ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರೋಡ್‌ನಿಂದ ಬಂದಿದ್ದ 33 ಸಾವಿರ ಲೀ. ಕಳಪೆ ಹಾಲು ಚರಂಡಿಗೆ

By Staff
|
Google Oneindia Kannada News

ಈರೋಡ್‌ನಿಂದ ಬಂದಿದ್ದ 33 ಸಾವಿರ ಲೀ. ಕಳಪೆ ಹಾಲು ಚರಂಡಿಗೆ
ವಿಧಾನಸಭೆಯಲ್ಲಿ ಲಾಕಪ್‌ ಡೆತ್‌ ಪ್ರಕರಣಗಳ ಕಾವು

ಬೆಂಗಳೂರು : ಈರೋಡ್‌ನಿಂದ ನಗರಕ್ಕೆ ಸರಬರಾಜಾಗಿದ್ದ 33 ಸಾವಿರ ಲೀಟರ್‌ ರಾಸಾಯನಿಕ ಮಿಶ್ರಿತ ಹಾಲನ್ನು ಉಪಯೋಗಿಸದೆ ಚೆಲ್ಲಿದ್ದೇವೆ ಎಂದು ಪಶು ಸಂಗೋಪನೆ ಮತ್ತು ಸಕ್ಕರೆ ಸಚಿವ ಎಂ.ಮಹದೇವ್‌ ಗುರುವಾರ (ಜು.17) ವಿಧಾನಸಭೆಯಲ್ಲಿ ಪ್ರಶ್ನೆಯಾಂದಕ್ಕೆ ಉತ್ತರಿಸುತ್ತ ಹೇಳಿದರು.

ಬಿಜೆಪಿಯ ಕೆ.ಎನ್‌.ಸುಬ್ಬಾರೆಡ್ಡಿ ಪ್ರಶ್ನೋತ್ತರ ವೇಳೆಯಲ್ಲಿ ಈರೋಡ್‌ನಿಂದ ಬರುತ್ತಿರುವ ರಾಸಾಯನಿಕ ಮಿಶ್ರಿತ ಹಾಲನ್ನು ಮಾರುವ ವಿಷಯದಲ್ಲಿ ತಗಾದೆ ತೆಗೆದರು. ಅದಕ್ಕೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ಕೊಟ್ಟ ಮಹದೇವ್‌- ಈರೋಡ್‌ನಿಂದ ಬರುತ್ತಿರುವ ಹಾಲನ್ನು ಪರೀಕ್ಷಿಸಲು ಪರಿಣತರ ಸಮಿತಿಯಾಂದನ್ನು ರಚಿಸಿದ್ದೇವೆ. ಹಾಲನ್ನು ಪರೀಕ್ಷಿಸಲು ವಿಶೇಷ ಪ್ರಯೋಗಾಲಯವನ್ನೂ ಸ್ಥಾಪಿಸಲಾಗಿದೆ. ಹೊರಗಿನಿಂದ ಬರುವ ಹಾಲಿನ ಗುಣಮಟ್ಟ ಪರೀಕ್ಷಿಸದೆ ಮಾರುವುದಿಲ್ಲ. ಈರೋಡ್‌ನಿಂದ ಬಂದ ಹಾಲಲ್ಲಿ ರಾಸಾಯನಿಕ ಬೆರೆತಿದೆ ಎಂಬ ಆರೋಪ ಎದ್ದಿತ್ತು. ಪರೀಕ್ಷಿಸಿದ ನಂತರ ಅದು ಪತ್ತೆಯಾಯಿತು. ಕಳಪೆ ಗುಣಮಟ್ಟದ 33 ಸಾವಿರ ಲೀಟರ್‌ ಹಾಲನ್ನು ಈಗಾಗಲೇ ಉಪಯೋಗಿಸದೆ ಚೆಲ್ಲಿದ್ದೇವೆ ಎಂದರು.

ಈರೋಡ್‌ನಿಂದ ಹಾಲು ತರಿಸುವುದನ್ನೇ ನಿಲ್ಲಿಸಬೇಕು ಎಂದು ಸುಬ್ಬಾರೆಡ್ಡಿ ಜೊತೆಗೆ ಕಟ್ಟಾ ಸುಬ್ರಮಣ್ಯಂ ನಾಯ್ಡು ಕೂಡ ಆಗ್ರಹಿಸಿದರು. ಅಖಿಲ ಭಾರತ ಪ್ರಗತಿಪರ ಜನತಾ ದಳದ ಬಿ.ಎನ್‌.ಬಚ್ಚೇಗೌಡ ಕೂಡ ದನಿ ಸೇರಿಸಿದರು. ಇವರ ಆಗ್ರಹಕ್ಕೆ ಸಚಿವರು ಸೊಪ್ಪು ಹಾಕಲಿಲ್ಲ.

ಲಾಕಪ್‌ ಡೆತ್‌ ವಿಷಯಕ್ಕೆ ಗಲಾಟೆ : ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಆಗಿರುವ ಲಾಕಪ್‌ ಸಾವಿನ ಬಗ್ಗೆ ಪೂರ್ಣ ಮಾಹಿತಿ ಬೇಕು ಎಂದು ಅಖಿಲ ಭಾರತ ಪ್ರಗತಿಪರ ಜನತಾದಳದ ಬಿ.ಸೋಮಶೇಖರ್‌ ಪ್ರಶ್ನೆ ಎತ್ತಿದರು. ಬೆಂಗಳೂರಲ್ಲಿ ಬುಧವಾರ (ಜು.16) ಆದ ಇನ್ನೊಂದು ಲಾಕಪ್‌ ಸಾವಿಗೂ ವಿವರಣೆ ಕೇಳಿದರು. ಪಾವಗಡದಲ್ಲಿ ಏನು ನಡೆಯಿತು ಎಂದು ತಾವು ವಿವರಿಸುವುದಾಗಿ ಆ ಕ್ಷೇತ್ರದ ಶಾಸಕ ವೆಂಕಟರಮಣಪ್ಪ ಮುಂದಾದರು.

ಅದಕ್ಕೆ ಒಪ್ಪದ ವಿರೋಧ ಪಕ್ಷದ ನಾಯಕರು ಸರ್ಕಾರ ಉತ್ತರ ಕೊಡುವ ಮುನ್ನ ವೆಂಕಟರಮಣಪ್ಪ ವಿವರಣೆ ಕೊಡುವುದು ಬೇಡ ಎಂದು ಪಟ್ಟು ಹಿಡಿದರು. ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮಧ್ಯೆ ಬಾಯಿಹಾಕಿ ವೆಂಕಟರಮಣಪ್ಪನವರಿಗೆ ಮಾತನಾಡಲು ಬಿಡಿ ಎಂದಾಗ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ವಿರೋಧ ಪಕ್ಷದವರು ಅದಕ್ಕೆ ಒಪ್ಪಿಗೆ ಕೊಡಲಿಲ್ಲ. ಕೊನೆಗೆ, ಶುಕ್ರವಾರ (ಜು.18) ಈ ಪ್ರಶ್ನೆಗೆ ಉತ್ತರ ಕೊಡುವುದಾಗಿ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X