ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಇ’ ವಹಿವಾಟು ಎಷ್ಟು ‘ನೈಜ’?

By Super
|
Google Oneindia Kannada News

'ಇ' ವಹಿವಾಟು ಎಷ್ಟು 'ನೈಜ'?
ಇ-ಜಾಲದ ಮೂಲಕ ಸಂಪರ್ಕ- ಸಂವಹನ ಒಂದೆಡೆ ಸಲೀಸಾಗಿದ್ದರೆ, ಇನ್ನೊಂದೆಡೆ ಇ-ಕಿಂಡಿಯಲ್ಲಿ ದಗಲಬಾಜಿತನಗಳ ಸಂಖ್ಯೆಯೂ ಹೆಚ್ಚಿದೆ. ಕಾಲಕ್ಕೆ ತಕ್ಕಂತೆ ಮೋಸಗಾರರು ಕೂಡ ಬದಲಾಗಿದ್ದಾರೆ

ಇದೀಗ ಭಾರತದೆಲ್ಲೆಡೆ 'ಆನ್‌ಲೈನ್‌' ವಹಿವಾಟಿನ ಬಗ್ಗೆಯೇ ಮಾತು. ಶೇರು, ಬ್ಯಾಂಕ್‌, ಕಡೆಗೆ ಲಾಟರಿ ವಹಿವಾಟನ್ನೂ ಕಂಪ್ಯೂಟರ್‌ ಸಂಪರ್ಕ ಜಾಲದ ಮೂಲಕ ನಡೆಸುವ ಬಗ್ಗೆ ಜನ ಉತ್ಸುಕರಾಗಿದ್ದಾರೆ. 'ಆನ್‌ಲೈನ್‌' ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚು, ಮೋಸಕ್ಕೆ ಅವಕಾಶವೇ ಇಲ್ಲ ಎಂಬ ಹೆಗ್ಗಳಿಕೆಯಿದೆ. 'ಇ' (ಇಲೆಕ್ಟ್ರಾನಿಕ್‌) ದಂಧೆಯ ಮುಂಚೂಣಿಯಲ್ಲಿರುವ ಅಮೆರಿಕದಲ್ಲಿ ಏನೆಲ್ಲ ನಡೆಯುತ್ತಿದೆ? ಈ ಬಗ್ಗೆ ಕುತೂಹಲದಿಂದ ಇಂಟರ್‌ನೆಟ್‌ ಜಾಲಾಡುತ್ತಿದ್ದಾಗ ಸ್ವಾರಸ್ಯಕರ ಸುದ್ದಿಯಾಂದು ಕಣ್ಣಿಗೆ ಬಿತ್ತು.

'ಆನ್‌ಲೈನ್‌' ದಗಲ್ಬಾಜಿಗಳು ಕಳೆದ ವರ್ಷ ಹತ್ತು ಸಹಸ್ರಕ್ಕೂ ಹೆಚ್ಚು ಅಮಾಯಕರ ಹದಿನೆಂಟು ದಶಲಕ್ಷ ಡಾಲರ್‌ಗಳನ್ನು ನುಂಗಿ ನೀರು ಕುಡಿದಿದ್ದಾರಂತೆ. ' ಇಂಟರ್‌ನೆಟ್‌ ಮೋಸಗಳ ವಿಚಾರಣಾ ಕೇಂದ್ರ'ದ ವಾರ್ಷಿಕ ವರದಿ ಪ್ರಸ್ತಾಪ ಮಾಡಿರುವಂತೆ ಕಳೆದ ವರ್ಷ ದಾಖಲಾದ 16,775 ಪ್ರಕರಣಗಳಲ್ಲಿ, ಇಂಟರ್‌ನೆಟ್‌ ಹರಾಜುಕಟ್ಟೆಯ ವಂಚನೆಗಳ ಪಾಲು ಅರ್ಧಕ್ಕೂ ಹೆಚ್ಚು. ನಂತರದ ಸ್ಥಾನ ಹಣ ಪಡೆದ ನಂತರವೂ ಖರೀದಿಸಿದ ಮಾಲುಗಳನ್ನು ತಲಪಿಸದಿರುವುದು ಹಾಗೂ ಕ್ರೆಡಿಟ್‌ ಕಾರ್ಡ್‌ ದುರ್ಬಳಕೆಯದು.

ವಿಶಿಷ್ಟ ಇಂಟರ್‌ನೆಟ್‌ ವಂಚನೆಯಾಂದರಲ್ಲೇ ಹದಿನಾರು ಅಮಾಯಕರು ಒಟ್ಟಾರೆ 3,45,000 ಡಾಲರ್‌ಗಳನ್ನು ಕಳೆದುಕೊಂಡಿದ್ದಾರಂತೆ. 'ನೈಜೀರಿಯ ಪತ್ರ ವಂಚನೆ'ಯೆಂದೇ ಹೆಸರಾದ ಈ ಪ್ರಕರಣದಲ್ಲಿ ಒಬ್ಬಾತನ ಬ್ಯಾಂಕ್‌ ಖಾತೆಯಿಂದ 78 ಸಾವಿರ ಡಾಲರ್‌ ಗುಳುಂ ಆಗಿದ್ದರೆ, ಹಾಗೂ ಮತ್ತೊಬ್ಬನಿಂದ ಸೋರಿ ಹೋಗಿರುವುದು 74 ಸಾವಿರ ಡಾಲರ್‌ಗಳು.

'ನೈಜೀರಿಯ ವಂಚನಾ ಪತ್ರ'ಗಳಿಗೆ ಎರಡು ದಶಕಗಳಿಗೂ ಮೀರಿದ ಇತಿಹಾಸವಿದೆ. ಆಮಿಷಗಳೊಂದಿಗೆ ಸಾಮಾನ್ಯ ಅಂಚೆಯ ಮೂಲಕ ಬರುತ್ತಿದ್ದ ಇಂಥ ಪತ್ರಗಳಿಗೆ ಇದೀಗ ಇಂಟರ್‌ನೆಟ್‌ ಸುವರ್ಣಾವಕಾಶ ಒದಗಿಸಿದೆ. ಇ-ಪತ್ರಗಳ ಒಕ್ಕಣೆ ಸಾಮಾನ್ಯವಾಗಿ ಈ ರೀತಿ ಇರುತ್ತದೆ. 'ನಿಮಗೆಲ್ಲ ತಿಳಿದಿರುವ ಹಾಗೆ ನೈಜೀರಿಯದಲ್ಲಿ ಸರ್ಕಾರ ಸ್ಥಿರವಾಗಿಲ್ಲ. 'ನೈಜೀರಿಯ ಸರ್ಕಾರದ ಅಧಿಕೃತ ಪ್ರತಿನಿಧಿಯಾದ' ನಾನು ಸರ್ಕಾರದ ಪರವಾಗಿ ವಿದೇಶಿ ಕಂಪನಿಗಳಿಗೆ ಕಾಮಗಾರಿ ಗುತ್ತಿಗೆಗಳನ್ನು ನೀಡುತ್ತಿರುತ್ತೇನೆ. ಇದಕ್ಕೆ ಪ್ರತಿಫಲವಾಗಿ ಆ ಕಂಪನಿಗಳು ಒಂದಷ್ಟು ಕಮೀಶನ್‌ ನೀಡುತ್ತಾರೆ. ಇಂಥ ಮಿಲಿಯಾಂತರ ಡಾಲರ್‌ ಹಣವನ್ನು ನೇರವಾಗಿ ನನ್ನ ಖಾತೆಗೆ ವರ್ಗಾಯಿಸಿಕೊಂಡರೆ ನನ್ನ ದೇಶದಲ್ಲಿ ಗುಲ್ಲುಗಳು ಹಬ್ಬಿ ಗಲ್ಲಿಗೇರುವ ಪ್ರಸಂಗಗಳು ಎದುರಾಗಬಹುದು. ಪ್ರತಿಷ್ಠಿತ ವ್ಯಕ್ತಿಯಾದ ಕಾರಣ ಹಗರಣಗಳಲ್ಲಿ ಸಿಲುಕುವ ಇಚ್ಛೆ ನನಗಿಲ್ಲ. ನೀವು ಈ ಬಗ್ಗೆ ಸಹಕಾರ ನೀಡಿದಲ್ಲಿ ನನ್ನ ಮಾನ ಉಳಿಯುವುದರ ಜೊತೆಗೆ ನಿಮಗೊಂದಷ್ಟು ಹಣ ಅನಾಯಾಸವಾಗಿ ಹರಿದುಬರಲಿದೆ. ನೀವು ಮಾಡಬೇಕಾದುದಿಷ್ಟೇ. ನಿಮ್ಮ ಬ್ಯಾಂಕ್‌ ಖಾತೆಯ ವಿವರಗಳೊಂದಿಗೆ, ನಿಮ್ಮ ಖಾತೆಯಲ್ಲಿ ನಾವು ವಹಿವಾಟು ನಡೆಸಲು ಅನುಮತಿ ಪತ್ರ ಕಳುಹಿಸಿ ಕೊಡಿ'.

ಯಾರಿಗುಂಟು ಯಾರಿಗಿಲ್ಲ ಇಂಥ ಸುವರ್ಣಾವಕಾಶ ? ಇ-ಮೇಲ್‌ ಸ್ವೀಕರಿಸಿದ ಸಹಸ್ರಾರು ಅಮಾಯಕರು ಮುಗಿಬಿದ್ದು ಮಾರೋಲೆ ಕಳುಹಿಸಿದರು. ಕೆಲವೇ ದಿನಗಳಲ್ಲಿ ನೈಜೀರಿಯಾದ ಆಪದ್ಭಾಂದವರಿಂದ ಪುಟ್ಟ ವಿನಂತಿ ಬಂತು. 'ತೊಂದರೆಗಾಗಿ ಕ್ಷಮೆಯಿರಲಿ. ನೀವು ನೈಜೀರಿಯದ ಪ್ರಜೆಯಾಗಿರುವುದರಿಂದ ಹಣ ವರ್ಗಾವಣೆ ಮಾಡಲು ವಿದೇಶಿ ಕಂಪನಿಗಳು ಹಿಂದೆ-ಮುಂದೆ ನೋಡುತ್ತಿವೆ. ಒಂದಷ್ಟು ಡಾಲರ್‌ 'ಸೇವಾ ಶುಲ್ಕ' ನೀಡಿದರೆ ಖಂಡಿತಾ ಒಪ್ಪುತ್ತಾರೆ. ಜೊತೆಗೆ ಮಾಲಿಗೆ ನೀಡಬೇಕಾದ 'ತೆರಿಗೆ'ಯ ಬಾಬ್ತನ್ನು ಸದ್ಯಕ್ಕೆ ನೀವೇ ವಹಿಸಿಕೊಂಡರೆ ವಹಿವಾಟಿಗೆ ಅನುಕೂಲವಾಗುತ್ತದೆ'. ಮಿಲಿಯಗಟ್ಟಲೆ ಕೊಳ್ಳೆ ಹೊಡೆಯಬಹುದೆಂಬ ನಿರೀಕ್ಷೆಯಲ್ಲಿ ಸುಮಾರು 2,600'ಅದೃಷ್ಟವಂತರು', ಈ ಷರತ್ತುಗಳನ್ನು ಸಂತೋಷದಿಂದ ಒಪ್ಪಿಕೊಂಡರು. ಅವರ ಬ್ಯಾಂಕ್‌ ಖಾತೆಯಿಂದ ಹಣ ಕರಗುತ್ತಾ ಬಂತು.

ನಮ್ಮ ನೆರೆಯ ಆಂಧ್ರದಲ್ಲಿ ಮೂರು ವರ್ಷಗಳ ಹಿಂದೆಯೇ ಇ-ಮೇಲ್‌ ಬಳಸಿ ಹೇಗೆ ವಂಚನೆ ಮಾಡಬಹುದೆಂಬುದನ್ನು ಕೋಲ ಕೃಷ್ಣ ಮೋಹನ ರಾವ್‌ ಎಂಬಾತ ತೋರಿಸಿದ್ದಾನೆ. ಸುಳ್ಳು ಇ-ಮೇಲ್‌ ಒಂದನ್ನು ಸೃಷ್ಟಿಸಿ ಸುಮಾರು ನಲವತ್ತು ಅಮಾಯಕರೂ ಸೇರಿದಂತೆ ಹಲವಾರು ಬ್ಯಾಂಕುಗಳಿಗೆ 'ಟೊಪ್ಪಿಗೆ' ಹಾಕಿದ ವಿಜಯವಾಡದ ಕೃಷ್ಣನ ಕಥೆ ಸ್ವಾರಸ್ಯಕರವಾಗಿದೆ.

ಕ್ರಿಕೆಟ್‌ ಹಾಗೂ ಚುನಾವಣೆ ಫಲಿತಾಂಶಗಳ ಬಗ್ಗೆ ಬಾಜಿ ಕಟ್ಟುವ ಹವ್ಯಾಸವಿದ್ದ ಕೃಷ್ಣ ಒಂದೆರಡು ಕೋಟಿ ರುಪಾಯಿಗಳನ್ನು ಕಳೆದು ಕೊಂಡಿದ್ದ. ತನ್ನ ಈ ನಷ್ಟ ಸರಿದೂಗಿಸಿಕೊಳ್ಳಲು ಕೃಷ್ಣನಿಗೆ ಹೊಳೆದದ್ದು 'ಯುರೋಲಾಟರಿ'. ಪಾಶ್ಚಿಮಾತ್ಯ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಲಾಟರಿಯಲ್ಲಿ ಜಗತ್ತಿನ ಯಾವುದೇ ವ್ಯಕ್ತಿ ಭಾಗವಹಿಸಬಹುದು. ಟಿಕೆಟ್‌ಗಳನ್ನು ಇಂಟರ್‌ನೆಟ್‌ ಮೂಲಕವೂ ಖರೀದಿಸಬಹುದು. ಇಂಥ ಲಾಟರಿ ಸ್ಪರ್ಧೆಯಾಂದರಲ್ಲಿ ತನಗೆ ಬಹುಮಾನ ಬಂದಿದೆಯೆಂಬ ಸುದ್ದಿ ದೇಶಾದ್ಯಂತ ಹರಡುವಂತೆ ಕೃಷ್ಣ ನೋಡಿಕೊಂಡ. ಸುದ್ದಿ ನಂಬಿದ ಜನರು ಮುಂದೆಂದಾದರೂ ತಮಗೆ 'ಕೋಟ್ಯಾಧಿಪತಿ'ಯಿಂದ ಅನುಕೂಲವಾಗಬಹುದೆಂಬ ನಿರೀಕ್ಷೆಯಲ್ಲಿ, ಹಣ ನೀಡಿದರು. ಮೋಸ ಹೋಗಿದ್ದು ಗೊತ್ತಾದ ಮೇಲೆ ಕೃಷ್ಣನ ವಿರುದ್ಧ ಪೊಲೀಸರ ಮೊರೆಹೊಕ್ಕರು.

ಹಿಂದೆ ಉಚಿತವಾಗಿ ಇ-ಮೇಲ್‌ ಸೇವೆ ನೀಡುತ್ತಿದ್ದ ಜನಪ್ರಿಯ ವೆಬ್‌ಸೈಟ್‌ www.usa.net. ಇದೀಗ ಇಂಥ ಸೇವೆಗೆ ವೆಬ್‌ಸೈಟ್‌ ಸೇವಾಶುಲ್ಕ ಪಡೆಯುತ್ತಿದೆ. ಜಗತ್ತಿನ ಯಾವ ಮೂಲೆಯಿಂದಲಾದರೂ ನಿಮ್ಮ ಹೆಸರು @www.usa.net ಎಂಬ ಇ-ಮೇಲ್‌ ವಿಳಾಸವನ್ನು ಯಾರು ಬೇಕಾದರೂ ಪಡೆಯಬಹುದು. ಇಂಥ ಸೌಕರ್ಯ ನೀಡುವ www.hotmail.com, www.yahoo.com ಮುಂತಾದ ಸೈಟುಗಳು ಜನಪ್ರಿಯವಾಗಿವೆ.

ಕಳ್ಳ ಕೃಷ್ಣ [email protected] ಎಂಬ ಇ-ಮೇಲ್‌ ವಿಳಾಸವೊಂದನ್ನು ಆ ವೆಬ್‌ ಸೈಟಿನಲ್ಲಿ ಸೃಷ್ಟಿಸಿದ. ಆ ವಿಳಾಸದಿಂದ ತನ್ನ ವಿಳಾಸಕ್ಕೆ ಒಂದು 'ಬುರುಡೆ' ಇ-ಮೇಲ್‌ ಒಂದನ್ನು ರವಾನಿಸಿದ. ಆ ಪತ್ರದಲ್ಲಿ 'ಅಭಿನಂದನೆಗಳು. ವಿಜಯವಾಡದ ಕೋಲ ಕೃಷ್ಣ ಮೋಹನ ರಾವ್‌ ಎಂಬ ಹೆಸರಿನ ನಿಮಗೆ ನಮ್ಮ ಪ್ರತಿಷ್ಠಿತ 'ಯುರೋಲಾಟರಿ'ಯಲ್ಲಿ ನೂರೈವತ್ತು ಲಕ್ಷ ಪೌಂಡ್‌ ಮೌಲ್ಯದ ಬಹುಮಾನ ಬಂದಿದೆ' ಎಂದು ತಾನೇ ಬರೆದುಕೊಂಡ. ಸ್ಥಳೀಯ ತೆಲುಗು ಪತ್ರಿಕೆಯಾಂದಕ್ಕೆ 'ಸ್ಕೂಪ್‌' ವರದಿಯೆಂದು ಈ ವಿಷಯ ತಿಳಿಸಿದಾಗ, ಆ ಪತ್ರಿಕೆಯವರು ನೇರವಾಗಿ [email protected] ವಿಳಾಸಕ್ಕೆ ಒಂದು ಇ-ಮೇಲ್‌ ಕಳುಹಿಸಿ ಈ ಸುದ್ದಿಯ ಬಗ್ಗೆ ದೃಢೀಕರಣ ಕೇಳಿದರು. ಒಡನೆಯೇ ಬಂದ ಮಾರುತ್ತರ 'ಈ ಸುದ್ದಿ ನಿಜ'.

ಅದನ್ನೂ ಕೃಷ್ಣನೇ ಕಳುಹಿಸಿದ್ದೆಂದು ಪತ್ರಿಕೆಯವರಿಗೆ ಗೊತ್ತಾಗಲಿಲ್ಲ. www.usa.net. ಎಂಬುದು ಉಚಿತವಾಗಿ ಇ-ಮೇಲ್‌ ನೀಡುವ ಸೈಟೆಂಬುದು ಬಹುತೇಕ ಜನರಿಗೆ ಗೊತ್ತಿರಲಿಲ್ಲ. ಪತ್ರಿಕೆ ಮುಖಪುಟದಲ್ಲಿ ಒಂದು ಸಚಿತ್ರ ವರದಿಯನ್ನು ಆ ತೆಲುಗು ಪತ್ರಿಕೆ ಪ್ರಕಟಿಸಿದ್ದೇ ತಡ, ಇಂಗ್ಲೀಷ್‌ ಪತ್ರಿಕೆಗಳು, ಟೀವಿ ಛಾನಲ್‌ಗಳ ದಂಡೇ ಕೃಷ್ಣನ ಮನೆಗೆ ದೌಡಾಯಿಸಿದವು. (ಪೊಲೀಸರ ಅತಿಥಿಯಾದ ಮೇಲೆ ಅವನೇ ಬಾಯ್ಬಿಟ್ಟಂತೆ 'ಯಾರೊಬ್ಬರೂ ಬಹುಮಾನ ಬಂದಿದ್ದಕ್ಕೆ ಇ-ಮೇಲ್‌ ಬಿಟ್ಟು ಬೇರೆ ಪುರಾವೆ ಕೇಳಲೇ ಇಲ್ಲ' ಎಂಬ ಸಂಗತಿ ಬಹಿರಂಗ ಪಡಿಸಿದ).

ಸಾಕಷ್ಟು ಪ್ರಚಾರ ಗಿಟ್ಟಿಸಿದ ಕೃಷ್ಣನನ್ನು ಅರಸುತ್ತಾ ಬಂದವರಿಗೆ ಇನ್ನಾರು ತಿಂಗಳಲ್ಲಿ ಹಣ ಬರುವುದೆಂದು ಹೇಳಿದ. ಹಣ ತರಲು ಇಂಗ್ಲೆಂಡಿಗೆ ಹೋಗಿ ಬರುವುದಾಗಿ ತಿಳಿಸಿದ. ಕೋಟ್ಯಾಧಿಪತಿಯ ಹಾಗೆ ತೋರಿಸಿಕೊಳ್ಳಲು ಕಾರು, ಬಂಗಲೆಗಾಗಿ ಅಮಾಯಕ ಸಾಹುಕಾರರು, ಬ್ಯಾಂಕುಗಳು ಹಣಕೊಟ್ಟವು. ಏತನ್ಮಧ್ಯೆ ಇಂಗ್ಲೆಂಡಿನ ನ್ಯೂ ಮಿಡ್‌ಲ್ಯಾಂಡ್‌ ಬ್ಯಾಂಕಿನಿಂದ ಬಂದಂತೆ ಒಂದು ಪತ್ರವನ್ನು ಸೃಷ್ಟಿಸಿದ. ಮುಂದಿನ ಆರು ತಿಂಗಳಲ್ಲಿ ಆತನ ಖಾತೆಗೆ ಲಾಟರಿ ಹಣ ಜಮೆಯಾಗುತ್ತದೆಯೆಂದು ಅದರಲ್ಲಿ ಬರೆಯಲಾಗಿತ್ತು.

ಇವನ ಸ್ನೇಹಕ್ಕೆ ರಾಜಕೀಯ ಪಕ್ಷಗಳೂ ಹಾತೊರೆಯಲಾರಂಬಿಸಿದವು. ತೆಲುಗು ದೇಶಂ ಪಕ್ಷಕ್ಕೆ ಹತ್ತು ಲಕ್ಷ ರು.ಗಳ ದೇಣಿಗೆಯನ್ನೂ ನೀಡಿ, ಮಚಲೀ ಪಟ್ಟಣ ಲೋಕಸಭಾ ಸ್ಥಾನಕ್ಕೆ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದ. ಆರು ತಿಂಗಳಲ್ಲಿ ಅವನ ಬಣ್ಣ ಬಯಲಾಯಿತು. ಹಣ ಕಳೆದುಕೊಂಡವರೆಲ್ಲ ಬೆನ್ನು ಹತ್ತಲಾರಂಬಿಸಿದರು. ಕಡೆಗೂ ಕೃಷ್ಣ ತನ್ನ ಜನ್ಮ ಸ್ಥಾನಕ್ಕೆ ತೆರಳಿದ.

ಅಮೆರಿಕದ ಬೇಹುಗಾರಿಕಾ ಸಂಸ್ಥೆ ಫೆಡರಲ್‌ ಬ್ಯೂರೋ ಆಫ್‌ ಇನ್‌ವೆಸ್ಟಿಗೇಶನ್‌ (ಎಫ್‌.ಬಿ.ಐ) ಇಂಟರ್‌ನೆಟ್‌ ಹಗರಣಗಳನ್ನು ಹದ್ದುಗಣ್ಣಿನಿಂದ ಪರಿಶೀಲಿಸುತ್ತಿದೆ. ಅದರ ಅಂಗಸಂಸ್ಥೆ 'ನ್ಯಾಷನಲ್‌ ವೈಟ್‌ ಕಾಲರ್‌ ಕ್ರೈಮ್‌ ಸೆಂಟರ್‌' ಸಮೀಕ್ಷೆಯ ಪ್ರಕಾರ ಇಂಟರ್‌ನೆಟ್‌ ಮೋಸಕ್ಕೆ ಬಲಿಯಾಗುವವರಲ್ಲಿ ಹತ್ತು ವರ್ಷದ ಹಸುಳೆಯಿಂದ ಹಿಡಿದು ನೂರು ವರ್ಷದ ಮುದುಕರೂ ಸೇರಿದ್ದಾರೆ. ಇವರಲ್ಲಿ ಗಂಡಸರೇ ಹೆಚ್ಚು ಮತ್ತವರ ಸರಾಸರಿ ವಯಸ್ಸು ನಲವತ್ತು. ಐದು ಸಹಸ್ರ ಡಾಲರ್‌ಗಳಿಗೂ ಹೆಚ್ಚು ಹಣ ಕಳೆದುಕೊಂಡವರಲ್ಲಿ ಅರವತ್ತರ ಅರಳುಮರಳಿನವರದೇ ಸಿಂಹಪಾಲು.

ಆನ್‌ಲೈನ್‌ ವಹಿವಾಟಿನ ಬಗ್ಗೆ ವ್ಯಾಮೋಹವಿರುವವರು ಇಂಥ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆನ್ನುತ್ತಾರೆ, ಎಫ್‌.ಬಿ.ಐ ನ 'ಬಿಳಿಕಾಲರ್‌' ಅಧಿಕಾರಿ ಥಾಮಸ್‌ ರಿಚರ್ಡ್‌ಸನ್‌. ವಾರವೊಂದಕ್ಕೆ ಒಂದು ಸಹಸ್ರ ದೂರುಗಳನ್ನು ಪರಿಶೀಲಿಸುತ್ತಿರುವ ಈತನ ಪ್ರಕಾರ, ದಿನವೊಂದಕ್ಕೇ ಇಷ್ಟು ಹಗರಣಗಳು ಅಮೇರಿಕದಲ್ಲಿ ನಡೆಯುತ್ತಿರಬಹುದು. ಮಾನಕ್ಕಂಜಿ ಟೋಪಿ ಹಾಕಿಸಿಕೊಂಡ ಎಲ್ಲರೂ ಪೊಲೀಸರಿಗೆ ದೂರು ಕೊಡುವುದಿಲ್ಲ.

(15, ಏಪ್ರಿಲ್‌ 2002ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ)

English summary
Haldodderi Sudhindra writes about the cyber crime in the name of E- business
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X