ವಿದೇಶಿ ಯಾತ್ರಿಕರ ಕೊಲ್ಲುತ್ತಿದ್ದ ಪಾತಕಿ ಬಂಧನ
ಬೆಂಗಳೂರು : ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ವಿದೇಶೀಯರನ್ನು ಕೊಂದು, ಹಣ ಲೂಟಿ ಮಾಡುತ್ತಿದ್ದ ಎನ್ನಲಾದ ಕುಖ್ಯಾತನೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಡ್ಡಿ ನಾಗೇಂದ್ರ (30) ಎಂಬಾತನೇ ಬಂಧಿತ ಆರೋಪಿ. ಈ ವರ್ಷ ಜನವರಿ 27ನೇ ತಾರೀಕು ಹನುಮನಹಳ್ಳಿ ಬಳಿ ಇಂಗ್ಲೆಂಡಿನ ಜೇಮ್ಸ್ ಪೀಲೆ ಎಂಬ ಪ್ರವಾಸಿಗರನ್ನು ಕೊಂದು ಅವರಿಂದ ಭಾರೀ ಹಣವನ್ನು ಈತ ದೋಚಿದ್ದಾನೆ. ಫೆಬ್ರವರಿ 6ನೇ ತಾರೀಕು ಇಸ್ರಿಲಿನ ಹೆಂಗಸೊಬ್ಬಳಿಗೆ ಇರಿದು, ಆಕೆಯ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದಾನೆ. ದೇವಾಲಯವಿರುವ ಬೆಟ್ಟದ ಮೇಲೆ ಜರ್ಮನ್ ಮಹಿಳೆಯನ್ನು ದೋಚಲೂ ಈತ ವಿಫಲ ಯತ್ನ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ಸಾಕಷ್ಟು ಐತಿಹಾಸಿಕ ಸ್ಮಾರಕ ಹಾಗೂ ಪ್ರವಾಸಿ ಆಕರ್ಷಣೆಗಳಿದ್ದು, ಸಾಕಷ್ಟು ವಿದೇಶೀ ಸಂಶೋಧಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದನ್ನೇ ಬಂಡವಾಳವಾಗಿಸಿ, ಅವರನ್ನು ಕೊಂದು ಸುಲಿಗೆ ಮಾಡುವ ಪ್ರವೃತ್ತಿಯಿಂದ ಈಚೆಗೆ ವಿದೇಶೀ ಪ್ರವಾಸಿಗರು ಬೆಚ್ಚಿದ್ದರು. ಮಡ್ಡಿ ನಾಗೇಂದ್ರನ ಬಂಧನದಿಂದ ಈಗ ವಿದೇಶೀಯರು ನಿರಾಳ ಉಸಿರಾಡುವಂತಾಗಿದೆ ಎಂದು ಪೊಲೀಸರು ಹೇಳಿದರು.
ಸುಮಾರು 7 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿರುವ ಮಡ್ಡಿ ನಾಗೇಂದ್ರನನ್ನು ಹಿಡಿಯಲು ಒಂದೂವರೆ ತಿಂಗಳ ಹಿಂದೆ ವಿಶೇಷ ಪೊಲೀಸ್ ಪಡೆ ರಚಿತವಾಗಿತ್ತು. ಯುಗಾದಿ ದಿನ (ಏ.2) ಈತನು ಪೊಲೀಸರ ಜಾಲಕ್ಕೆ ಸಿಕ್ಕಿ ಬಿದ್ದ. ಆಗಲೂ ಪೊಲೀಸರ ಪಿಸ್ತೂಲನ್ನು ಕಸಿಯಲು ಪದೇಪದೇ ಯತ್ನ ಮಾಡಿದ. ಅನಿವಾರ್ಯವಾಗಿ ಈತನ ಕಾಲಿಗೆ ಪೊಲೀಸರು ಗುಂಡು ಹಾರಿಸಲೇ ಬೇಕಾಯಿತು. ತನ್ನ ತಪ್ಪುಗಳನ್ನು ನಾಗೇಂದ್ರ ಒಪ್ಪಿಕೊಂಡಿದ್ದು, ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications