ಕ್ರಿಕೆಟ್‌ಗಾಗಿ ಶಾಲೆಗೆ ಚಕ್ಕರ್ ಕೊಟ್ಟ ವಿದ್ಯಾರ್ಥಿಗಳಿಗೆ ರಾಕ್ಷಸನಾದ ಟೀಚರ್
ಗುವಾಹಟಿ : 3 ತಾಸುಗಳ ಕಾಲ ಕುಕ್ಕರಗಾಲಲ್ಲಿ ಕೂರುವುದು, 7 ದಿನ ಕ್ಲಾಸ್ ರೂಂ ಕಸ ಗುಡಿಸುವುದು, ಕೋಣೆಯಾಂದರಲ್ಲಿ 3 ದಿನಗಳ ಕಾಲ ಬಂಧನ, 50 ಪುಟಗಳಷ್ಟು ಬರೆಯುವ ತ್ರಾಸು ಹಾಗೂ 50 ರುಪಾಯಿ ದಂಡ. ಇದು ಶಾಲೆಗೆ ಚಕ್ಕರ್ ಹೊಡೆದು ಕ್ರಿಕೆಟ್ ನೋಡಲು ಹೋದ ಹುಡುಗರಿಬ್ಬರಿಗೆ ಸಿಕ್ಕಿರುವ ಶಿಕ್ಷೆ !
ಕಳೆದ ಮಂಗಳವಾರ ನಡೆದ ಭಾರತ- ಜಿಂಬಾಬ್ವೆ ಒಂದು ದಿನದ ಕ್ರಿಕೆಟ್ ಪಂದ್ಯ. ಯುವರಾಜ್ ಸಿಂಗ್ ಹಾಗೂ ದಿನೇಶ್ ಮೊಂಗಿಯಾ ಸುರಿಸುತ್ತಿದ್ದ ರನ್ ಮಳೆಯಲ್ಲಿ ಮಿಂದು ಮೈಮರೆತ ಒರಿಸ್ಸಾದ ಡಿಸ್ನಿಲ್ಯಾಂಡ್ ಶಾಲೆಯ ಇಬ್ಬರು ಹುಡುಗರಿಗೆ, ಈ ಪರಿಯ ಶಿಕ್ಷೆ ಸಿಗುವುದೆಂಬ ಕಿಂಚಿತ್ತೂ ನಿರೀಕ್ಷೆಯಿರಲಿಲ್ಲ. ಮರುದಿನ ಶಾಲೆಗೆ ಹೋದರೆ, ಕ್ರಿಕೆಟ್‌ಗೆ ನೋಡಲು ಹೋಗಿದ್ದಕ್ಕೆ ಟೀಚರ್ ಕೊಟ್ಟ ಶಿಕ್ಷೆ ಹುಟ್ಟುಹಾಕಿದ್ದು ಆಶ್ಚರ್ಯ, ಭಯ.
ನಕುಲ್ ಬರುವಾ, ಕಣ್ಣಲ್ಲಿ ನೀರು ತುಂಬಿಕೊಂಡೇ ಕೇಳುತ್ತಾರೆ- ಇದು ಯಾವ ಪರಿಯ ಶಿಕ್ಷೆ? ತುಂಟತನ ಇಲ್ಲದ ಮಕ್ಕಳಿರುತ್ತಾರೆಯೇ? ಯಾರಾದರೂ ಈ ರೀತಿ ಗೋಳುಹೊಯ್ದುಕೊಳ್ಳುವರೇ? ಅಂದಹಾಗೆ, ನಕುಲ್ ಶಿಕ್ಷೆಗೆ ಗುರಿಯಾದ ಒಬ್ಬ ಹುಡುಗನ ತಂದೆ.
ಸಾಮಾನ್ಯವಾಗಿ ಕ್ರಿಕೆಟ್ ನಡೆಯುವ ಊರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ರಜೆ ಘೋಷಿಸುತ್ತಾರೆ. ಆದರೆ ಆವತ್ತು ರಜೆ ಘೋಷಿಸಿರಲಿಲ್ಲ. ಶಾಲಾ- ಕಾಲೇಜುಗಳಲ್ಲಿ ಗೈರಾದ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು. ಆದರೆ ಈ ಇಬ್ಬರು ಹುಡುಗರಿಗೆ ಬಂದ ಗತಿ ಬೇರಾವ ಮಕ್ಕಳಿಗೂ ಬರಲಿಲ್ಲ. ಇಷ್ಟೊಂದು ಶಿಕ್ಷೆ ಬೇಕಿತ್ತೇ ಅಂತ ಶಾಲೆಯ ಮುಖ್ಯಸ್ಥರನ್ನು ಪ್ರಶ್ನಿಸಿದರೆ, ಅವರು ಮುಗುಮ್ಮ. ಏನೂ ಹೇಳಲು ಇಚ್ಚಿಸುತ್ತಿಲ್ಲ.
ಈ ಪರಿಯ ಶಿಕ್ಷೆ ಕೊಟ್ಟಿರುವ ಶಾಲೆಯನ್ನು ನೀವು ನೋಡಿದ್ದೀರಾ?
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications