ಇರಾಕ್ ಯುದ್ಧ ಭೀತಿ ಇನ್ಫೋಸಿಸ್‌ಗೆ ತಟ್ಟದು
ಬೆಂಗಳೂರು: ಐಟಿ ಮಾಂತ್ರಿಕ ಇನ್ಫೋಸಿಸ್ ಸಂಸ್ಥೆಯು ಮಾರ್ಚ್ ಅಂತ್ಯಕ್ಕೆ ಮುಗಿಯುವ ನಾಲ್ಕನೇ ತ್ರೆೃಮಾಸಿಕದಲ್ಲಿ 204ರಿಂದ 207 ಮಿಲಿಯನ್ ಯುಎಸ್ ಡಾಲರ್‌ಗಳ ವ್ಯವಹಾರವನ್ನು ನಿರ್ವಹಿಸುವ ಗುರಿ ಹೊಂದಿದೆ.
ಇರಾಕ್ ಯುದ್ಧದ ಛಾಯೆಯ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅನಿಶ್ಚಿತತೆಯ ಹೊರತಾಗಿಯೂ ಇನ್ಫೋಸಿಸ್ ಸಂಸ್ಥೆ ತನ್ನ ವ್ಯವಹಾರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಂಡಿಲ್ಲ . ಇರಾಕ್‌ನಲ್ಲಿ ಯುದ್ಧ ಭೀತಿ ಕಾಣಿಸಿಕೊಂಡಾಗಲೂ ಜನವರಿ ತಿಂಗಳಲ್ಲಿ ಹಾಕಿಕೊಂಡ ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸಂಸ್ಥೆಯ ಮುಖ್ಯ ನಿರ್ವಹಣಾ ನಿರ್ದೇಶಕ ಹಾಗೂ ಸಿಇಓ ನಂದನ್ ಎಂ. ನೀಲೇಕಣಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯುದ್ಧ ಭೀತಿಯಿಂದಾಗಿ ಯಾವುದಾದರೂ ಗ್ರಾಹಕರು ಪ್ರೊಜೆಕ್ಟ್‌ಗಳನ್ನು ಹಿಂಪಡೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ- ಯುದ್ಧದಿಂದಾಗಿ ಐಟಿ ಕ್ಷೇತ್ರ ಅನಿಶ್ಚಿತತೆಯನ್ನು ಎದುರಿಸುತ್ತಿದ್ದು ಯಾವ ಸಂದರ್ಭದಲ್ಲಾದರೂ ಏರುಪೇರುಗಳಾಗಬಹುದು. ಯಾವುದೇ ಅನಿಶ್ಚಿತತೆಯ ನಡುವೆಯೂ ಇನ್ಫೋಸಿಸ್ ತನ್ನ ಗುರಿಯನ್ನು ಬದಲಿಸಿಲ್ಲ ಎಂದು ನೀಲೇಕಣಿ ಉತ್ತರಿಸಿದರು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications