• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಸ್ಕೃತಿಯ ಚೌಕಟ್ಟಿನಲ್ಲಿ ಮಾಸುತ್ತಿರುವ ಊರಹಬ್ಬದ ಚಿತ್ರ

By Super
|

ಹೋಳಿ ಹುಣ್ಣಿಮೆಯ ಬೆನ್ನಿಗೆ ಬಿದ್ದ ಸೌರ+ಚಾಂದ್ರ ಚಿತ್ರಾ ಪೂರ್ಣಿಮೆ. ಬೇಸಗೆ ಧಗೆಯ ಒಡಲಲ್ಲಿ ಅಡಗಿಸಿಕೊಂಡ ಪೂರ್ಣಿಮೆ. ದುಂಡು ಚಂದ್ರಮನ ಹಾಲು ಚೆಲ್ಲಿದಂಥ ಬೆಳದಿಂಗಳ ಪೂರ್ಣಿಮೆ. ಮಳೆ ಹನಿದೀತೆ. ಬೆಂಗಳೂರಿನ ದುಂಡು ಮಲ್ಲಿಗೆ ಸುರಿಮಳೆಯ ವಾರ್ಷಿಕ ಸಂಭ್ರಮಕ್ಕೆ ಮಳೆ ಮುತ್ತುಗಳು ಜೋಡಿಯಾದಾವೆ!? ಇದು ಬೇಸಗೆಯ ನಿರೀಕ್ಷೆ !

ಚಿತ್ರಾ ಪೂರ್ಣಿಮಾದಂದು ಬೆಂಗಳೂರು ಕರಗ. ಸಾಮಾನ್ಯವಾಗಿ ಕರಗದಂದು ಮಳೆ ಹನಿಯುವುದು ಸಂಪ್ರದಾಯ. ಮಳೆ ತುಂತುರಿನ ಸಿಂಚನದ ಪುಳಕದೊಂದಿಗೆ, ದುಂಡು ಮಲ್ಲಿಗೆಯ ಧಾರೆಯಲ್ಲಿ ಧರ್ಮರಾಯನ ಗುಡಿಯಿಂದ ಹೊರಡುವ ಕರಗ ಮತ್ತೆ ಗುಡಿ ಸೇರುವುದು ಹುಣ್ಣಿಮೆಯ ತುಂಬು ಚಂದ್ರಮ ಕರಗತೊಡಗಿ, ಬೆಳ್ಳಿ ರಥದಲಿ ಸೂರ್ಯ ಪಯಣಕ್ಕೆ ಸಜ್ಜಾಗುವ ಹೊತ್ತಿಗೆ. ಕರಗದ ಹಾದಿಯುದ್ದಕ್ಕೂ ಭಕ್ತರ ಸಂಭ್ರಮ. ಪೂಜೆ, ಜಯಘೋಷ, ಕುಣಿತ. ಅಲಸೂರು ಪೇಟೆ, ತಿಗಳರ ಪೇಟೆ, ಗೊಲ್ಲರ ಪೇಟೆ, ನಗರ್ತ ಪೇಟೆ, ಗಾಣಿಗರ ಪೇಟೆ, ಕುಂಬಾರ ಪೇಟೆ, ದೇವಾಂಗ ಪೇಟೆ, ಜೋರಿ ಪೇಟೆ, ಚಿಕ್ಕ ಪೇಟೆ, ಕಿಲಾರಿ ಪೇಟೆ, ಅಕ್ಕಿ ಪೇಟೆ, ಅಣ್ಣಮ್ಮನ ಗುಡಿ ಪ್ರದೇಶಗಳಲ್ಲಿ ಸಂಚರಿಸಿದ ಕರಗ ಮತ್ತೆ ಧರ್ಮರಾಯನ ಗುಡಿ ಸೇರುತ್ತದೆ. ಇದು ಕ್ರಮ ತಪ್ಪದ ಕರಗ.

ದಸರೆ ನಾಡಹಬ್ಬವಾದರೆ, ಕರಗ ಊರ ಹಬ್ಬ! ವಹ್ನಿಕುಲ ಕ್ಷತ್ರಿಯ ಬಾಂಧವರ ಆರಾಧನೆಯೆಂದು ಪ್ರಸಿದ್ಧವಾದರೂ, ಕರಗ ಊರಿಗೆ ಸೇರಿದ ಹಬ್ಬ. 'ಮನುಷ್ಯ ಜಾತಿ ತಾನೊಂದೆ ವಲಂ" ಎಂದು ಎಲ್ಲರೂ ಬೆರೆಯುವ ಸಂಭ್ರಮ. ಊರಹಬ್ಬಗಳೇ ಹಾಗೆ; ಹಬ್ಬಕ್ಕೊಂದು ಕಾರಣ. ಸಂಭ್ರಮವೇ ಹಬ್ಬದ ಹೂರಣ.

ನೆನಪಿನ ಪೆಠಾರಿಯ ಸಿರಿ...

ಕೆರೆ ಕಟ್ಟೆ ಇಲ್ಲದಿದ್ದರೂ, ದೇಗುಲ ಇರದ ಊರು ಎಲ್ಲೂ ಇದ್ದಂತಿಲ್ಲ . ದೇಗುಲವೆಂದರೆ ಅಚ್ಚುಕಟ್ಟಾದ ಕಟ್ಟಡವೇ ಇರಬೇಕೆಂದಿಲ್ಲ ; ಸಣ್ಣದೊಂದು ಗೂಡಿನೊಳಗೂ ದೇವರು ಇರಬಲ್ಲ . ಹನುಮ, ಶಿವ ಯಾರಾದರೂ ಆದೀತು, ಶಕ್ತಿ ದೇವತೆಗಳಾದ ಮಾರಿ, ಚಂಡಿ, ದುರ್ಗೆಯರಾದರೂ ನಡೆದೀತು- ಊರಿಗೊಬ್ಬ ದೇವರು, ಆ ದೇವರೇ ಊರಿಗೆ ಊರವರಿಗೆ ಕಾವಲು. ಗೂರ್ಖನಂತೆ ಹಗಲಿರುಳೂ ವರ್ಷವಿಡೀ ಕಾಯುವ ಕೈ ಹಿಡಿಯುವ ಊರ ದೇವರಿಗೊಂದು ಆರಾಧನೆ. ಅದು ಊರಹಬ್ಬ. ಊರವರ ಹಬ್ಬ.

ಸಾಮಾನ್ಯವಾಗಿ ಊರಹಬ್ಬ ನಡೆಯುವುದು ಬೇಸಗೆಯ ದಿನಗಳಲ್ಲಿ . ಭೂಮಿ ತಾಯಿಯ ಚೊಚ್ಚಿಲ ಮಗ ರೈತನಿಗೆ ಬಿಡುವು ದೊರೆಯುವ ದಿನಗಳವು. ಮಳೆಗಾಲದ ಕೃಷಿ ಕೆಲಸಗಳೆಲ್ಲ ಮುಗಿದು, ಕಟಾವಾದ ಬೆಳೆ ಮನೆ ತುಂಬಿ, ರೈತನಿಗೆ ಒಂದಿಷ್ಟು ಆರಾಮ ಎನಿಸುತ್ತದೆ. ದೇವರು ದಿಂಡರು ನೆನಪಿಗೆ ಬರುವುದು ಆಗಲೇ. ನಾಟಕಗಳು ಕಳೆಗಟ್ಟುವುದು, ಮದುವೆ ಮುಂಜಿ ಸಂಭ್ರಮ ಮನೆ ತುಂಬುವುದು ಆಗಲೇ.

ಊರಹಬ್ಬವೆಂದರೆ ದೇವರ ಆರಾಧನೆ ಮಾತ್ರವಲ್ಲ ; ಕಲಾರಾಧನೆಯೂ ಹೌದು. ಕುರುಕ್ಷೇತ್ರ, ದೇವಿ ಮಹಾತ್ಮೆ, ಶನಿ ಮಹಾತ್ಮೆ , ದಶಾವತಾರ, ಶಿವ ಜಲಂಧರಗಳಂಥ ನಾಟಕಗಳಿಗೆ ಜೀವ ಬರುವುದು ಆಗಲೇ. ಉಳುಮೆ, ನಾಟಿ, ಕೊಯ್ಲುಗಳಲ್ಲಿ ಮುಳುಗಿದ ರೈತರು ಊರ ಮುಂದಿನ ಬಯಲು ಅಥವಾ ಸ್ಕೂಲು ಅಂಗಳದಾಗೆ ಡ್ರಾಮ ಪ್ರಾಕ್ಟೀಸು ಮಾಡುತ್ತಿದ್ದರೆ, ಊಟ ಮುಗಿಸಿದ ಮನೆ ಮಕ್ಕಳೆಲ್ಲ ಡ್ರಾಮ ಪ್ರಾಕ್ಟೀಸಿಗೆ ಸಾಕ್ಷಿ .

ಹಬ್ಬ ಇಷ್ಟಕ್ಕೇ ಮುಗಿಯುವುದಿಲ್ಲ , ಅದು ಊರಿಗಷ್ಟೆ ಸೀಮಿತವಾದುದೂ ಅಲ್ಲ . ಅದು ದುಬಾರಿಯ ಬಾಬತ್ತು . ದೇವರ ಆರಾಧನೆಗೆ ಯಾವುದೇ ಕೊರೆಯಾಗಬಾರದು. ಅನ್ನ ಸಂತರ್ಪಣೆಯೂ ಭರ್ಜರಿಯಾಗಿರಬೇಕು. ರಥೋತ್ಸವ ವೈಭವವಾಗಿರಬೇಕು. ಮಾರಿ ಹಬ್ಬವಾದರೆ ಊರ ತುಂಬ ಕೋಳಿ ಕುರಿ ಕೋಣಗಳ ರಕ್ತದ ಘಮಲೇ ತುಂಬಿಕೊಂಡೀತು. ಯಾವ್ಯಾವುದೋ ಊರಲ್ಲಿ ಬೇರು ಬಿಟ್ಟ ಕಳ್ಳುಬಳ್ಳಿಗಳೆಲ್ಲ ಹುಟ್ಟೂರ ನೆನಪಿಸಿಕೊಳ್ಳುವುದು ಊರಹಬ್ಬದ ಹೊತ್ತಿನಲ್ಲೇ. ಹಬ್ಬದ ಸುದ್ದಿ ತಂದ ಕಾರ್ಡಿನ ಬೆನ್ನೇರಿ ಬರುವ ನಂಟರ ಗಿಜಿಗಿಜಿಯಿಂದ, ತಾಳಿಗೆ ಕೊರಳೊಡ್ಡಿ ನಿಂತ ವಧುವಿನಂತೆ ಊರು ಹೊಸ ರೂಪಿನಲ್ಲಿ ಜಾತ್ರೆಯ ಸಂಭ್ರಮದಿಂದ ಜಗಮಗಿಸತೊಡಗುತ್ತದೆ. ಚಿಳ್ಳೆಪಿಳ್ಳೆಗಳಿಗಂತೂ ತೀರದ ಸಂಭ್ರಮ. ಟ್ರಂಕೊಳಗಿನ ಮಡಿಕೆ ಕೆಡದ ಬಟ್ಟೆಗಳು ಹೊರಬರುವುದು ಆಗಲೇ. ಕಾಡಿಬೇಡಿ ಪಡೆದ ಗಾಲಿ ರುಪಾಯಿಗಳ ಚಡ್ಡಿ ಜೇಬಿಗಿಳಿಬಿಟ್ಟ ಗಂಡು ಮಕ್ಕಳಿಗೆ ಪಿಚ್ಚರು ಪೆಟ್ಟಿಗೆ, ಪೀಪಿ ಕೊಳ್ಳುವ ಆಸೆ. ಹೆಣ್ಣು ಮಕ್ಕಳಿಗೆ ಟೇಪು, ಬಳೆ, ಬಟ್ಟು .. ಒಂದೇ ಎರಡೇ. ರಂಕಲು ರಾಟೆಯಂತೆ ಮನಸ್ಸುಗಳು ಸುತ್ತುತ್ತಲೇ ಇರುತ್ತವೆ.

ದೇವರಿಗೆ ನಿತ್ಯ ತಪ್ಪದ ಹೂವು ನೀರಂತೆ ಯಾವ ವರ್ಷವೂ ಊರ ಹಬ್ಬ ತಪ್ಪುವಂತಿಲ್ಲ . ತಪ್ಪಿದರೆ ದೇವರಿಗೆ ಕೆಂಡಾಮಂಡಲ ಕೋಪ. ಮೊದಲೇ ಶಕ್ತಿವಂತ. ನರ ಮನುಷರು ತಪ್ಪಿ ಬದುಕುವುದುಂಟಾ? ಪಶು ಪಕ್ಷಿ ಮರ ಗಿಡಗಳಲ್ಲೂ ದೇವರ ಛಾಯೆ ಕಾಣುವ ಗ್ರಾಮೀಣರ ನಂಬಿಕೆಗಳೇ ಇಂಥವು. ಗ್ರಾಮ ಸಂಸ್ಕೃತಿಯ ಬೇರುಗಳಿರುವುದೇ ಇಂಥ ನಂಬಿಕೆಗಳಲ್ಲಿ . ಊರಹಬ್ಬವೂ ಹಾಗೆಯೇ; ಅದು ಅಸ್ತಿತ್ವದಲ್ಲಿರುವುದೇ ಆಸ್ತಿಕರ ಎದೆಯಲ್ಲಿ .

ಸಡಿಲವಾದ ಬೇರು, ರೆಕ್ಕೆಗಟ್ಟಿದ ಬದುಕು

ಕೂಲಿಗಳಂತೆ ಮಣಭಾರದ ಬ್ಯಾಗು ಹೊತ್ತು ಸ್ಕೂಲುಗಳಿಗೆ ಹೋಗಿ, 'ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್‌" ಗಟ್ಟು ಹೊಡೆಯುವ ಮಕ್ಕಳ ಕಣ್ಣುಗಳಲ್ಲಿ ಊರಹಬ್ಬದ ಸಂಭ್ರಮದ ಚಿತ್ರಗಳನ್ನು ತುಂಬುವುದಾದರೂ ಹೇಗೆ? ಹೊಸಿತಿಲಲ್ಲಿ ನಿಂತು ಮನೆಯಾಳಗೆ ಇಣುಕುತ್ತಿರುವ ಜಾಗತೀಕರಣ ಸಂದರ್ಭದ ಸಾಂಸ್ಕೃತಿಕ ವಿಸ್ಮೃತಿಯ ಅಪಾಯವಿದು. ಊರುಗಳ ಅಸ್ತಿತ್ವವೇ ಕರಗಿ, ಜಾಗತಿಕ ಹಳ್ಳಿ ಪರಿಕಲ್ಪನೆಯ ಜಮಾನದಲ್ಲಿ ಊರಹಬ್ಬಕ್ಕೆಲ್ಲಿ ಉಳಿವು?

ಬೆಂಗಳೂರು ಕರಗವನ್ನೇ ನೋಡಿ: ಮಾಧ್ಯಮಗಳ ಭರಾಟೆಯಿರದ ದಿನದಲ್ಲಿ , ಹುಣ್ಣಿಮೆಯನ್ನೇ ಲೆಕ್ಕವಿಟ್ಟು , ಕರಗಕ್ಕೆ ಸಾವಿರಾರು ಜನ ಸೇರುತ್ತಿದ್ದರು. ಬೆಂಗಳೂರಷ್ಟೇ ಅಲ್ಲ , ಸುತ್ತ ಮುತ್ತಲಿನ, ದೂರದೂರುಗಳಿಂದಲೂ ಜನ ಧಾವಿಸಿ ಬರುತ್ತಿದ್ದರು. ಈಗ ಕರಗದ ಆಕರ್ಷಣೆ ಕರಗಿದೆ. ದೂರದೂರಿನ ಜನರಿರಲಿ, ಬೆಂಗಳೂರಿಗರೂ ಟೀವಿಯೆದುರಿನಿಂದ ಎದ್ದು ಬೆಳದಿಂಗಳ ಕರಗಕ್ಕೆ ಬರುತ್ತಿಲ್ಲ . ಎಷ್ಟೋ ಮಂದಿಗೆ ಕರಗ ನೆನಪಾಗುವುದು ಮಾಧ್ಯಮಗಳ ಭರಾಟೆಯಿಂದ. ಹತ್ತಾರು ವರ್ಷ ಬೆಂಗಳೂರಿನಲ್ಲಿ ವಾಸವಿದ್ದರೂ, ಕರಗದ ದೃಶ್ಯಗಳನ್ನು ಟೀವಿಯಲ್ಲಿ ನೋಡಿದವರೇ ಹೆಚ್ಚು . ನಾಡಹಬ್ಬದಂತೆ ಪ್ರಸಿದ್ಧವಾಗಿದ್ದ ಕರಗ ಊರಹಬ್ಬವಾಗಿ, ಈಗ ಕೆಲವು ಪ್ರದೇಶಗಳ ಹಬ್ಬವಾಗಿ ಬದಲಾಗಿದೆ. ಮುಂದೆ?

ಇದು ಕರಗದ ಕಥೆ ಮಾತ್ರವಲ್ಲ , ಎಲ್ಲ ಊರಹಬ್ಬಗಳ ದುರಂತವೂ ಇದೇ. ವಿಶ್ವದ ಗಮನ ಸೆಳೆದಿದ್ದ ನಾಡಹಬ್ಬ ದಸರೆಯೇ ನೀರಿಗೆ ಬಿದ್ದ ಚಿತ್ರದಂಥೆ ಬಣ್ಣ ಮಾಸುತ್ತಿರುವಾಗ ಊರಹಬ್ಬಗಳ ಪಾಡೇನು? ಉಳಿದಿರುವುದು ಊರಹಬ್ಬಗಳ ಚೌಕಟ್ಟು ಮಾತ್ರ. ಚೌಕಟ್ಟಿನೊಳಗಿನ ಚಿತ್ರ ದಿನೇ ದಿನೇ ಕರಗುತ್ತಿದೆ. ಚೌಕಟ್ಟಿನಲ್ಲಿ ಹೊಸತಾಗಿ ಚಿತ್ರ ಬಿಡಿಸುವ ಕಸುವುಳ್ಳವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ನಮ್ಮ ಸಂಸ್ಕೃತಿಯ ಹೆಮ್ಮೆ ಬಡಕಲಾಗಿದೆ. ಈ ಸಾಂಸ್ಕೃತಿಕ ದುರಂತದ ಹೊಣೆ ನಮ್ಮೆಲ್ಲರದೂ. ಸಂಸ್ಕೃತಿಯನ್ನು ಉಳಿಸಬೇಕಾದವರೂ ನಾವೇ.

ಏಪ್ರಿಲ್‌ ತಿಂಗಳ 27 ನೇ ತಾರೀಖು, ಶನಿವಾರ ರಾತ್ರಿ ಬೆಂಗಳೂರು ಕರಗ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is the cultural essence of fair and festivals becoming stale?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more