ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಕೃಪಾಂಕದ ಗುಮ್ಮನ ಕಾಟಕ್ಕೆ ಸಿಕ್ಕಿದ ಜಾಣ ಪೊಲೀಸನ ವ್ಯಥೆ

By Staff
|
Google Oneindia Kannada News

ಗ್ರಾಮೀಣ ಕೃಪಾಂಕದ ಗುಮ್ಮನ ಕಾಟಕ್ಕೆ ಸಿಕ್ಕಿದ ಜಾಣ ಪೊಲೀಸನ ವ್ಯಥೆ
ಚೆನ್ನಾಗಿ ಓದುತ್ತಿದ್ದ ಬಸವನಗೌಂಡರ್‌ಗೆ ಇಷ್ಟಪಟ್ಟ ಇನ್ಸ್‌ಪೆಕ್ಟರ್‌ಗಿರಿಯೇ ಕೈಕೊಟ್ಟಿತೆ?

ಜುಲೈ 17ನೇ ತಾರೀಕು ಬೆಳಗ್ಗೆ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಅವರಿಗೆ ಸೆಲ್ಯೂಟ್‌ ಹೊಡೆದಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ಶಂಕರಗೌಡ ಬಸವನಗೌಂಡರ್‌ ಸಂಜೆ ಕೆಲಸ ಕಳಕೊಂಡರು. ಗ್ರಾಮೀಣ ಕೃಪಾಂಕ ಆಧರಿಸಿ ಅವರು ಆಯ್ಕೆ ಮಾಡಿಕೊಂಡಿದ್ದ ಕೆಲಸ ಕೈಕೊಟ್ಟಿತು.

ಶಂಕರಗೌಡ ಬಸವನಗೌಂಡರ್‌ಗೆ ಈಗ 32 ವಯಸ್ಸು. ಪೊಲೀಸ್‌ ಇನ್ಸ್‌ಪೆಕ್ಟರಾಗಿ 5 ವರ್ಷ ಸರ್ವಿಸ್ಸಾಗಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ನೇಶ್ವಿ ಎಂಬ ಹಳ್ಳಿಯವರಾದ ಈತ ಬಿ.ಎಡ್‌ ಓದಿ, ಸಿವಿಕ್ಸ್‌ ಎಂ.ಎ.ನಲ್ಲಿ ಮೊದಲ ರ್ಯಾಂಕ್‌ ಪಡೆದು ಎಂ.ಫಿಲ್‌ ಕೂಡ ಮಾಡಿದ್ದಾರೆ.

ಮೆಚ್ಚಿ ಹೆಕ್ಕಿಕೊಂಡ ವೃತ್ತಿಯೇ ಮುಳುವಾಯಿತೆ?
1998ರಲ್ಲಿ ಶಂಕರಗೌಡರಿಗೆ ಸರ್ಕಾರಿ ಪ್ರೌಢಶಾಲೆ ಮಾಸ್ತರ ಕೆಲಸ ಸಿಕ್ಕಿತು. ಚಿಕ್ಕೋಡಿ ತಾಲ್ಲೂಕಿನ ಸಾದಳಗ ಹಳ್ಳಿಯ ಪ್ರೌಢಶಾಲೆಯಲ್ಲಿ 8 ತಿಂಗಳು ಕೆಲಸ ಮಾಡಿದರು. ಡಿಸೆಂಬರ್‌ 1998ರಲ್ಲಿ ಗ್ರಾಮೀಣ ಕೃಪಾಂಕ ಆಧಾರದ ಮೇಲೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಕೆಲಸ ಸಿಕ್ಕಿತು. ಹಿರಿಯೂರು, ಚಿತ್ರದುರ್ಗ ಮೊದಲಾದ ಕಡೆ ಕೆಲಸ ಮಾಡಿದ ಈತನನ್ನು ಜೂನ್‌ 26ನೇ ತಾರೀಕು ಬೆಂಗಳೂರಿನ ಎಕ್ಸ್‌ಟೆಂಷನ್‌ ಪೊಲೀಸ್‌ ಠಾಣೆಗೆ ವರ್ಗಾಯಿಸಿದರು. ಅಲ್ಲಿ 21 ದಿನ ಕೆಲಸ ಮಾಡುವಷ್ಟರಲ್ಲಿ ಕೆಲಸವೇ ಗೋವಿಂದ !

ಶಂಕರಗೌಡ ಬಸವನಗೌಂಡರ್‌ ಈಗ ನಿರುದ್ಯೋಗಿ. ಕೆಪಿಎಸ್‌ಸಿ ಪೂರ್ವ ಪರೀಕ್ಷೆಯಲ್ಲಿ ಪಾಸಾಗಿದ್ದ ಈತ ಕೆಎಸ್‌ಎಸ್‌ ಅಧಿಕಾರಿಯಾಗುವ ಕನಸು ಇಟ್ಟುಕೊಂಡಿದ್ದರು. ಆದರೆ ಇನ್ಸ್‌ಪೆಕ್ಟರ್‌ ಕೆಲಸ ಸಿಕ್ಕ ನಂತರ ಗುರಿಯ ದಿಕ್ಕು ಬದಲಾಯಿತು. ಇಲಾಖೆಯಲ್ಲಿ ಒಳ್ಳೆಯ ಹೆಸರು ಪಡೆದಿರುವ ಈತನಿಗೆ ಬಲು ಬೇಗ ಬಡ್ತಿ ಸಿಗುವ ಸಾಧ್ಯತೆಯೂ ಇತ್ತು. ಆದರೀಗ ಬಸವನಗೌಂಡರ್‌ ಗೋಳೋ ಎನ್ನುತ್ತಾರೆ. ಕೆಎಎಸ್‌ ಬರೆಯಲು ಅವರ ವಯಸ್ಸು ಮೀರಿ ಹೋಗಿರುವುದಕ್ಕೆ ಬೇಸರ ಪಟ್ಟುಕೊಳ್ಳುತ್ತಾರೆ. ಹುಡುಕಿಕೊಂಡು ಬಂದಿದ್ದ ಸರ್ಕಾರಿ ಫ್ರೌಡಶಾಲೆ ಮೇಷ್ಟರ ಕೆಲಸವೇ ವಾಸಿಯಾಗಿತ್ತೇನೋ ಎಂದು ಹಲುಬುತ್ತಾರೆ.

ಗ್ರಾಮೀಣ ಕೃಪಾಂಕದ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಂಡಿದ್ದ ಅನೇಕ ಪೊಲೀಸರಿಗೆ ಕೆಲಸ ಕಳೆದುಕೊಳ್ಳುವ ಮುಂಚೆಯೇ ಹೊಡೆತ ಬಿದ್ದಿತ್ತು. ಪೊಲೀಸ್‌ ಇಲಾಖೆಯ ಮಾಹಿತಿ ಪ್ರಕಾರ ಒಂದು ಡಜನ್ನು ಪೊಲೀಸರಿಗೆ ಗೊತ್ತಾಗಿದ್ದ ಮದುವೆಗಳು ಮುರಿದುಬಿದ್ದಿವೆ !

ಮಧ್ಯಮ ವಯಸ್ಸಿನ ಪ್ರವೇಶ ದ್ವಾರದಲ್ಲಿ ನಿಂತಿರುವ ಈ ರೀತಿಯ ಅನೇಕ ‘ಸರ್ಕಾರಿ ನಿರುದ್ಯೋಗಿ’ಗಳದ್ದು ಈಗ ತ್ರಿಶಂಕು ಸ್ಥಿತಿಯಾಗಿದೆ. ಮತ್ತೆ ಯಾವಾಗ ಸರ್ಕಾರ ಕೆಲಸಕ್ಕೆ ಕರೆಯುತ್ತದೆ ಎಂದು ಇವರೆಲ್ಲ ಕಾದುನೋಡುತ್ತಿದ್ದಾರೆ.

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X