ಸಿಇಟಿ : 2000 ಐಟಿ ಸೀಟುಗಳು ಕೊಳ್ಳೋರಿಲ್ಲದೆ ಖಾಲಿ ಬಿದ್ದಿವೆ
ಸಿಇಟಿ : 2000 ಐಟಿ ಸೀಟುಗಳು ಕೊಳ್ಳೋರಿಲ್ಲದೆ ಖಾಲಿ ಬಿದ್ದಿವೆ
ಹೀಗಾದದ್ದು ಯಾಕೆ ? ಬೆಂಗಳೂರು ವಿವಿ ಕುಲಪತಿ ಡಾ. ತಿಮ್ಮಪ್ಪ ಹೇಳ್ತಾರೆ..
ಮಾಹಿತಿ ತಂತ್ರಜ್ಞಾನ ನೀರ ಮೇಲಿನ ಗುಳ್ಳೆ ಅನ್ನೋದು ಅನೇಕ ತಂದೆ- ತಾಯಂದಿರ ನಂಬಿಕೆಯಾಗಿದೆ. ಅಮೆರಿಕೆಯ ಸನ್ ಮೈಕ್ರೋಸಿಸ್ಟಮ್ಸ್, ಸಿಸ್ಕೋದಂಥಾ ದಿಗ್ಗಜ ಕಂಪನಿಗಳೇ ಕೆಲಸಗಾರರನ್ನು ಮನೆಗೆ ಕಳಿಸಿರುವಾಗ ಇನ್ನೆಲ್ಲಿ ಬಂತು ಸಾಫ್ಟ್‌ವೇರ್ ಸೊಗಸು ಅನ್ನೋದು ಐಟಿ ಸೀಟುಗಳ ಕಡೆ ಮುಖಮಾಡದ ವಿದ್ಯಾರ್ಥಿಗಳ ಅಭಿಪ್ರಾಯ.
ಐಟಿ ಬಿತ್ತು, ಸಿವಿಲ್ಲು ಎದ್ದಿತು
1998ರ ನಂತರ ಸಿವಿಲ್ ಎಂಜಿನಿಯರಿಂಗ್ ಸೀಟುಗಳ ಬರಕತ್ತೂ ಹೀಗೇ ಇತ್ತು. ಯಾವುದೇ ಆಯ್ಕೆ ಸಿಗದವನು ಅಂತಿಮವಾಗಿ ಸಿವಿಲ್ ಎಂಜಿನಿಯರಿಂಗ್ ಓದುವ ಮನಸ್ಸು ಮಾಡುತ್ತಿದ್ದ. ಆದರೆ ಈ ಸಲ ಹಾಗಾಗಿಲ್ಲ. ಸಿವಿಲ್ ಎಂಜಿನಿಯರಿಂಗ್‌ಗೆ ಭಾರೀ ಡಿಮ್ಯಾಂಡು. ಇನ್ನು ಮಕಾಡೆಯಾಗುವ ಆತಂಕದಲ್ಲಿದ್ದ ಇನ್ನೊಂದು ಎಂಜನಿಯರಿಂಗ್‌ನ ಶಾಖೆ ಮೆಕ್ಯಾನಿಕಲ್ ಕೂಡ ಈ ವರ್ಷ ಸೆಟೆದು ನಿಂತಿದೆ. ಜೋರು ಡಿಮ್ಯಾಂಡಿರುವುದು ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್‌ಗೆ.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ತಿಮ್ಮಪ್ಪ ಮಾತಾಡುತ್ತಾರೆ- 1999- 2000ನೇ ಇಸವಿಯಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಬೇಡಿಕೆ ಇದ್ದುದಕ್ಕಿಂತ ಸಾಕಷ್ಟು ಹೆಚ್ಚು ಐಟಿ ಸೀಟುಗಳನ್ನು ಕಾಲೇಜುಗಳಿಗೆ ಮಂಜೂರು ಮಾಡಲು ಒಪ್ಪಿಗೆ ಸೂಚಿಸಿತು. ಆಗ ಸಾಫ್ಟ್‌ವೇರ್ ಉದ್ಯೋಗ ತರುತ್ತಿದ್ದ ಪಗಾರ ಅನೇಕರ ಬಾಯಲ್ಲಿ ನೀರೂರಿಸಿತು. ಎಲ್ಲ ತಂದೆ- ತಾಯಂದಿರೂ ತಮ್ಮ ಮಕ್ಕಳನ್ನು ಮಾಹಿತಿ ತಂತ್ರಜ್ಞರನ್ನಾಗಿಸಲು ಹೊರಟರು.
ಕಳೆದೆರಡು ವರ್ಷಗಳಲ್ಲಿ ಉದ್ದಿಮೆಯಲ್ಲಿ ಆದ ವಿಮುಖ ಬೆಳವಣಿಗೆಗಳು ಕೆಲಸದ ಅಭದ್ರತೆಯನ್ನು ಖಚಿತ ಪಡಿಸತೊಡಗಿದವು. ಸಹಜವಾಗೇ ಡಿಮ್ಯಾಂಡು ಕುಸಿಯಿತು. ಆದರೆ ಹುಟ್ಟು ಹಾಕಿದ್ದ ಸೀಟುಗಳು ಖಾಲಿ ಬೀಳತೊಡಗಿದವು. ಕಳೆದ ವರ್ಷ ಐಟಿ ಸೀಟುಗಳಿಗೆ ಕೇವಲ 35 ಪ್ರತಿಶತ ಡಿಮ್ಯಾಂಡ್ ಇತ್ತು. ಈ ವರ್ಷ ಶೇ. 15 ಕ್ಕೂ ಕಡಿಮೆಯಾಗಿದೆ.
ಅಷ್ಟೇ ಅಲ್ಲ , ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ 12 ಕಾಲೇಜುಗಳು ಬಿಸಿಎ ಮತ್ತು ಕಂಪ್ಯೂಟರ್ ಸೈನ್ಸ್ ಕೋರ್ಸುಗಳಿಗೆ ಬೇಡಿಕೆಯೇ ಇಲ್ಲದೆ, ಈ ಶಾಖೆಗಳನ್ನೇ ಮುಚ್ಚಿವೆ. ಐಟಿ ಸೀಟುಗಳ ಬೇಡಿಕೆ ಕುಸಿದಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಕಳೆದ ಎರಡು ವರ್ಷಗಳ ಹಿಂದೆ ಎಂಜಿನಿಯರಿಂಗ್ ಸೀಟುಗಳು ಸುಲಭವಾಗಿ ಸಿಗುವಂಥ ವಿಫುಲ ಅವಕಾಶ ಇದ್ದ ಕಾರಣ ಸಾಂಪ್ರದಾಯಿಕ ಪದವಿ ಸೀಟುಗಳಿಗೆ ಬೇಡಿಕೆ ತೀರಾ ಕುಸಿದಿತ್ತು. ಉದಾಹರಣೆಗೆ ಭೌತಶಾಸ್ತ್ರ , ಗಣಿತ, ರಾಸಾಯನಶಾಸ್ತ್ರದಂಥ ಸಾಂಪ್ರದಾಯಿಕ ಪದವಿ ವಿಷಯಗಳನ್ನು ಹೆಕ್ಕಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಈಗ ಎಂಜಿನಿಯರಿಂಗ್‌ನ ದುಬಾರಿ ಓದು ಕೂಡ ಭದ್ರ ಕೆಲಸವನ್ನು ಕಟ್ಟಿಕೊಡಲಾರದು ಎಂಬ ಸತ್ಯ ವಿದ್ಯಾರ್ಥಿಗಳಿಗೆ ಹಾಗೂ ತಂದೆ- ತಾಯಂದಿರಿಗೆ ಗೊತ್ತಾಗಿದೆ. ಸಾಂಪ್ರದಾಯಿಕ ಪದವಿ ಸೀಟುಗಳಿಗೆ ಮತ್ತೆ ಬೇಡಿಕೆ ಬಂದಿದೆ.
ನಾಸ್‌ಕಾಮ್ ಕೂಡ ಗುಲ್ಲೆಬ್ಬಿಸಿತ್ತು : ನಾಲ್ಕು ವರ್ಷಗಳ ಹಿಂದೆ ‘ನಾಸ್‌ಕಾಮ್’ ಕೂಡ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಲಕ್ಷೋಪಲಕ್ಷ ಉದ್ಯೋಗಾವಕಾಶ ಕಟ್ಟಿಕೊಡುತ್ತದೆ ಎಂದು ಗುಲ್ಲೆಬ್ಬಿಸಿತ್ತು. ಅದರ ಅಂದಾಜಿನ ಪ್ರಕಾರ ಬೆಂಗಳೂರಲ್ಲೇ ಸಾಫ್ಟ್‌ವೇರ್ ಉದ್ಯೋಗಗಳು ತೀರಾ ಹೆಚ್ಚಬೇಕಿತ್ತು. ಆದರೆ ಅದರ ಅಂದಾಜು ಪೂರ್ತಿ ನಿಜವಾಗಲಿಲ್ಲ. ಇವತ್ತು ಇನ್ಫೋಸಿಸ್ ಹಾಗೂ ವಿಪ್ರೋದಂಥ ಕಂಪನಿಗಳಲ್ಲಿ ಕೆಲಸ ಸಿಗುವುದು ಅದೃಷ್ಟದ ಸಂಗತಿಯಾಗಿಹೋಗಿದೆ. ಇಂಥಾ ಕಂಪನಿಗಳನ್ನು ಬಿಟ್ಟರೆ ಬೇರೆ ಕಡೆ ಕೆಲಸದ ಅಭದ್ರತೆಯ ಆತಂಕ. ಒಟ್ಟಿನಲ್ಲಿ ಬೇಡಿಕೆಗಿಂತ ಮೀರಿ ಐಟಿ ಸೀಟುಗಳನ್ನು ಸೃಷ್ಟಿಸಿದ್ದೇ ಈಗ ಅವು ಖಾಲಿ ಹೊಡೆಯಲು ಕಾರಣ ಎನ್ನುತ್ತಾರೆ ಐಟಿ ಶಿಕ್ಷಣ ಸ್ಟ್ಯಾಂಡರ್ಸ್ ಮಂಡಳಿ (ಬಿಐಟಿಇಎಸ್) ನಿರ್ದೇಶಕ ಕೆ.ಆರ್.ಎಸ್.ಮೂರ್ತಿ. ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿಯ ಕಾರ್ಯದರ್ಶಿ ಎ.ಆರ್.ಆಚಾರ್ಯ ಕೂಡ ಮೂರ್ತಿ ಅವರ ಅಭಿಪ್ರಾಯವನ್ನು ಸಮರ್ಥಿಸುತ್ತಾರೆ.
ಆಚಾರ್ಯ ಪ್ರಕಾರ- ನಮ್ಮ ರಾಜ್ಯದಲ್ಲಿ ಪರವಾಗಿಲ್ಲ. ತಮಿಳುನಾಡಲ್ಲಿ ಐಟಿ ಸೀಟುಗಳಿಗೆ ಡಿಮ್ಯಾಂಡು ತೀರಾ ಕುಗ್ಗಿರುವುದರಿಂದ ವಿಧಿಯಿಲ್ಲದೆ ಕಡಿಮೆ ದರದ ಪ್ಯಾಕೇಜ್ ರೂಪದಲ್ಲಿ ಸೀಟುಗಳನ್ನು ಹಂಚುತ್ತಿದ್ದಾರೆ. ಆಂಧ್ರಪ್ರದೇಶದಲ್ಲೂ ಐಟಿ ಸೀಟುಗಳಿಗೆ ಕರ್ನಾಟಕದ ಸ್ಥಿತಿಯೇ ಇದೆ.
ಸದ್ಯಕ್ಕೆ ಐಟಿ ಮಂತ್ರದ ಕಾಲ ಮುಗಿದಿದೆ. ಈಗ ಜೈವಿಕ ತಂತ್ರಜ್ಞಾನ ಮಂತ್ರದ ಜಪ ಜೋರಾಗಿದೆ. ಈ ಬೆಳವಣಿಗೆಯಿಂದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು ತಲೆ ಕೆರೆದುಕೊಳ್ಳುವಂತಾಗಿರುವುದಂತೂ ದಿಟ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications