ಕರಗಿತು ಐಟಿ ಹಿನ್ನಡೆಯ ಕರಿಮೋಡ: ಪ್ರೇಂಜಿ
ಮುಂಬಯಿ : ಮಾಹಿತಿ ತಂತ್ರಜ್ಞಾನದಲ್ಲಿ ಹಿನ್ನಡೆಯ ಕಾಲ ಈಗ ಕಳೆದಿದೆ. ಇನ್ನೇನಿದ್ದರೂ ಶುಕ್ರದೆಶೆ ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಅಭಿಪ್ರಾಯ ಪಟ್ಟಿದ್ದಾರೆ. ನಗರದಲ್ಲಿ ಸುದ್ದಿಗಾರರೊಡನೆ ಬುಧವಾರ ಅವರು ಅನೌಪಚಾರಿಕವಾಗಿ ಮಾತಾಡುತ್ತಿದ್ದರು.
ಅಜೀಂ ಮಾತಿನ ಸಂಕ್ಷಿಪ್ತ ಸಾರ-
ತನ್ನ ಅತ್ಯುತ್ತಮ ಗುಣಮಟ್ಟ, ಅಗ್ಗದ ಬೆಲೆಯ ಸೇವೆಗಳಿಂದಾಗಿ ಭಾರತ ಜಾಗತಿಕ ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಮಾಡಿದೆ. ಕಳೆದ ಮಾರ್ಚ್ ವೇಳೆಗೆ ಸಾಫ್ಟ್‌ವೇರ್ ರಫ್ತಿನ ಬೆಳವಣಿಗೆಯ ಪ್ರಮಾಣದಲ್ಲಿ ಪ್ರತಿಶತ 29ರಷ್ಟು ವಿಗತಿಯಾಗಿದೆ, ಅಷ್ಟೆ. ಈ ಹಿಂದಿನ ವರ್ಷದಲ್ಲಿ ಸಾಫ್ಟ್‌ವೇರ್ ರಫ್ತಿನ ಗತಿ 50 ಪ್ರತಿಶತ ಇತ್ತು. ಹಾಗಂತ ಅದೇನೂ ಹಿನ್ನಡೆಯಲ್ಲ. ಲಾಭಾಂಶದಲ್ಲಿ ಕೊಂಚ ಕಡಿತ ಎನ್ನಬಹುದು.
ಜಾಗತಿಕ ಮಾರುಕಟ್ಟೆಯಲ್ಲಿನ ಬಿಲ್ಲಿಂಗ್ ಹಾಗೂ ಆರ್ಥಿಕ ಒತ್ತಡಗಳಿಂದ ಕಂಪನಿಗಳ ಸಿಬ್ಬಂದಿ ಕಡಿತ ಅನಿವಾರ್ಯವಾಗಿತ್ತು. ಈಗ ಸಿಬ್ಬಂದಿ ಕಡಿತಗೊಳಿಸುವ ಆತಂಕವಿಲ್ಲ. ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಒಕ್ಕೂಟದ ಲೆಕ್ಕಾಚಾರದ ಪ್ರಕಾರ, ಬರುವ ಮಾರ್ಚ್ ಹೊತ್ತಿಗೆ ಸಾಫ್ಟ್‌ವೇರ್ ಉದ್ದಿಮೆ ಪ್ರತಿಶತ 30ರಷ್ಟು ಬೆಳೆಯಲಿದೆ. ವಿದೇಶೀ ಕಂಪನಿಗಳ ಖರ್ಚು ಕಡಿತದ ಭರಾಟೆಯಿಂದ ಒಂದು ರೀತಿ ಭಾರತೀಯ ಐಟಿ ಪರಿಣತರಿಗೆ ಲಾಭವಾಗುತ್ತಿದೆ. ಅಗ್ಗದ ಬೆಲೆಗೇ ಅವರು ಭಾರತೀಯರಿಂದಲೇ ಸೇವೆ ಪಡೆದುಕೊಳ್ಳಲು ಮುಂದಾಗುತ್ತಿರುವುದೇ ಇದಕ್ಕೆ ಸಾಕ್ಷಿ.
ನಮ್ಮ ಕಂಪನಿ ಕಳೆದಾರು ತಿಂಗಳಲ್ಲಿ ನಾಲ್ಕು ಕಂಪನಿಗಳನ್ನು ತನ್ನ ತೆಕ್ಕೆಗೆ ತಂದುಕೊಂಡಿದೆ. ಮೂರು ವರ್ಷಗಳ ಹಿಂದೆ ನಮಗೆ ಆರ್ಡರ್‌ಗಳನ್ನು ಕೊಡುತ್ತಿದ್ದ ಕಂಪನಿಗಳು ಇವತ್ತು ಇನ್ನೂ ದೊಡ್ಡ ಯೋಜನೆಗಳ ಜವಾಬ್ದಾರಿ ವಹಿಸುತ್ತಿವೆ. ಇನ್ನು ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ದಿಮೆ ನಿರಾಳವಾಗಿರಬಹುದು. ಹಾಗಂತ ನಿದ್ದೆ ಮಾಡಬಾರದು !
(ಏಜೆನ್ಸೀಸ್)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications