ಎಸ್‌ಟಿಎಫ್‌ನಿಂದ ವೀರಪ್ಪನ್‌ನ ಬಲಾಢ್ಯ ಬಂಟರ ಬಂಧನ
ಬೆಂಗಳೂರು : ಪೊನ್ನಾಚಿ ಕಾಡಿನಲ್ಲಿ ವೀರಪ್ಪನ್ ಶಿಕಾರಿಗೆ ಕಾರ್ಯಾಚರಣೆ ಚುರುಕುಗೊಳಿಸಿದ ಕೆಲವೇ ಗಂಟೆಗಳಲ್ಲಿ ನಾಗಪ್ಪ ಅಪಹರಣಕ್ಕೆ ನೆರವಾಗಿದ್ದ ಇಬ್ಬರು ವೀರಪ್ಪನ್ ಸಹಚರರನ್ನು ಹಿಡಿಯುವಲ್ಲಿ ಎಸ್‌ಟಿಎಫ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಜೋಸೆಫ್ ಅಲಿಯಾಸ್ ಮೀನುಕರ್ ಜೋಸೆಫ್ ಹಾಗೂ ಸವಾರಿಯಪ್ಪ ಅಲಿಯಾಸ್ ಕೋಣೆ ಸವಾರಿಯಪ್ಪ ಎಂದು ಗುರ್ತಿಸಲಾಗಿದೆ. ನಾಗಪ್ಪ ಅಪಹರಣದ ನೀಲಿ ನಕಾಶೆ ತಯಾರಿಸುವ ಹಂತದಿಂದಲೂ ವೀರಪ್ಪನ್‌ಗೆ ಈ ಇಬ್ಬರೂ ನೆರವಾಗಿದ್ದರು. ಬುಧವಾರ ರಾತ್ರಿ ಎಸ್‌ಟಿಎಫ್ ಪಡೆ ಇವರನ್ನು ಬಂಧಿಸಿತು ಎಂದು ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಟಿ.ಮಡಿಯಾಳ್ ಗುರುವಾರ (ಜ.30) ಸುದ್ದಿಗಾರರಿಗೆ ತಿಳಿಸಿದರು.
ಬಂಧಿತ ಆರೋಪಿಗಳು ನಾಗಪ್ಪನವರ ಬಗ್ಗೆ ಅಷ್ಟೇ ಅಲ್ಲದೆ ಕೃಷಿ ಸಂಸ್ಕರಣಾ ಸಚಿವ ರಾಜೂಗೌಡರ ಕುರಿತ ವಿವರಗಳನ್ನೂ ಕಲೆಹಾಕಿ ವೀರಪ್ಪನ್‌ಗೆ ಒಪ್ಪಿಸಿದ್ದರು. ವೀರಪ್ಪನ್ ಹಿಟ್‌ಲಿಸ್ಟಲ್ಲಿ ರಾಜೂಗೌಡರೂ ಇದ್ದುದನ್ನು ಇದು ಸ್ಪಷ್ಟಪಡಿಸುತ್ತದೆ. ಜೋಸೆಫ್ ಕೆಲಸಕ್ಕೆ ಮೆಚ್ಚಿದ ವೀರಪ್ಪನ್ ಆತನಿಗೆ ಹಣ ಕೊಟ್ಟಿರುವ ಸಾಧ್ಯತೆಯೂ ಇರುವುದು ವಿಚಾರಣೆಯಿಂದ ಗೊತ್ತಾಗಿದೆ. 2 ಲಕ್ಷ ರುಪಾಯಿ ಕೊಟ್ಟು ಜೋಸೆಫ್ ಮೂಲಕವೇ ವ್ಯಾನೊಂದನ್ನು ಖರೀದಿಸಿದ್ದ ವೀರಪ್ಪನ್, ನಾಗಪ್ಪ ಅಪಹರಣದ ಸಿದ್ಧತೆ ವೇಳೆ ಅದರಲ್ಲೇ ಓಡಾಡಿದ್ದಾನೆ ಎಂದು ಮಡಿಯಾಳ್ ಹೇಳಿದರು.
ಆ ವ್ಯಾನು ಹಾಗೂ ಅಪಹರಣದ ಕೆಲಸಕ್ಕಾಗೇ ಬಳಸಲಾಗಿದ್ದ ಒಂದು ಮೊಬೈಕನ್ನು ಪೊಲೀಸರು ಈಗಾಗಲೇ ವಶ ಪಡಿಸಿಕೊಂಡಿದ್ದಾರೆ.
ಜೋಸೆಫ್ ಮುಖಾಂತರ ವೀರಪ್ಪನ್‌ಗೆ ಪರಿಚಿತನಾದದ್ದು ಸವಾರಿಯಪ್ಪ. ಉಗ್ರರ ಹಾಗೂ ವೀರಪ್ಪನ್ ನಡುವೆ ಕೊಂಡಿಯಾಗಿ ಕೆಲಸ ಮಾಡಿದ ಈತ, ನಾಗಪ್ಪನವರ ಅಪಹರಣಕ್ಕೆ ಬೇಕಾದ ಯೋಗ್ಯ ಸಾಥಿಗಳನ್ನು ಖುದ್ದು ಆರಿಸಿದ್ದ. ವೀರಪ್ಪನ್ ಬೇಟೆಯ ಹಾದಿಯಲ್ಲಿ ಈ ಇಬ್ಬರ ಬಂಧನ ಒಂದು ಯಶಸ್ವಿ ನಡೆಯೆಂದು ಮಡಿಯಾಳ್ ಶ್ಲಾಘಿಸಿದರು.
ವೀರಪ್ಪನ್ ಹಾಗೂ ಎಸ್‌ಟಿಎಫ್ ನಡುವೆ ಗುಂಡಿನ ಚಕಮಕಿ ನಡೆದ ವಿಷಯವನ್ನು ಮಡಿಯಾಳ್ ಹಾಗೂ ಗೃಹ ಸಚಿವ ಖರ್ಗೆ ಇಬ್ಬರೂ ತಳ್ಳಿ ಹಾಕಿದರು. ಕಾಡಿನಲ್ಲಿ ಹೆಜ್ಜೆ ಹಾಕಲು ಸಾಕಷ್ಟು ಬೆಳಕನ್ನು ಪಡೆಯುವ ನಿಟ್ಟಿನಲ್ಲಿ ಇಲ್ಯುಮಿನೇಷನ್ ಪಿಸ್ತೂಲನ್ನು ಎಸ್‌ಟಿಎಫ್ ಬಳಸಿದೆ ಅಷ್ಟೆ ಎಂದು ಹೇಳಿದ ಮಡಿಯಾಳ್, ಎಸ್‌ಟಿಎಫ್ ಕಣ್ಣಿಗೆ ವೀರಪ್ಪನ್ ಬಿದ್ದಿದ್ದಾನೆಯೇ ಎಂಬ ಪ್ರಶ್ನೆಗೆ ಮೌನವಾಗಿ ಉಳಿದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications