ವಿಹೆಚ್‌ಪಿ-ಭಜರಂಗದಳ ನಿಷೇಧಕ್ಕೆ ಸಮತಾ-ತೃಣಮೂಲ-ಜೆಡಿಯು ಒತ್ತಾಯ
ನವದೆಹಲಿ : ಒರಿಸ್ಸಾ ವಿಧಾನಸಭೆಯ ಮೇಲೆ ಶನಿವಾರ ದಾಳಿ ನಡೆಸಿದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳನ್ನು ನಿಷೇಧಿಸುವಂತೆ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದ ಪ್ರಮುಖ ಪಾಲುದಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತೃಣಮೂಲ ಕಾಂಗ್ರೆಸ್, ಸಮತಾ ಪಕ್ಷ ಹಾಗೂ ಸಂಯುಕ್ತ ಜನತಾದಳ ಪಕ್ಷಗಳ ಮುಖಂಡರು ವಿಹೆಚ್‌ಪಿ ಹಾಗೂ ಭಜರಂಗ ದಳಗಳನ್ನು ನಿಷೇಧಿಸುವಂತೆ ಸೋಮವಾರ ಲೋಕಸಭೆಯಲ್ಲಿ ದನಿ ಎತ್ತಿದರು. ಮೂಲಭೂತವಾದವನ್ನು ಯಾವುದೇ ಸ್ವರೂಪದಲ್ಲಿ ದೇಶದೊಳಗೆ ಬರಮಾಡಿಕೊಳ್ಳಲಾಗದು. ಈ ಹಿನ್ನೆಲೆಯಲ್ಲಿ ವಿಹೆಚ್‌ಪಿ ಹಾಗೂ ಭಜರಂಗ ದಳಗಳಂಥ ಸಂಘಟನೆಗಳನ್ನು ನಿಷೇಧಿಸಬೇಕೆಂದು ಸಂಯುಕ್ತ ದಳದ ಸಂಸದ ಡಿ.ಪಿ.ಯಾದವ್ ಹೇಳಿದರು.
ಪ್ರಜಾಪ್ರಭುತ್ವದ ಪ್ರತೀಕವಾದ ವಿಧಾನಸಭೆಯ ಮೇಲೆ ವಿಹೆಚ್‌ಪಿ ಹಾಗೂ ಭಜರಂಗದಳ ದಾಳಿ ನಡೆಸಿವೆ. ಕೋಮು ಸೌಹಾರ್ದತೆಯನ್ನು ಕಲಕುವಂತಹ ಯಾವುದೇ ಘಟನೆಗಳಿಗೆ ನಾವು ಅವಕಾಶ ಮಾಡಿಕೊಡಬಾರದು ಎಂದ ಯಾದವ್, ಒರಿಸ್ಸಾದಲ್ಲಿ ನಡೆದ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಯಾದವ್ ಅವರ ಮಾತುಗಳನ್ನು ಸಮರ್ಥಿಸಿದ ಸಮತಾ ಪಕ್ಷದ ಪ್ರಭುನಾಥ್ ಸಿಂಗ್ ಅವರು, ಭಯೋತ್ಪಾದನೆ ನಿಗ್ರಹ ಕಾಯ್ದೆ (ಪೋಟೊ) ಹೇರಿ ವಿಹೆಚ್‌ಪಿ ಹಾಗೂ ಭಜರಂಗದಳಗಳನ್ನು ನಿಷೇಧಿಸುವಂತೆ ಸಲಹೆ ಮಾಡಿದರು. ಈ ಎರಡು ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತೃಣಮೂಲ ಕಾಂಗ್ರೆಸ್‌ನ ನಿತೀಶ್ ಸೇನ್‌ಗುಪ್ತಾ ಆಗ್ರಹಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications