ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಸಿಡಿಗುಂಡು ಬಂದೂಕ ಗುರಿಯಲ್ಲಿ ಮುಖ್ಯಮಂತ್ರಿ ಕೃಷ್ಣ

By Staff
|
Google Oneindia Kannada News

ಮೂರು ಸಿಡಿಗುಂಡು ಬಂದೂಕ ಗುರಿಯಲ್ಲಿ ಮುಖ್ಯಮಂತ್ರಿ ಕೃಷ್ಣ
ಜುಲೈ 9- ಬುಧವಾರದಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭ, ದಾಳಿಗೆ ಪ್ರತಿಪಕ್ಷಗಳು ಸಜ್ಜು .

*ರಾಜು ಮಹತಿ

ಪ್ರತಿಪಕ್ಷಗಳು ಬಂದೂಕು ಸಜ್ಜು ಮಾಡಿಕೊಂಡು ನಿಂತಿವೆ. ಎಲ್ಲ ಬಂದೂಕುಗಳ ಗುರಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಮತ್ತವರ ಸರ್ಕಾರ.

ಜುಲೈ 9, ಬುಧವಾರದಿಂದ ವಿಧಾನಮಂಡಲದ ಅಧಿವೇಶನ ಶುರು. ರಾಜ್ಯದಲ್ಲಿ ಮಳೆಗಾಳಿಯ ಅಬ್ಬರ ತಣ್ಣಗಿದ್ದರೂ, ಇಪ್ಪತ್ತ ಮೂರು ದಿನಗಳ ಈ ಅಧಿವೇಶನದಲ್ಲಿ ಪ್ರತಿಪಕ್ಷಗಳು ಮಿಂಚು ಗುಡುಗು ಹರಿಸುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಚಳಿಯಿದ್ದರೂ ಕೃಷ್ಣ ಅವರ ಪಾಲಿಗಿದು ಧಗೆಯ ಅಧಿವೇಶನ.

ಈ ಬಾರಿ ಪ್ರತಿಪಕ್ಷಗಳು ಇನ್ನಿಲ್ಲದ ಉತ್ಸಾಹದಿಂದ ದಾಳಿಗೆ ಸಜ್ಜಾಗಿವೆ. ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಪಕ್ಷಕ್ಕೂ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುವ ಉತ್ಸಾಹ. ಕೇಂದ್ರ ಸಚಿವ ಅನಂತಕುಮಾರ್‌ ಅವರು ಪಕ್ಷದ ಚುಕ್ಕಾಣಿ ವಹಿಸಿಕೊಳ್ಳುವುದರೊಂದಿಗೆ ರಾಜ್ಯ ಬಿಜೆಪಿ ಮತ್ತೆ ಚುರುಕಾಗಿದೆ. ಆ ಚುರುಕು ಪಕ್ಷದ ಶಾಸಕರಲ್ಲೂ ಕಾಣಿಸಿಕೊಳ್ಳುವುದು, ವಿಧಾನಸಭೆಯಲ್ಲಿ ಮಾರ್ದನಿಗೊಳ್ಳುವುದು ನಿರೀಕ್ಷಿತ. ಅದೇರೀತಿ ಉಭಯ ದಳಗಳೂ ದಾಳಿಯ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲು ಶತ ಪ್ರಯತ್ನ ನಡೆಸುವುದು ನಿಸ್ಸಂಶಯ. ವಿಲೀನದ ಆಸೆ ಕಮರಿರುವುದರಿಂದ ದೇವೇಗೌಡರ ಜನತಾದಳ ಹಾಗೂ ಭೈರೇಗೌಡ- ಬೊಮ್ಮಾಯಿ ನೇತೃತ್ವದ ದಳಗಳು ಸದನದಲ್ಲಿ ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಹೆಣಗಲಿವೆ.

ಎಂದಿನಂತೆ ಈ ಬಾರಿ ಸದನದ ಚರ್ಚೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ವಿಷಯಗಳಲ್ಲಿ ವಿದ್ಯುತ್‌ ಕೊರತೆ ಹಾಗೂ ಕುಡಿಯುವ ನೀರಿಗೆ ಅಂಥ ಪ್ರಾಮುಖ್ಯತೆಯೇನಿಲ್ಲ . ಭಾರೀ ಕೋಲಾಹಲ ಉಂಟುಮಾಡುವ ಹಾಗೂ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸಬಹುದಾದ ವಿಷಯಗಳು ಮೂರು. ಅವುಗಳೆಂದರೆ-

  1. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅಕ್ಷರ ದಾಸೋಹ.
  2. ಬರ ಪರಿಹಾರ ಕಾಮಗಾರಿಗಳ ನಿರ್ವಹಣೆಯಲ್ಲಿನ ವೈಫಲ್ಯ.
  3. ಸಿಇಟಿ ಹಾಗೂ ಗ್ರಾಮೀಣ ಕೃಪಾಂಕ ಪ್ರಕರಣಗಳಲ್ಲಿ ಸರ್ಕಾರದ ನೀತಿ ನಿಲುವುಗಳು.
ಗಂಟಲು ಸುಡುತ್ತಿರುವ ಬಿಸಿ ಊಟ

ಸರ್ಕಾರಿ ಶಾಲೆಗಳ 33 ಲಕ್ಷ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡುವ ಯೋಜನೆ ‘ಅಕ್ಷರ ದಾಸೋಹ’ ರಾಜಕೀಯ ಬಣ್ಣ ಪಡೆದುಕೊಂಡಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ರಾಜಕೀಯ ಬೆರೆಸಬೇಡಿ ಎಂದು ಸದನ ಪ್ರಾರಂಭವಾಗುವ ಹಿಂದಿನ ದಿನವಷ್ಟೇ (ಜು.8, ಮಂಗಳವಾರ) ಉನ್ನತ ಶಿಕ್ಷಣ ಸಚಿವ ಪರಮೇಶ್ವರ್‌ ಪ್ರತಿಪಕ್ಷಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಊಟ ಮಾಡಿದ ಮಕ್ಕಳು ರಾಜ್ಯದ ವಿವಿಧೆಡೆಗಳಲ್ಲಿ ಅಸ್ವಸ್ಥರಾಗಿರುವುದು ಹಾಗೂ ಸುನೀಲ ಎನ್ನುವ ಬಾಲಕ ಚಿಕ್ಕಮಗಳೂರಿನ ಕಡೂರಿನಲ್ಲಿ ಸಾವನ್ನಪ್ಪಿರುವುದು ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಮುಜುಗರ ಉಂಟುಮಾಡಿದೆ. ಸುನೀಲನ ಸಾವಿಗೆ ಮಧ್ಯಾಹ್ನದ ಊಟ ಕಾರಣವಲ್ಲ ಎನ್ನುವ ಜಿಲ್ಲಾಧಿಕಾರಿಗಳ ವರದಿಯನ್ನು ಸರ್ಕಾರ ಗುರಾಣಿಯಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ, ಅದನ್ನು ಪ್ರತಿಪಕ್ಷಗಳಿರಲಿ- ಜನತೆಯೂ ನಂಬುತ್ತಿಲ್ಲ .

ಅಕ್ಷರ ದಾಸೋಹ ಯೋಜನೆಯಡಿ ಅಡುಗೆ ತಯಾರಿಸುವ ಗುತ್ತಿಗೆಯನ್ನು ದಲಿತರಿಗೆ ವಹಿಸಿಕೊಟ್ಟಿರುವ ಸರ್ಕಾರದ ನೀತಿ ಕೂಡ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಅನೇಕ ಊರುಗಳಲ್ಲಿ ದಲಿತರು ಮಾಡಿದ ಅಡುಗೆಯನ್ನು ತಮ್ಮ ಮಕ್ಕಳು ಊಟ ಮಾಡುವುದಿಲ್ಲವೆಂದು ಜನತೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಪಕ್ಷಗಳಿಗೆ ಇದಕ್ಕಿಂಥ ಬ್ರಹ್ಮಾಸ್ತ್ರ ಇನ್ನೊಂದು ಬೇಕೆ ?

ಹ್ಯಾಟ್ರಿಕ್‌ ಬರ !

ರಾಜ್ಯದಲ್ಲಿ ಸತತ ಮೂರನೇ ವರ್ಷ ಕಾಣಿಸಿಕೊಂಡಿರುವ ಬರ ಜನತೆ ಹಾಗೂ ಸರ್ಕಾರಕ್ಕೆ ಆತಂಕ ಉಂಟುಮಾಡಿದೆ. ಬರ ಪರಿಹಾರ ಕಾಮಗಾರಿಗಳ ನಿರ್ವಹಣೆ ಸರಿಯಾಗಿಲ್ಲ ಎಂದು ಪ್ರತಿಪಕ್ಷಗಳು ಈಗಾಗಲೇ ಬೊಬ್ಬೆ ಹೊಡೆಯುತ್ತಿವೆ. ಮಾಜಿ ಪ್ರಧಾನಿ ದೇವೇಗೌಡರಂತೂ ಸರ್ಕಾರದ ರೀತಿ ರಿವಾಜುಗಳನ್ನು ಪ್ರತಿನಿತ್ಯ ಖಂಡಿಸುತ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಹಾರ ಧಾನ್ಯಗಳನ್ನು ಪೂರೈಸುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಕೃಷ್ಣ ದೂರಿದ್ದಾರೆ. ಕೊಟ್ಟಿರುವ ಆಹಾರಧಾನ್ಯಗಳನ್ನು ಮೊದಲು ನೆಟ್ಟಗೆ ಬಳಸಿ ಎನ್ನುವುದು ಕೇಂದ್ರ ಸಚಿವ ಅನಂತಕುಮಾರ್‌ ತಿರುಗೇಟು. ಈ ಕಚ್ಚಾಟ ಸದನದೊಳಗೂ ಪ್ರತಿಧ್ವನಿಸುವ ನಿರೀಕ್ಷೆಯಿದ್ದು - ಆಡಳಿತಾರೂಢ ಸದಸ್ಯರ ಹಾಗೂ ಬಿಜೆಪಿ ಸದಸ್ಯರ ತಿಕ್ಕಾಟಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ.

ಸಿಇಟಿ ಹಾಗೂ ಗ್ರಾಮೀಣ ಕೃಪಾಂಕ

ಇಂಜಿನಿಯರಿಂಗ್‌ ಹಾಗೂ ವೈದ್ಯಕೀಯ ವ್ಯಾಸಂಗಕ್ಕೆ ಪ್ರವೇಶ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರದ ಪರ ಹೈಕೋರ್ಟ್‌ ತೀರ್ಪು ನೀಡಿದ್ದರೂ, ವಿವಾದ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ . ಖಾಸಗಿ ಶಿಕ್ಷಣ ಸಂಸ್ಥೆಗಳು ದೂರನ್ನು ಸರ್ವೋಚ್ಛ ನ್ಯಾಯಾಲಯಕ್ಕೊಯ್ಯಲು ಸಿದ್ಧವಾಗಿವೆ. ಈ ಪ್ರಕರಣದಲ್ಲಿ ಸರ್ಕಾರ ವಹಿಸಿರುವ ಪಾತ್ರದ ಕುರಿತು ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಅದೇರೀತಿ, ಸುಪ್ರಿಂಕೋರ್ಟ್‌ ಆದೇಶದ ಮೇರೆಗೆ ಸುಮಾರು 4 ಸಾವಿರ ಮಂದಿ ನೌಕರರನ್ನು ಸರ್ಕಾರಿ ಸೇವೆಯಿಂದ ವಿಮುಕ್ತಿಗೊಳಿಸಲು ಸರ್ಕಾರ ಹೊರಡಿಸಿರುವ ಆದೇಶ ಕೂಡ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡಲು ಸರ್ಕಾರ ವಿಫಲವಾಗಿದೆ. ಬದಲಿ ಉದ್ಯೋಗಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ ಎಂದು ಪ್ರತಿಪಕ್ಷಗಳು ಆಪಾದಿಸಿವೆ. ಈ ಚರ್ಚೆ ಸದನದಲ್ಲಿ ಬಿರುಸಾಗುವುದು ಖರ್ಚಿತ.

ಯಥಾಪ್ರಕಾರ- ಕುಡಿಯುವ ನೀರು ಹಾಗೂ ವಿದ್ಯುತ್‌ ಸರಬರಾಜಿನ ಅವ್ಯವಸ್ಥೆಯ ವಿಷಯಗಳೂ ಸದನದಲ್ಲಿ ಪ್ರಸ್ತಾಪವಾಗಲಿವೆ. ಇಂಥ ಪ್ರಶ್ನೆಗಳಿಗೆ ಸರ್ಕಾರದ ಬಳಿ ಸಿದ್ಧ ಉತ್ತರಗಳಿವೆ.

ಸದನದ ಕ್ಷಣಗಣನೆ ಪ್ರಾರಂಭವಾಗಿರುವ ಹೊತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಹಾಗೂ ಕೆಲವು ಕನ್ನಡ ಚಳವಳಿ ನಾಯಕರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣ ಬಯಲಾಗಿದೆ. ಈ ಸಂಚಿನ ಹಿಂದೆ ತಮಿಳು ಉಗ್ರವಾದಿಗಳಿದ್ದಾರೆ ಎನ್ನಲಾಗಿದ್ದು , ಈ ಪ್ರಕರಣ ಕೂಡ ಸದನದಲ್ಲಿ ಪ್ರಸ್ತಾಪವಾಗುವ ನಿರೀಕ್ಷೆಯಿದೆ.

ಸದನದಲ್ಲಿ ಮಿಂಚು ಗುಡುಗು ಸಿಡಿಲು ಎಷ್ಟು ಜೋರಾಗಾದರೂ ಇರಲಿ ; ಮಳೆ ಮಾತ್ರ ಸದನದ ಆಚೆ, ರಾಜ್ಯಾದ್ಯಂತ ಸುರಿಯಲಿ. ಜನತೆಗೆ ನೆಮ್ಮದಿ ತರುವ ಶಕ್ತಿಯಿರುವುದು ಮಳೆಗೆ ಮಾತ್ರ.

Post your views

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X