ನಾರಾಯಣ ಹೃದಯಾಲಯದಲ್ಲಿ ಪಾಕ್‌- ಭಾರತ ಫಂಡು !

ನಾರಾಯಣ ಹೃದಯಾಲಯದಲ್ಲಿ ಪಾಕ್‌- ಭಾರತ ಫಂಡು !
ಪಾಕಿಸ್ತಾನದ ಹಾಗೂ ಭಾರತೀಯ ಬಡ ರೋಗಿಗಳಿಗೆ ನೆರವಾಗಲು ಈಗ 1.5 ಲಕ್ಷ ರುಪಾಯಿಯ ತಲಾ ಒಂದೊಂದು ಫಂಡು ನಾರಾಯಣ ಹೃದಯಾಲಯದಲ್ಲಿ ರಚಿತವಾಗಿದೆ.

ಬೆಂಗಳೂರು : ಪಾಕ್‌ ಪುಟಾಣಿ ಫಾತಿಮಾ ಹೃದಯ ಶಸ್ತ್ರಚಿಕಿತ್ಸೆ ಭಾರೀ ಸುದ್ದಿಯಾದದ್ದು, ಭಾರತ ಮತ್ತು ಪಾಕಿಸ್ತಾನದ ಅಗತ್ಯವಿರುವ ರೋಗಿಗಳಿಗೆ ನೆರವಾಗಲು ಎರಡು ಒಳ್ಳೆಯ ಮೊತ್ತದ ಫಂಡುಗಳು ರೂಪುಗೊಳ್ಳಲು ಕಾರಣವಾಗಿದೆ.

ಪಾಕಿಸ್ತಾನ ಮತ್ತು ಭಾರತೀಯ ರೋಗಿಗಳಿಗೆ ನೆರವಾಗಲು ತಲಾ 1 ಲಕ್ಷ 50 ಸಾವಿರ ರುಪಾಯಿಯ ಎರಡು ಫಂಡುಗಳು ನಗರದ ನಾರಾಯಣ ಹೃದಯಾಲಯದಲ್ಲಿ ರೂಪುಗೊಂಡಿವೆ. ಇದಕ್ಕೆ ಕಾರಣ- ತನ್ನ ಹೆಸರನ್ನು ಎಲ್ಲೂ ಹೇಳಬೇಡಿ ಎಂಬ ಷರತ್ತನ್ನು ಹಾಕಿ ನೂರ್‌ ಫಾತಿಮಾ ಶಸ್ತ್ರಚಿಕಿತ್ಸೆಗೆ 1 ಲಕ್ಷ 40 ಸಾವಿರ ರುಪಾಯಿ ಕೊಟ್ಟ ಒಬ್ಬ ಮಹಾನುಭಾವ.

ನೂರ್‌ ಫಾತಿಮಾ ಶಸ್ತ್ರಚಿಕಿತ್ಸೆಗೆ ಹಣ ಕೊಟ್ಟಿದ್ದು ರೋಟರಿ ಕ್ಲಬ್‌ನ ಒಬ್ಬ ಸದಸ್ಯ. ಆತ ಹಣ ಕೊಡುವ ಹೊತ್ತಿಗೆ ನೂರ್‌ಳ ತಂದೆ ನದೀಮ್‌ ಸಜ್ಜದ್‌ ಆಸ್ಪತ್ರೆಗೆ ಹಣ ಕಟ್ಟಿದ್ದರು. ಹೀಗಾಗಿ ದಾನದ ಹಣವನ್ನು ಒಂದು ಫಂಡಾಗಿ ಇಟ್ಟು, ದುಡ್ಡಿನ ತೊಂದರೆಯಿರುವ ಭಾರತೀಯರ ಚಿಕಿತ್ಸೆಗೆ ಉಪಯೋಗಿಸಿಕೊಳ್ಳುವಂತೆ ಸಜ್ಜದ್‌ ಸಲಹೆ ಕೊಟ್ಟರು.

ಅಷ್ಟೇ ಅಲ್ಲ, ಪಾಕಿಸ್ತಾನದಿಂದ ಬರುವ ಅಗತ್ಯವಿರುವ ರೋಗಿಗಳಿಗೆ ನೆರವು ಕೊಡಲು ಒಂದು ಫಂಡನ್ನು ರಚಿಸಬೇಕೆಂಬ ಸಲಹೆ ಕೊಟ್ಟ ಸಜ್ಜದ್‌, ಅದಕ್ಕಾಗಿ 50 ಸಾವಿರ ರುಪಾಯಿ ದಾನ ಕೊಡುವುದಾಗಿ ಹೇಳಿದರು. ನೂರ್‌ ಚಿಕಿತ್ಸೆಗೆಂದು ದಾನದ ರೂಪದಲ್ಲಿ ಬರುತ್ತಿರುವ ಇನ್ನಷ್ಟು ಹಣ ಹಾಗೂ ರೋಟರಿ ಕ್ಲಬ್‌ನ ಸಹಾಯದ ಹಣ- ಎಲ್ಲ ಸೇರಿಸಿ ಪಾಕಿಸ್ತಾನದ ರೋಗಿಗಳಿಗಾಗಿಯೇ 1.50 ಲಕ್ಷ ರುಪಾಯಿಯ ಇನ್ನೊಂದು ಫಂಡು ರಚಿಸಲಾಯಿತು.

ನೂರ್‌ ಚಿಕಿತ್ಸೆಗೆಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮಂಗಳವಾರ (ಜು.15) 10 ಸಾವಿರ ರುಪಾಯಿ ಕೊಟ್ಟಿದ್ದರು. ಅದಾದ ನಂತರ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಕೂಡ 10 ಸಾವಿರ ರುಪಾಯಿ ನೆರವು ಕೊಟ್ಟರು.

ಲಾಹೋರ್‌ ಬಿಟ್ಟಾಗ, ಮಗುವಿನ ಆಪರೇಷನ್‌ದೇ ಯೋಚನೆಯಾಗಿತ್ತು. ಗೊತ್ತಿರದ ಊರಲ್ಲಿ ಹೇಗೆ ನಿಭಾಯಿಸುತ್ತೇವೋ ಏನೋ ಎಂಬ ಆತಂಕವಿತ್ತು. ಆದರೆ ಹರಿದುಬಂದ ಜನ ಬೆಂಬಲ ನೋಡಿ ನಾನು ಮೂಕಳಾಗಿದ್ದೇನೆ ಎಂದು ಫಾತಿಮಾ ತಾಯಿ ತಯ್ಯಬ ಕಣ್ತುಂಬಿಕೊಂಡರು.

ಒಂದು ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಅಸಾಮಾನ್ಯ ಪ್ರತಿಕ್ರಿಯೆ ಬಂದಿದೆ. ಈ ರೀತಿ ನೆರವಿನ ಮಹಾಪೂರವನ್ನು ನಾವು ನಿರೀಕ್ಷಿಸಿರಲಿಲ್ಲ. ಮಾನವೀಯತೆಗೆ ಯಾವ ಗಡಿಯೂ ಇರುವುದಿಲ್ಲ ಅನ್ನೋದು ಈ ರೀತಿ ಸಾಬೀತಾಗಿದೆ. ಮುಂದೆಯೂ ಅಗತ್ಯವಿರುವವರಿಗೆ ಗಡಿಯಾಚಿನವರು ಎಂಬ ಭೇದ ತೋರದೆ ಹೀಗೆಯೇ ಸಹಾಯ ಸಿಗುತ್ತದೆಂಬ ನಿರೀಕ್ಷೆ ಹುಟ್ಟಿದೆ ಎಂದು ನಾರಾಯಣ ಹೃದಯಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ದೇವೀ ಶೆಟ್ಟಿ ಸಂತೋಷದಿಂದ ಹೇಳಿದರು.

ಪಾಕಿಸ್ತಾನಕ್ಕೆ ವಾಪಸ್ಸಾದ ನಂತರ ನಾರಾಯಣ ಹೃದಯಾಲಯದಲ್ಲಿ ಬಡವರ ಚಿಕಿತ್ಸೆಗೆ ಅನುಕೂಲವಾಗುವಂತೆ ಇನ್ನಷ್ಟು ಫಂಡೆತ್ತುವುದಾಗಿ ಸಜ್ಜದ್‌ ಹೇಳಿದ್ದಾರೆ. ಗಡಿ ಭದ್ರತೆಯನ್ನು ಮಾನವೀಯತೆ ಮೀರಿದಾಗ ಹೊಮ್ಮುವ ಒಳ್ಳೆಯ ಫಲಿತಾಂಶವೆಂದರೆ ಇದೇ ಅಲ್ಲವೇ?

(ಇನ್ಫೋ ವಾರ್ತೆ)

Post your views

ವಾರ್ತಾ ಸಂಚಯ
ಚೇತರಿಸಿಕೊಳ್ಳುತ್ತಿರುವ ನೂರ್‌, ಕೊನೆಯುಸಿರೆಳದ ಬಾಬರ್‌
ಪಾಕ್‌ ಪುಟಾಣಿ ನೂರ್‌ ಫಾತಿಮಾಗೆ ಬೆಂಗಳೂರಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+