ಚಿತ್ರದುರ್ಗದಲ್ಲಿ ನೀರು ಸರಬರಾಜಿಗೆ 15 ಟ್ಯಾಂಕ್‌ಗಳು
ಚಿತ್ರದುರ್ಗ: ನಗರದಲ್ಲಿ ನೀರಿನ ಸಮಸ್ಯೆ ಪರಿಹಾರ ಮಾಡುವುದಕ್ಕೆ ಯಾವುದೇ ಬೃಹತ್ ನೀರಾವರಿ ಯೋಜನೆಗಳಿಲ್ಲ. ತಾಲ್ಲೂಕಿನಾದ್ಯಂತ ಬರಿಯ ಬೋರ್‌ವೆಲ್‌ಗಳೇ ಇರುವುದರಿಂದ ಈ ಬಾರಿಯ ಬೇಸಗೆ ದುರ್ಗದವರಿಗೆ ತೀರಾ ಕಠಿಣವಾಗಿದೆ.
ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ಅಲೆಯಬೇಕಾದ ದುರ್ಗದ ಜನತೆಯ ದಾಹಕ್ಕೆ ನೆರವಾಗಲು ಸ್ಥಳೀಯ ಆಡಳಿತವು 15 ನೀರಿನ ಟ್ಯಾಂಕ್‌ಗಳ ವ್ಯವಸ್ಥೆ ಮಾಡಿದೆ. ಬರ ಪರಿಹಾರ ಕಾಮಗಾರಿಯಡಿಯಲ್ಲಿ ಕಾರ್ಯ ನಿರ್ವಹಿಸಲಿರುವ 15 ಟ್ಯಾಂಕ್‌ಗಳು ಜನರಿಗೆ ಕುಡಿಯುವ ನೀರು ಒದಗಿಸಲಿವೆ.
ಈ ಟ್ಯಾಂಕ್‌ಗಳು ಟೆಂಡರ್ ಆಧಾರದ ಮೇಲೆ ಕೆಲಸ ಮಾಡಲಿವೆ. ಈಗಾಗಲೇ 4 ನೀರಿನ ಟ್ಯಾಂಕ್‌ಗಳು ಸ್ಥಳೀಯರಿಗೆ ನೀರು ಪೂರೈಸುವ ಕೆಲಸವನ್ನು ಮಾಡುತ್ತಿವೆ. ಇದೀಗ ಹೆಚ್ಚುವರಿ 15 ಟ್ಯಾಂಕ್‌ಗಳು ನೀರು ಪೂರೈಕೆಗೆ ಸೇರ್ಪಡೆಯಾಗಿವೆ. ಟ್ಯಾಂಕ್‌ಗಳಲ್ಲಿ ಪೂರೈಸಲಾಗುವ ನೀರಿಗೆ ಹಣ ತೆರಬೇಕಾಗಿಲ್ಲ. ತಾಲ್ಲೂಕಿನಲ್ಲಿ ನೀರಿಗೆ ತೀರಾ ತೊಂದರೆ ಕಂಡು ಬಂದ ಪ್ರದೇಶದ ಜನರು ನಗರಸಭೆ ಆಯುಕ್ತರನ್ನು ಸಂಪರ್ಕಿಸಬಹುದು.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಮಾಯವಾಗಿತ್ತು. ರಾಜ್ಯಕ್ಕೆ ಬರ ಪರಿಸ್ಥಿತಿ ಕಾಲಿಡುವ ಮುನ್ನವೇ ಚಿತ್ರದುರ್ಗದಲ್ಲಿ ಮಳೆರಾಯ ಕಣ್ಣಾಮುಚ್ಚಾಲೆಯಾಡಲು ಶುರುಮಾಡಿದ್ದ. ಜೊತೆಗೆ ಜಿಲ್ಲೆಯ ರೈತರು ಬೆಳೆಯುವ ಬೆಳೆಗಳಿಗೆ ಕೂಡ ನೀರು ಸಾಕಾಗುತ್ತಿಲ್ಲ. ಈ ಬಾರಿಯ ಬೇಸಗೆ ತೀರಾ ದುರ್ಗಮವಾಗಿರುವ ಹಿನ್ನೆಲೆಯಲ್ಲಿ ಸರಕಾರ ಬರ ಪರಿಹಾರ ಕಾಮಗಾರಿಯಡಿಯಲ್ಲಿ ಟ್ಯಾಂಕ್‌ಗಳ ಮೂಲಕ ನೀರು ಸರಬರಾಜು ಕಾರ್ಯವನ್ನು ಕೈಗೆತ್ತಿಕೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications