ಬರ ಭ್ರಷ್ಟಾಚಾರ : ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಧರಣಿ

ಬರ ಭ್ರಷ್ಟಾಚಾರ : ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಧರಣಿ
ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಿ ಗಲಾಟೆ

ಬೆಂಗಳೂರು : ಬರ ಪರಿಹಾರ ಕಾಮಗಾರಿಯಲ್ಲೂ ಕಾಂಗ್ರೆಸ್ಸಿಗರು ಉಂಡೆದ್ದಿದ್ದು, ಈ ವಿಷಯವಾಗಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ವಿರೋಧ ಪಕ್ಷಗಳು ಪಟ್ಟು ಹಿಡಿದು ಧರಣಿ ಕೂತರು. ಈ ಕಾರಣದಿಂದ ಗುರುವಾರ (ಜು.10) ವಿಧಾನಸಭೆಯ ಕಲಾಪದಲ್ಲಿ ಪದೇಪದೇ ಅಡಚಣೆ ಉಂಟಾಯಿತು.

ಬೆಳಗ್ಗೆ ಕಲಾಪ ಶುರುವಾಗುತ್ತಿದ್ದಂತೆ ವಿರೋಧ ಪಕ್ಷ ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ಬರ ಭ್ರಷ್ಟಾಚಾರದ ಕುರಿತು ದನಿಯೆತ್ತಿದರು. ಈ ವಿಷಯ ಗಂಭೀರ ಹಾಗೂ ಪ್ರಸ್ತುತ ಸಮಸ್ಯೆಯಾಗಿರುವುದರಿಂದ ಬೇಗ ಒಂದು ನಿರ್ಣಯಕ್ಕೆ ಬರಬೇಕು ಎಂಬುದು ಶೆಟ್ಟರ್‌ ಒತ್ತಾಯ. ಈ ಕಾರಣಕ್ಕೇ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ ಅವರ ಮುಂದೆ ಧರಣಿ ಕೂತರು.

ಅಖಿಲ ಭಾರತ ಪ್ರಗತಿಪರ ಜನತಾ ದಳದ ನಾಯಕ ಬಿ.ಸೋಮಶೇಖರ್‌, ಸಂಯುಕ್ತ ಜನತಾ ದಳದ ಪಿ.ಜಿ.ಆರ್‌.ಸಿಂಧ್ಯ ಕೂಡ ಶೆಟ್ಟರ್‌ ಆಗ್ರಹಕ್ಕೆ ದನಿಗೂಡಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ಶೆಟ್ಟರ್‌ ಹಾಗೂ ಸ್ನೇಹಿತರ ಆಗ್ರಹವನ್ನು ವಿರೋಧಿಸಿದಾಗ ಗದ್ದಲ ಜೋರಾಯಿತು. ಹೀಗಾಗಿ ಊಟಕ್ಕೆ ಮುಂಚೆ ಎರಡು ಬಾರಿ ಸದನದ ಕಲಾಪವನ್ನು ಮುಂದೂಡಲಾಯಿತು.

ನಿಯಮ 69ರ ಅಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಧ್ಯಕ್ಷ ವೆಂಕಟಪ್ಪ ಹೇಳಿದರೂ, ಅದಕ್ಕೆ ವಿರೋಧ ಪಕ್ಷದವರು ಸಮಾಧಾನಿತರಾಗಲಿಲ್ಲ. ಊಟದ ನಂತರ ಮತ್ತೆ ಕಲಾಪ ಶುರುವಾದಾಗ ಧರಣಿ ಮುಂದುವರೆಯಿತು. ನೀರು ಕೊಡದ ಸರ್ಕಾರ ಬೀರು ಕುಡಿಸುತ್ತಿದೆ, ಬರ ಪರಿಹಾರ ಕಾಮಗಾರಿಯಲ್ಲೂ ಭ್ರಷ್ಟಾಚಾರ ನಡೆದಿದೆ, ಅದರ ಬಗ್ಗೆ ಚರ್ಚೆಗೆ ಕೂರುವುದರಿಂದ ಸರ್ಕಾರ ನುಣುಚಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಕೂಗಿದರು. ಇದಕ್ಕೂ ಮಣಿಯದ ಸಭಾಧ್ಯಕ್ಷರು ನಿಯಮ 69ರ ಅಡಿ ಚರ್ಚೆ ಮಾಡುವಂತೆ ಪದೇಪದೇ ಮನವಿ ಮಾಡಿದರೂ ವಿರೋಧ ಪಕ್ಷದವರು ಜಗ್ಗಲಿಲ್ಲ. ಕಲಾಪ ಮತ್ತೆ ಮುಂದಕ್ಕೆ ಹೋಯಿತು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+