ಜ.31ರಿಂದ ಬಳ್ಳಾರಿಯಲ್ಲಿ ಪುರಂದರ ದಾಸರ ಆರಾಧನೆ
ಬಳ್ಳಾರಿ : ನಗರಿಯಲ್ಲಿ ಶುಕ್ರವಾರ (ಜ31) ದಿಂದ 3 ದಿನಗಳ ಕಾಲ ಭಕ್ತಿ ಗೀತೆಗಳ ಸುಧೆ. ಇಲ್ಲಿನ ಸತ್ಯನಾರಾಯಣ ಪೇಟೆಯ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮೂರೂ ದಿನಗಳ ಕಾಲ ಪುರಂದರ ದಾಸರ ಆರಾಧನೆ ನಡೆಯಲಿದೆ.
ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆರಾಧನೆಯನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಭಕ್ತಿ ಭಾರತಿ ಪ್ರತಿಷ್ಠಾನ, ಬಳ್ಳಾರಿ ಸಂಗೀತ ಸಂಘ ಹಾಗೂ ಬಳ್ಳಾರಿ ಮಾಧ್ವ ಸಂಘ ಕಾರ್ಯಕ್ರಮವನ್ನು ಆಯೋಜಿಸಿವೆ. ಉದ್ಘಾಟನಾ ಸಮಾರಂಭದಲ್ಲಿ ಬಿ.ವಿ.ನಾರಾಯಣ ಐತಾಳರಿಗೆ ಪೇಜಾವರ ತೀರ್ಥರು ಸಂಗೀತ ಸರಸ್ವತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಜನವರಿ 31ನೇ ತಾರೀಕು ಶುಕ್ರವಾರ ಸಂಜೆ 5.30 ಗಂಟೆಗೆ ಶೇಷಗಿರಿ ದಾಸರು ಹರಿದಾಸ ಪದಗಳನ್ನು ಹಾಡಲಿದ್ದಾರೆ. ರಾತ್ರಿ 7 ಗಂಟೆಗೆ ವಿದುಷಿ ಎಂ.ಎಸ್.ಶೀಲ ಹರಿದಾಸ ಸಂಗೀತ ಕಚೇರಿ ನಡೆಸಿಕೊಡಲಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆಗೆ ಬನ್ನಂಜೆ ಗೋವಿಂದಾಚಾರ್ಯರ ಅಧ್ಯಕ್ಷತೆಯಲ್ಲಿ ‘ಹರಿದಾಸ ಚಿಂತನ’ ಎಂಬ ವಿಚಾರ ಸಂಕಿರಣ ನಡೆಯಲಿದೆ. ಭಾನುವಾರ (ಫೆ.2) ಸಂಜೆ 7 ಗಂಟೆಗೆ ಭದ್ರಗಿರಿ ಅಚ್ಯುತ ದಾಸರ ಹರಿಕಥೆಯಾಂದಿಗೆ ಪುರಂದರ ದಾಸರ ಆರಾಧನಾ ಮಹೋತ್ಸವ ಸಮಾಪ್ತಿಯಾಗಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications