ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಾಹಲವಾಯ್ತು ಗಂಗವ್ವನ ತೊಟ್ಟಿಲಾಗಿದ್ದ ಗುಲ್ಬರ್ಗಾ ಕೆರೆ

By Staff
|
Google Oneindia Kannada News

ಹಾಲಾಹಲವಾಯ್ತು ಗಂಗವ್ವನ ತೊಟ್ಟಿಲಾಗಿದ್ದ ಗುಲ್ಬರ್ಗಾ ಕೆರೆ
ಶರಣಬಸವೇಶ್ವರ ಕೆರೆಯಲ್ಲಿ 60 ಲಾರಿ ಲೋಡ್‌ ಮೀನುಗಳು ಸತ್ತಿವೆ

ಗುಲ್ಬರ್ಗಾ : ಸುಡುಸೂರ್ಯನ ಈ ಊರಿನ ಏಕೈಕ ಕೆರೆ ಶರಣಬಸವೇಶ್ವರ. ಎಸ್ಬಿ ಟ್ಯಾಂಕ್‌ ಅಂತಲೇ ಜನಜನಿತ. ಶರಣಬಸವೇ ಶ್ವರ ಜಾತ್ರಿ ಬಂತಂದರ ಈ ಕೆರಿನಾಗೆ ಮುಳುಗುಹಾಕೋದ ಒಂದು ಸೊಗಸು. ಅದೀಗ ಬರೀ ನೆಪ್ಪು. ಈಗ ಕೆರಿ ಹತ್ತರ ಮೂಗು ತೆರಕಂಡು ನಿಲ್ಲ ಹಾಂಗಿಲ್ಲರೀ.

ಎಪ್ಪತ್ನಾಲ್ಕು ಎಕರೆ ವಿಶಾಲ ಕೆರೆ ಬಿಸಿ ಗುಲ್ಬರ್ಗಾದ ತಣ್ಣನೆಯ ಜಾಗವಾಗಿತ್ತು. ಅಲ್ಲಿ ಫೋಟೋ ತೆಗೆಸಿಕೊಳ್ಳೋದೇ ಮಜಾ ಅನ್ನುವ ಕಾಲ ಈಗ ನೆನಪಷ್ಟೆ. ಹತ್ತಿರದ ಕಾರ್ಖಾನೆಗಳು ಸೋಸದೆ ಬಿಟ್ಟ ರಾಸಾಯನಿಕಗಳು ಕೆರೆಯ ನೀರಿಗೆ ವಿಷವ ಚೆಲ್ಲಿವೆ. ಹೈದರಾಬಾದ್‌ ಕರ್ನಾಟಕ ಪರಿಸರ ಜಾಗೃತಿ ಮತ್ತು ಸಂರಕ್ಷಣಾ ಸಂಸ್ಥೆ ಇತ್ತೀಚೆಗೆ ಈ ಕೆರೆಯ ನೀರನ್ನು ಪರೀಕ್ಷಿಸಿತು. ಇದರಲ್ಲಿರುವ ಆಮ್ಲಜನಕದ ಪ್ರಮಾಣ ಲೀಟರ್‌ಗೆ ಕೇವಲ 0.83 ಮಿಲಿ ಗ್ರಾಂ. ಮೀನುಗಳು ಬದುಕುಳಿಯಲು ಲೀಟರ್‌ ನೀರಿನಲ್ಲಿ ಕನಿಷ್ಠ 5 ಮಿಲಿ ಗ್ರಾಂ ಆಮ್ಲಜನಕ ಇರಬೇಕು.

ಈ ಕೆರೆಯಲ್ಲಿ ಮೀನುಗಳು ಸಾಯುವುದು, ಸತ್ತು ತೇಲುವುದು ವರ್ಷಕ್ಕೆ ಎರಡು ಬಾರಿ ಮಾಮೂಲಾಗಿತ್ತು. ಆದರೆ ಈ ಬಾರಿ ಆತಂಕ ಮುಗಿಲುಮುಟ್ಟಿದೆ. ಭರ್ತಿ 60 ಟ್ರ್ಯಾಕ್ಟರ್‌ ಲೋಡ್‌ ಸತ್ತ ಮೀನುಗಳನ್ನು ಕೆರೆಯಿಂದ ಈ ಸಲ ಹೊತ್ತೊಯ್ಯಲಾಯಿತು ! ರಾಹು, ಕತ್ಲ, ಮಿರ್ಗ, ಕಮರ್ಕ, ಖಿಲ್ಪ ಮೊದಲಾದ ಜಾತಿಯ ಮೀನುಗಳನ್ನು ಹಿಡಿದು ಹೊಟ್ಟೆ ಹೊರೆಯುತ್ತಿದ್ದ 230 ಬೆಸ್ತರು ಕೆಲಸವಿಲ್ಲದೆ ಖಾಲಿ ಕೂರುವಂತಾಗಿದೆ.

ರಾಸಾಯನಿಕ ತಿಂದು ಸತ್ತ ಮೀನುಗಳನ್ನು ಕೊಳ್ಳುವವರಾರು ಹೇಳಿ? ಸತ್ತ ಮೀನುಗಳು ಅದೆಷ್ಟೋ ಕಾಲ ನೀರಿನಲ್ಲೇ ಕೊಳೆತು ನಾರುವುದರಿಂದ ಜನರೀಗ ಹತ್ತಿರಕ್ಕೂ ಸುಳಿಯದಂತಾಗಿದೆ. ಶರಣಬಸವೇಶ್ವರನ ಮುಂದಿನ ಜಾತ್ರೆ ಗಂಗವ್ವನ ಹಂಗಿಲ್ಲದೆ ನಡೆಯುವಂತಾಗುತ್ತಿದೆಯಲ್ಲ ಎಂಬುದೇ ಹಿರೀಕರ ಅಳಲು. ವಿಧಾನಸೌಧದ ಮೊಗಸಾಲೆಯಲ್ಲಿ ಕೂತು ಪಟ್ಟಾಂಗ ಹೊಡೆಯುವ ಸರ್ಕಾರದ ಮಂದಿಗೆ ಕಿನ್ಲೆ ಮೀರಿನ ಬದಲು ಈ ಕೆರೆಯ ನೀರು ಕುಡಿಸಿ ನೋಡಿ ಅಂತ ಮೀನುಗಾರರು ಹೇಳುವಾಗ ಅವರ ಕಣ್ಣಲ್ಲಿ ನೀರು ತುಂಬಿಬರುತ್ತದೆ.

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X