ಗೋವಾಕ್ಕೆ ತೆರಳಲು ಹೆದರುತ್ತಿರುವ ಉತ್ತರ ಕನ್ನಡ ಜಿಲ್ಲೆಯ ವ್ಯಾಪಾರಿಗಳು !
ಅಂಕೋಲಾ: ಗೋವಾ ಕನ್ನಡಿಗರಿಗೆ ವಿಶೇಷ ರಕ್ಷಣೆ ಒದಗಿಸುವಂತೆ ಉತ್ತರಕನ್ನಡದ ಜಿಲ್ಲಾ ಯುವ ಒಕ್ಕೂಟ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಆಗ್ರಹಿಸಿದೆ.
ಇತ್ತೀಚೆಗೆ ಗೋವಾದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಕನ್ನಡಿಗ ಆನಂದು ಕುರ್ಡೇಕರ ಅವರ ಸಾವಿನ ಬಗ್ಗೆ ತನಿಖೆ ನಡೆಸಬೇಕು. ಅಲ್ಲದೆ ವ್ಯವಹಾರಕ್ಕಾಗಿ ಗೋವಾಕ್ಕೆ ತೆರಳುವ ಹಾಗೂ ಅಲ್ಲಿ ಉದ್ಯೋಗಿಗಳಾಗಿ ನೆಲೆಸಿರುವ ಕನ್ನಡಿಗರಿಗೆ ರಕ್ಷಣೆ ಒದಗಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಯುವ ಒಕ್ಕೂಟದ ಅದ್ಯಕ್ಷ ಶಶಿಕಾಂತ ಡಿ. ಶೆಟ್ಟಿ ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.
ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಕನ್ನಡಿಗರು ಗೋವಾಕ್ಕೆ ವಿವಿಧ ವ್ಯವಹಾರಗಳ ಮೇಲೆ ತೆರಳುತ್ತಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಕೆಲವು ಅಹಿತಕರ ಘಟನೆಗಳಿಂದ ವ್ಯಾಪಾರಕ್ಕಾಗಿ ಗೋವಾಕ್ಕೆ ತೆರಳಲು ಉತ್ತರ ಕನ್ನಡದ ಯುವಕರು ಹಿಂಜರಿಯುತ್ತಿದ್ದಾರೆ. ಚಿನ್ನದ ವ್ಯಾಪಾರಿ ಆನಂದು ಅವರು ಸಂಶಯಾತ್ಮಕ ರೀತಿಯಲ್ಲಿ ಸಾವನ್ನಪ್ಪಿದ್ದು, ಅವರ ಹೆಣ ಬಾವಿಯಲ್ಲಿ ದೊರೆತಿದ್ದರೂ ಅಲ್ಲಿನ ಪೊಲೀಸರು ಅದನ್ನು ಆಕಸ್ಮಿಕ ಸಾವು ಎಂದು ಘೋಷಿಸಿ ಕೈ ತೊಳೆದುಕೊಂಡಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸರಾದರೂ ಗಮನ ಹರಿಸಬೇಕು ಎಂದು ಶಶಿಕಾಂತ್ ಮನವಿ ಮಾಡಿಕೊಂಡಿದ್ದಾರೆ.
ಈ ಮನವಿಗೆ ಸರಕಾರ ಸ್ಪಂದಿಸದೇ ಇದ್ದಲ್ಲಿ ಯುವ ಒಕ್ಕೂಟ ಸದ್ಯದಲ್ಲಿಯೇ ಹೋರಾಟ ಆರಂಭಿಸಲಿದೆ ಎಂದು ಶಶಿಕಾಂತ್ ಎಚ್ಚರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications