ಈ ‘ಮರ ಕಟುಕ’ ಮರದ ಕಾಂಡಕ್ಕೇ ಆಸಿಡ್‌ ಹಾಕಿದ

ಈ ‘ಮರ ಕಟುಕ’ ಮರದ ಕಾಂಡಕ್ಕೇ ಆಸಿಡ್‌ ಹಾಕಿದ
ಆಮ್ಲಜನಕ ನೀಡಿ ಮನುಕುಲವ ಪೊರೆವ ಸಸ್ಯ ಸಂಕುಲಕ್ಕೆ ನಾವು ನೀಡುವುದಾದರೂ ಏನು ? ಕೊಡಲಿ, ಗರಗಸ, ಮಚ್ಚು ... ಶಿವಶಿವಾ, ಈ ಮರ ಕಟುಕ ಬಳಸಿದ್ದು ಸುಡು ಸುಡು ‘ಆಮ್ಲ’ ! ನೀನಾರಿಗಾದೆಯಾ ಎಲೆ ಮಾನವ..?

*ದಟ್ಸ್‌ಕನ್ನಡ ಬ್ಯೂರೊ

ಹದಿನೈದು ವರ್ಷದಷ್ಟು ಹಳೆಯ ದೊಡ್ಡ ಮರಕ್ಕೆ ಆತ ಅಪ್ಪಿತಪ್ಪಿಯೂ ಒಂದು ದಿನವೂ ನೀರು ಹಾಕಿದವನಲ್ಲ . ಆದರೆ ಮರದ ಕಾಂಡಕ್ಕೆ ಪ್ರತಿದಿನಾ ಆಸಿಡ್‌ ತಂದು ಸುರಿಯುತ್ತಿದ್ದ. ಮರ ಎಂದು ಉರುಳೀತೋ ಅಂತ ಹಪಹಪಿಸುತ್ತಿದ್ದ. ಗಿಡ ನೆಟ್ಟು, ಹೂ- ಹಣ್ಣು- ಕಾಯಿಯ ಕನಸು ಕಾಣುವವರ ನಡುವೆ ಇವನೊಬ್ಬ ಅಪ್ಪಟ ಮರ ಕಟುಕ.

ಕಾಂಕ್ರೀಟ್‌ ನಗರಿ ಬೆಂಗಳೂರಿನ ಕೋರಮಂಗಲದ 80 ಅಡಿ ರಸ್ತೆಯ ಫುಡ್‌ವರ್ಲ್ಡ್‌ನ ಎದುರಿಗೆ ಆಸಿಡ್‌ ಹಾಕಿಸಿಕೊಂಡು ಕರುಕಲಾಗುತ್ತ, ಸೊರಗುತ್ತಿದೆ ಮರ. ಅದರ ಬೆನ್ನಿಗೇ ಆಸಿಡ್‌ ಸುರಿದಾತನ ಮನೆ.

Dont massacre the tress, you wont get rainಮರದ ಟೊಂಗೆಗಳು ತನ್ನ ಮನೆಯಂಚಿಗೆ ತಾಕುತ್ತವೆ ಎಂಬ ಕಾರಣಕ್ಕೆ ಅವನು ಟೊಂಗೆಗಳ ಕಡಿದು ಸಮಾಧಾನ ಪಟ್ಟುಕೊಳ್ಳಲಿಲ್ಲ. ನೇರವಾಗಿ ಮರದ ಕಾಂಡಕ್ಕೇ ಕೈಹಾಕಿದ. ಜನಸಂದಣಿಯ ಜಾಗೆ. ಮರವನ್ನು ನೇರವಾಗಿ ಹೊಡೆದುರುಳಿಸಿದರೆ ಧರ್ಮದೇಟು ಗ್ಯಾರಂಟಿ. ಅದಕ್ಕೇ ಇವನು ಜಾಣತನದಿಂದ ಆಸಿಡ್‌ ಸುರಿಯಲು ಮುಂದಾದ. ಆಸಿಡ್‌ ವ್ಯಾಪಕವಾಗಿ ಹರಡಲಿ ಎಂಬ ಕಾರಣಕ್ಕೆ ಮರದ ಕಾಂಡದಲ್ಲಿ ಒಂದಷ್ಟು ಆಳದ ತೂತುಗಳನ್ನೂ ಕೊರೆದಿದ್ದ. ಹೀಗೆ ಅದೆಷ್ಟು ದಿನ ಮಾಡಿದ್ದನೋ, ಒಂದು ದಿನ ರೆಡ್‌ ಹ್ಯಾಂಡಾಗಿ ಜನರ ಕೈಗೆ ಸಿಕ್ಕಿಬಿದ್ದ.

ಮರ ದ್ವೇಷ, ಇದು ಹೊಸದೇನೂ ಅಲ್ಲ !

ಮರಕ್ಕೆ ಆಸಿಡ್‌ ಸುರಿದ ಈ ಮರ ಕಟುಕನ ಮರದ್ವೇಷ ಇದು ಮೊದಲೇನೂ ಅಲ್ಲ . ಮೂರ್ನಾಲ್ಕು ತಿಂಗಳ ಹಿಂದಷ್ಟೇ ಐದಾಳೆತ್ತರದ ಮರ ಕಡಿದುರುಳಿಸಿ ಸಿಕ್ಕಿಬಿದ್ದಿದ್ದು . 4 ಸಾವಿರ ರುಪಾಯಿ ದಂಡ ಕಕ್ಕಿದ್ದ. ಅದಕ್ಕೂ ತನ್ನ ಬಿಲ್ಡಿಂಗಿಗೆ ಮರದಿಂದ ಅಪಾಯವಿತ್ತು ಎಂಬ ಸಬೂಬು ಕೊಟ್ಟಿದ್ದ. ತನ್ನ ಮನೆಯ ಹಿಂಭಾಗದಲ್ಲಿರುವ ಇನ್ನೊಂದು ದೊಡ್ಡ ಮರವನ್ನೂ ಹೊಡೆದುರುಳಿಸಿದರೆ ಮನೆ ಸೇಫು ಎಂಬ ಕಾರಣಕ್ಕೆ ಅದನ್ನು ಆಸಿಡ್‌ ಉಪಯೋಗಿಸಿ ಕೆಡವುವ ತಂತ್ರ ಹೂಡಿದ.

ಮರಕಟುಕ ಆಸಿಡ್‌ ಸುರಿದ ಮರವನ್ನು ಹಳ್ಳಿ ಜನ ಮಳೆ ಮರ ಅಂತಲೇ ಕರೆಯುತ್ತಾರೆ. ದಿನನಿತ್ಯ ಅದರ ನೆಳಲಡಿ ನಿಂತು ಪಟ್ಟಾಂಗ ಹೊಡೆಯುವ ಪ್ರೇಮಿ ಯುವಕ/ಯುವತಿಯರಿಗೆ ಲೆಕ್ಕವಿಲ್ಲ. ಅಂಥಾ ಪ್ರೇಮ ಸಾಕ್ಷಿ ಮರ ಇದ್ದಕ್ಕಿದ್ದಂತೆ ಬಿಳಿ ದ್ರವವನ್ನು ಸೊಂಟದಿಂದ ಸೋರಿಸಿಕೊಂಡು ನಿಂತಿತು. ಕಮಟು ವಾಸನೆಯ ಘಾಟು. ದಿನೇದಿನೇ ವಾಸನೆ ಅಸಹ್ಯವಾಗುತ್ತಾ ಅಲ್ಲಿ ನಿಂತುಕೊಳ್ಳುವುದು ದುಸ್ತರವಾಯಿತು. ಕೊನೆಗೆ ಇದಕ್ಕೇನು ಕಾರಣ ಎಂಬ ಗುಮಾನಿ ಕುತೂಹಲ ಹುಟ್ಟಿಸಿತು. ಕುತೂಹಲದ ಬೆನ್ನೇರಿ ಹೊರಟ ಮಂದಿಗೆ ಮರ ಕಟುಕ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿದ.

ಮನೆಗೆ ಮರದಿಂದ ಹಾನಿ ಅನ್ನೋದಾದರೆ ಅದರ ಟೊಂಗೆಗಳನ್ನು ಮಹಾನಗರ ಪಾಲಿಕೆಯವರೇ ಬಂದು ಕಡಿಯುತ್ತಾರೆ. ಅದು ಬಿಟ್ಟು, ಅದರ ಕಾಂಡ ಸುಡುವಷ್ಟು ಕಲ್ಲು ಮನಸ್ಸು ಅವನಿಗೆ ಹೇಗೆ ಬಂತೋ ? ರಾಜ್ಯದಲ್ಲಿ ಮಳೆ ಯಾಕೆ ಬರುತ್ತಿಲ್ಲ ಎನ್ನುವುದು ಅರ್ಥವಾಯಿತಾ ? ಎಂತೆಂಥ ಜನ ಇರ್ತಾರೆ ನೋಡಿ.

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+