಎಂದು ಕವಿ ಸುಮತೀಂದ್ರ ನಾಡಿಗರು ಮಾತಿನ ಸರ್ಟಿಫಿಕೇಟ್ ಕೊಟ್ಟರು.
ಶೃಂಗಾರ ರಸದ ಅದ್ಭುತ ಕವನಗಳನ್ನು ಕಟ್ಟಿಕೊಟ್ಟ ಕೆ.ಎಸ್.ನ. ಅವರ ಸಾಲುಗಳ ಮೂಲಕ ಲೋಕವನ್ನು ನೋಡಿದರೆ ಅತ್ಯಂತ ಸುಂದರವಾಗಿ ಕಾಣಿಸುತ್ತದೆ ಎಂದು ಲಕ್ಷ್ಮೀನಾರಾಯಣ ಭಟ್ಟರು ಹೇಳಿದರು.
ನರಸಿಂಹಸ್ವಾಮಿಯವರ ಕವನಗಳ ಸ್ಫೂರ್ತಿ , ಧರ್ಮಪತ್ನಿ ವೆಂಕಮ್ಮ ಕೂಡ ವೇದಿಕೆ ಮೇಲಿದ್ದರು. ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಕಾರ್ಯಕ್ರಮ ನಿರೂಪಿಸಿದರು. ಶಿವಮೊಗ್ಗ ಸುಬ್ಬಣ್ಣ, ಎಲ್.ಜಿ.ಸುಮಿತ್ರಾ, ಪ್ರಭಾ, ಶಾರದಾ ಹಿರಣ್ಣಯ್ಯ ಮೊದಲಾದವರು ಕೆ.ಎಸ್.ನ. ಕವಿತೆಗಳನ್ನು ಹಾಡಿದ್ದು ಕಾರ್ಯಕ್ರಮದ ಬೋನಸ್ಸು.
ನರಸಿಂಹಸ್ವಾಮಿಯವರ 27 ಕವನ ಸಂಕಲನಗಳಿಂದ ಆಯ್ದ 75 ಭಾವಗೀತೆಗಳಿರುವ ‘ಹಾಡು ಹಸೆ’ಯ ಬೆಲೆ 95 ರುಪಾಯಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications