ಬೆಂಗಳೂರಿನ ಹೊಸ ಮೇಯರ್ ತಲೆಯಲ್ಲಿ ಕಾಂಟೆಸ್ಸಾ
ಬೆಂಗಳೂರು : ಮೇಯರ್ ಗಾದಿ ಸಿಗುತ್ತಿದ್ದಂತೆ, ಸಿಎಂ ಎಸ್ಸೆಂ ಕೃಷ್ಣ ಗೆ ಶಿರ ಸಾಷ್ಟಾಂಗ ಪ್ರಣಾಮ ಮಾಡಿ ಬಂದ ಸಿ.ಎಂ.ನಾಗರಾಜ್ ತಲೆಯ ತುಂಬಾ ಈಗ ಕಾಂಟೆಸ್ಸಾ ಕಾರೇ ಓಡಾಡುತ್ತಿದೆಯಂತೆ ! ಮಹಾನಗರ ಪಾಲಿಕೆಯ ಪಡಸಾಲೆಯಲ್ಲಿ ಇಂಥದೊಂದು ಜೋಕು ತೇಲಾಡಲು ಕಾರಣವೂ ಉಂಟು.
ಬೆಂಗಳೂರಿನ ಹೊಸ ಮೇಯರ್ ನಾಗರಾಜ್ ಶೋಕೀಲಾಲ. ಆದರೆ ಈ ಹಿಂದೆ ಇದೇ ಗಾದಿಯ ಮೇಲೆ ಕೂತಿದ್ದ ಅವಿವಾಹಿತ ಕೆ.ಚಂದ್ರಶೇಖರ್ ಸರಳತೆಯ ಕಾರಣಕ್ಕೇ ಹನುಮಂತನಗರಿಗಳ ಆಪ್ತರಾಗಿದ್ದವರು. ತಮ್ಮ ಅವಧಿಯಲ್ಲಿ ಅಂಬಾಸೆಡರ್ ಕಾರಲ್ಲೇ ಚಂದ್ರಶೇಖರ್ ಬೆಂಗಳೂರು ಸುತ್ತಿದ್ದರು. ಈ ಕಾರಣ ಕಾಂಟೆಸ್ಸಾ ಕಾರು ಉಪ ಮೇಯರ್ ಓಡಾಟಕ್ಕೆ ಬಳಕೆಯಾಗಿತ್ತು. ಆದರೀಗ ನಾಗರಾಜ್ ಕಣ್ಣು ಕಾಂಟೆಸ್ಸಿನತ್ತ ನೆಟ್ಟಿದೆ ಎನ್ನುತ್ತಿದೆ ಮಹಾನಗರ ಪಾಲಿಕೆಯ ಮೂಲಗಳು.
ಈ ಹಿಂದೆ ಕಾಂಟೆಸ್ಸಾ ಕಾರು ಉಪ ಮೇಯರ್‌ಗಾಗಿ ಇದ್ದದ್ದರಿಂದ ಹೊಸ ಉಪ ಮೇಯರ್ ಜಯಲಕ್ಷ್ಮಿ ಸೀದಾ ಆ ಕಾರಿನತ್ತ ಹೊರಡುತ್ತಿದ್ದರೆ, ನಾಗರಾಜ್ ನೋಟ ಅದೇ ಕಾರಿನತ್ತ ನೆಟ್ಟರಂತೆ. ಪಾಲಿಕೆಯಲ್ಲಿರುವುದು ಒಂದೇ ಕಾಂಟೆಸ್ಸಾ ಆದ್ದರಿಂದ ಈಗ ಅದನ್ನು ಉಪ ಮೇಯರ್‌ರಿಂದ ಕಸಿದು, ಮೇಯರ್‌ಗೆ ಕೊಡುವುದೊಂದೇ ದಾರಿ. ಆಗ ಜಯಲಕ್ಷ್ಮಿ ಅಂಬಾಸೆಡರ್‌ನಲ್ಲಿ ಓಡಾಡಬೇಕಾಗುತ್ತದೆ. ಸದ್ಯಕ್ಕಂತೂ ನಾಗರಾಜ್ ಹಾಗೂ ಜಯಲಕ್ಷ್ಮಿ ಮನಸ್ಸಲ್ಲಿ ಕಾಂಟೆಸ್ಸಾ ಹರಿದಾಡುತ್ತಿದೆ.
ಇನ್ನೊಂದು ಕಾಂಟೆಸ್ಸಾ ಖರೀದಿಸಿ ಇಬ್ಬರನ್ನೂ ಸಂತೋಷ ಪಡಿಸಲು ಬಡಪಾಯಿ ಪಾಲಿಕೆಯಲ್ಲಿ ಆ ಪಾಟಿ ಹಣವಿಲ್ಲ !
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications