ಕರ್ನಾಟಕದ ರಸ್ತೆಗಳ ಅಭಿವೃದ್ಧಿಗೆ ಹಣ ತೊಡಗಿಸಲು ಕ್ವೀನ್ಸ್‌ಲ್ಯಾಂಡ್ ಮುಂದು
ಬೆಂಗಳೂರು : ಕರ್ನಾಟಕದ ರಸ್ತೆ ಮೂಲಭೂತ ಸೌಕರ್ಯಗಳ ಯೋಜನೆಗಳಿಗೆ ಹಣ ಒದಗಿಸಲು ಕ್ವೀನ್ಸ್‌ಲ್ಯಾಂಡ್ ಸರ್ಕಾರ ಮುಂದೆ ಬಂದಿದೆ ಎಂದು ಲೋಕೋಪಯೋಗಿ ಸಚಿವ ಧರಮ್ ಸಿಂಗ್ ಹೇಳಿದ್ದಾರೆ.
ಭಾರತದಲ್ಲಿನ ಕ್ವೀನ್ಸ್‌ಲ್ಯಾಂಡ್‌ನ ವಿಶೇಷ ಆಯುಕ್ತ ಮೈಕ್ ಅಹರ್ನ್ ನೇತೃತ್ವದ ನಿಯೋಗದೊಂದಿಗೆ ಪ್ರಾಥಮಿಕ ಹಂತದ ಮಾತುಕತೆ ನಡೆಸಿದ ನಂತರ ಧರಮ್ ಸಿಂಗ್ ಸುದ್ದಿಗಾರರೊಡನೆ ಮಾತಾಡುತ್ತಿದ್ದರು. ಮುಂದಿನ ವಾರ ಕ್ವೀನ್ಸ್‌ಲ್ಯಾಂಡ್ ಸರ್ಕಾರದ ತಂಡ ಇಲ್ಲಿಗೆ ಬರಲಿದ್ದು, ಕರ್ನಾಟಕ ಸರ್ಕಾರದೊಡನೆ ವಿವರಣಾತ್ಮಕ ಮಾತುಕತೆ ನಡೆಸಲಿದೆ ಎಂದರು.
ಕ್ವೀನ್ಸ್‌ಲ್ಯಾಂಡ್‌ನ ನೆರವು ಪಡೆಯಲು ಅರ್ಹವಾದ ಕೆಲವು ಮೂಲಭೂತ ಸೌಕರ್ಯ ವಂಚಿತ ರಸ್ತೆಗಳನ್ನು ಪಟ್ಟಿ ಮಾಡಲು ಇಲಾಖಾ ಅಧಿಕಾರಿಗಳು ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ನಿರ್ದೇಶಿಸಿದ್ದೇನೆ. 220 ಕಿಲೋ ಮೀಟರ್ ಉದ್ದದ ಮೈಸೂರು- ಬಂಟ್ವಾಳ ರಸ್ತೆ ಅಭಿವೃದ್ಧಿಗೆ ಮಲೇಷಿಯಾ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಸಚಿವರು ಹೇಳಿದರು.
ಇನ್ನು 3 ವರ್ಷಗಳಲ್ಲಿ ಬೆಂಗಳೂರು - ಮೈಸೂರು ಕಾರಿಡಾರ್
ಬೆಂಗಳೂರು- ಮೈಸೂರ್ ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆಗೆ ಹಣ ಕಾಸಿನ ನೆರವು ನೀಡಲು ಐಸಿಐಸಿಐ ಮತ್ತು ಹುಡ್ಕೋ ಒಪ್ಪಿವೆ. ಕಲ್ಯಾಣಿ ಗ್ರೂಪ್‌ಗೆ ಕಾರಿಡಾರ್ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಸದ್ಯದಲ್ಲೇ ಈ ಯೋಜನೆಯ ವಿತ್ತ ಒಪ್ಪಂದಗಳಾಗಲಿವೆ. ಇನ್ನು 3 ವರ್ಷಗಳಲ್ಲಿ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಪೂರ್ಣವಾಗಲಿದೆ. ಬೆಂಗಳೂರು- ಮೈಸೂರು ಮಾರ್ಗದಲ್ಲಿ ರಾಮನಗರದವರೆಗೆ 4 ಸಾಲಿನ ರಸ್ತೆಗಳನ್ನು ನಿರ್ಮಿಸುವ 93 ಕೋಟಿ ರು. ಅಂದಾಜು ವೆಚ್ಚದ ಯೋಜನೆಯ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ ಎಂದು ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications