ದೇಶ ಮುಖ್ಯ, ಮಂದಿರ- ಮಸೀದಿಯಲ್ಲ : ಕಂಚಿ ಕಾಮಕೋಟಿ ಸ್ವಾಮೀಜಿ
ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲಿ ಬಿಡಲಿ, ನನಗೆ ಯಾವುದೇ ವ್ಯತ್ಯಾಸ ಅನಿಸುವುದಿಲ್ಲ ಎಂದು ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಭಾನುವಾರ ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಸ್ವಾಮೀಜಿಯ ಒಳ ಮನಸ್ಸು ಅವರ ಮಾತುಗಳಲ್ಲೇ ವ್ಯಕ್ತವಾದದ್ದು ಹೀಗೆ...
ನಾವು ಇಲ್ಲಿ ನಮ್ಮ ಕೆಲಸ ಮಾಡಲು ಇದ್ದೇವೆ. ದೇವಸ್ಥಾನ ಅಥವಾ ಮಂದಿರದಿಂದ ನಮ್ಮ ಕೆಲಸದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಧರ್ಮಕ್ಕಿಂತ ದೇಶ ಮುಖ್ಯ. ಮಾಧ್ಯಮಗಳು ಘಟನಾವಳಿಗಳನ್ನು ವೈಭವೀಕರಿಸುವುದರಿಂದ ಅಪಾಯವಿದೆ. ತಲೆಬರಹಗಳು ಜನರನ್ನು ಹುಯಿಲೆಬ್ಬಿಸುವಂತಿರಬಾರದು.
ವಿಹೆಚ್‌ಪಿ ಅಥವಾ ಭಜರಂಗ ದಳಗಳ ಸದಸ್ಯರು ಮೂಲಭೂತವಾದಿಗಳೆಂದು ಉಲ್ಲೇಖಿತರಾಗುತ್ತಿದ್ದಾರೆ. ಇದು ತಪ್ಪು. ಧರ್ಮದ ಮೂಲ ಕಟ್ಟಳೆಗಳಿಗೆ ಅಂಟಿಕೊಂಡಿರುವವ ಮೂಲಭೂತವಾದಿ. ಈಗ ನಡೆಯುತ್ತಿರುವ ಘಟನೆಗಳು ಮೂಲಭೂತವಾದದ ಫಲಶೃತಿಯಲ್ಲ. ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ತೊಡಗುವವರು ಭಯೋತ್ಪಾದಕರೇ ವಿನಃ ಮೂಲಭೂತವಾದಿಗಳಲ್ಲ.
ರಾಜಕಾರಣಿಗಳ ದೃಷ್ಟಿಯಲ್ಲಿ ಜನ ವೋಟ್ ಬ್ಯಾಂಕ್. ಅದನ್ನು ಗಿಟ್ಟಿಸಿಕೊಳ್ಳಲು ಹೆಣೆಯುವ ಹುನ್ನಾರಗಳಿಗೆ ಸಿಲುಕಿಕೊಳ್ಳದೆ ಜನ ಶಾಂತಿ ಕಾಪಾಡಬೇಕು. ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ತಂದು ಕೊಟ್ಟರು. ಆದರೆ ಜಾತಿವಾರು ವಿಂಗಡಣೆ ಮಾಡಿ ಅಂತ ಹೇಳಲಿಲ್ಲ. ನಾವೆಲ್ಲಾ ಬೇರೆ ಬೇರೆ ತಾಯಂದಿರ ಹೊಟ್ಟೆಯಲ್ಲಿ ಹುಟ್ಟಿದ್ದರೂ, ವಾಸ ಮಾಡುತ್ತಿರುವುದು ಒಂದೇ ಮನೆಯಲ್ಲಿ. ಗಾಂಧೀಜಿ ಹೇಳಿದ್ದೂ ಅದನ್ನೇ- ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ್, ಈಶ್ವರ ಅಲ್ಲ ತೇರೇ ನಾಮ್, ಸಬ್‌ಕೋ ಸನ್ಮತಿ ದೇ ಭಗವಾನ್. ನೈತಿಕ ಅಧಃಪತನ ತಡೆಯಲು ಶಾಲೆಗಳಲ್ಲಿ ನೀತಿ ಪಾಠ ಕಡ್ಡಾಯ ಮಾಡಬೇಕು. ಆಗಾದರೂ ಹಿಂಸಾಚಾರಕ್ಕೆ ಕಡಿವಾಣ ಸಾಧ್ಯವಾಗಬಹುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications