ಮಂಗಳೂರಲ್ಲಿ ‘ಮಹಾಭಾರತದ ಕೃಷ್ಣ’ ಡಾ.ನಿತೀಶ್ ಭಾರದ್ವಾಜ್
* ಕೆ.ಸದಾಶಿವ
ಮಂಗಳೂರು : ದೇಶದ ಮಾಧ್ಯಮ ಕ್ಷೇತ್ರಕ್ಕೆ ಉತ್ತಮ ಮಾಧ್ಯಮ ನೀತಿಯ ಜರೂರತ್ತಿದೆ ಎಂದು ಹಿಂದಿ ಕಿರುತೆರೆ ಧಾರಾವಾಹಿ ನಟ- ನಿರ್ದೇಶಕ- ನಿರ್ಮಾಪಕ ಡಾ.ನಿತೀಶ್ ಭಾರದ್ವಾಜ್ ಅಭಿಪ್ರಾಯಪಟ್ಟರು.
ಭಾರತೀಯ ಸಾರ್ವಜನಿಕ ಸಂಸ್ಥೆಯ ಮಂಗಳೂರು- ಮಣಿಪಾಲ ಘಟಕ ಇತ್ತೀಚೆಗೆ ಏರ್ಪಡಿಸಿದ್ದ ‘ಸಮಾಜದ ಮೇಲೆ ಮನೋರಂಜನಾ ಚಾನೆಲ್‌ಗಳ ಪ್ರಭಾವ’ ಕುರಿತ ವಿಚಾರ ಸಂಕಿರಣದಲ್ಲಿ ಮಾತಾಡಿದರು. ಮಾಧ್ಯಮಗಳು ಮನರಂಜನೆಯನ್ನೇ ಮುಖ್ಯವಾಗಿಸಿಕೊಂಡು ಪ್ರಾಥಮಿಕ ಉದ್ದೇಶವಾದ ಮಾಹಿತಿ ಒದಗಿಸುವಿಕೆ ಮತ್ತು ಸಮಾಜ ತಿದ್ದುವ ಕೆಲಸವನ್ನು ಮರೆತಂತಿದೆ. ಕೆಲವು ಇಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳಂತೂ ತಮ್ಮ ಸಮಾಚಾರ ನೀಡುವಿಕೆಯಲ್ಲಿ ಗುಪ್ತ ಕಾರ್ಯಸೂಚಿಯನ್ನು ಅನುಸರಿಸುತ್ತಿವೆ ಎಂದು ಭಾರದ್ವಾಜ್ ಟೀಕಿಸಿದರು.
ಗುಜರಾತ್ ಗಲಭೆ ಮತ್ತು ಪೆಟ್ರೋಲಿಯಂ ಪಂಪ್ ವಿವಾದದ ಪ್ರಸಾರದಲ್ಲಿ ಟಿ.ವಿ. ಸುದ್ದಿ ಮಾಧ್ಯಮದ ನಿಲುವನ್ನು ಉದಾಹರಣೆಯಾಗಿ ಕೊಟ್ಟ ನಿತೀಶ್, ಕೇವಲ ಒಂದು ವರ್ಗ ಮಾತ್ರ ಹಿಂಸೆಗೆ ಒಳಗಾಗಿದೆ ಎಂಬಂತೆ ಸುದ್ದಿ ಬಿತ್ತರಿಸಿದ್ದನ್ನು ನೆನಪಿಸಿದರು.
ಭಾರತೀಯ ಇಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ಬಿ.ಬಿ.ಸಿಯನ್ನು ಅನುಕರಿಸಲು ಹೋಗಿ ತಮ್ಮತನವನ್ನು ಕಳಕೊಳ್ಳುತ್ತಿವೆ. ಸ್ವಕೀಯ ಗುಪ್ತ ಕಾರ್ಯಸೂಚಿಗೆ ಜೋತುಬೀಳದೆ, ಸುದ್ದಿಯನ್ನು ಯಥಾವತ್ತಾಗಿ ತಲುಪಿಸಲು ಪ್ರಯತ್ನಿಸಬೇಕು ಎಂದು ಕರೆ ಕೊಟ್ಟರು.
ಸಿನಿಮಾ ಮತ್ತು ಕಿರುತೆರೆಯಲ್ಲಿ ಸೆಕ್ಸ್ ಮತ್ತು ಕ್ರೌರ್ಯದ ವಸ್ತುಗಳೇ ಹೆಚ್ಚಾಗಿವೆ. ಮಕ್ಕಳು ಇದರ ಮೋಡಿಗೆ ಒಳಗಾಗಿ ಕ್ರೂರ ಪ್ರವೃತ್ತಿಗೆ ಇಳಿಯುವ ಅಪಾಯವಿದೆ. ಜೊತೆಗೆ ಸೆಕ್ಸ್ ಮತ್ತು ಕ್ರೆೃಂ ಸರಕಿನ ಕುರುಡು ಅನುಕರಣೆಯಿಂದ ಸೃಜನಶೀಲತೆಯೂ ಸತ್ತು ಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಭಾರತೀಯ ಸಾರ್ವಜನಿಕ ಸಂಪರ್ಕ ಸಂಸ್ಥೆ ಮಂಗಳೂರು- ಮಣಿಪಾಲ ಘಟಕದ ಅಧ್ಯಕ್ಷ ಡಾ.ಮಾಧವ ಎಸ್.ಹೆಜಮಾಡಿ, ಕಾರ್ಯದರ್ಶಿ ವೆಂಕಟೇಶ ಎನ್.ಬಾಳಿಗ, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ಶೆಟ್ಟಿ ಸಂಕಿರದಣದಲ್ಲಿ ಹಾಜರಿದ್ದರು.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications