ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಪುರದ ಕಲಾ ಶಿಬಿರದಲ್ಲಿ ಜಂಬೂಗಳ ಸೊಂಡಿಲ ಕಲೆ ಭಲೆ !

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

Jambo paintersರಾಜಾಸ್ಥಾನದ ಕಲಾ ಸಂಪತ್ತಿನ ಕಳಸ ಜೈಪುರ. ವರ್ಣ ಕಲೆಯಲ್ಲಾಗಲೀ, ಸಂಗೀತದ ಘರಾನಗಳಲ್ಲಾಗಲೀ ಇದರ ಛಾಪು ಮಾಸಲಾರದಂಥದ್ದು. ಈಗ ಇನ್ನೊಂದು ಮೈಲುಗಲ್ಲು ನಿರ್ಮಿಸುವತ್ತ ಈ ಕಲೆ ಸಾಗಿದೆ. ಇದರ ರೂವಾರಿಗಳು ಮನುಷ್ಯರಲ್ಲ, ದೊಡ್ಡ ಪ್ರಾಣಿಗಳೆಂಬುದೇ ವಿಶೇಷ. ಮದಗಜಗಳೇ ಇಲ್ಲಿನ ರವಿವರ್ಮರು. ಇವರ ಕುಂಚ ಕೊಂಚ ದೊಡ್ಡದಷ್ಟೆ.

ಜೈಪುರದಲ್ಲಿ ಮಾರ್ಚ್‌ 16ರಿಂದ ಶುರುವಾಗಿರುವ ಕಲಾ ಶಿಬಿರದಲ್ಲಿ ಆನೆಗಳೂ ಉಂಟು. ಕೊಟ್ಟದ್ದ ತಿಂದು, ತೇಗಿ ರಂಜಿಸುವುದಷ್ಟೇ ಇವುಗಳ ಕಾಯಕವಲ್ಲ. ನಾವು ನಿಮಗೇನು ಕಮ್ಮಿ ಎಂಬಂತೆ ಗೋಡೆಗಳ ಮೇಲೆ ಕಲೆ ಮೂಡಿಸುತ್ತಿವೆ.

ಬಲು ಜಾಣ ಮನುಷ್ಯ ಏನೆಲ್ಲಾ ಮಾಡಿಸುತ್ತಾನೆ, ನೋಡಿ. ಮರ ಎಳೆಯಲು, ಅಂಬಾರಿ ಹೊರಲು, ದೇವಸ್ಥಾನಕ್ಕೆ ಭೂಷಣವಾಗಿರಲು ಎಂಬಂಥಾ ಆನೆಗಳ ಕೈಗೆ ಜೈಪುರದ ಮಾವುತನೊಬ್ಬ ಕುಂಚ ಕೊಟ್ಟಿದ್ದಾನೆ. ಈ ಮಾವುತ ಕಲೆಗಾರನೂ ಹೌದು. ಈತನ ಹೆಸರು ಮೊಹಮ್ಮದ್‌ ಶಫೀಕ್‌. ತಾನು ತೋರಿದ್ದನ್ನ ಪುಟ್ಟ ಕಂಗಳಿಂದಲೇ ನೋಡುವ ಕರಿಗಳಿಗೆ ಚಿತ್ರ ಬಿಡಿಸುವುದೀಗ ಅಭ್ಯಾಸ. ದಿನೇದಿನೇ ಅದು ಕಳೆಗಟ್ಟುತ್ತಾ ಸಾಗಿದೆ.

ಆನೆಗಳು ಚಿತ್ರ ಬಿಡಿಸುವುದಾದರೂ ಹೇಗೆ?

ಸೊಂಡಿಲೇ ಕೈ. ಅದರಲ್ಲೊಂದು ಕುಂಚ. ಬಣ್ಣ ಹಚ್ಚಲು ಸೈ. ಆದರೆ ಆನೆಗಳಲ್ಲಿ ಅಂಥಾ ಮನಃಸ್ಥಿತಿ ಹುಟ್ಟುಹಾಕಬೇಕಷ್ಟೆ. ತಮಗೆ ತೀರಾ ಖುಷಿಯಾದಾಗ, ಆನೆಗಳು ಏನನ್ನು ಬೇಕಾದರೂ ಮಾಡುತ್ತವಂತೆ. ಮನಸ್ಸು ಕೆಟ್ಟರೆ ಎಲ್ಲವೂ ಅಧ್ವಾನ. ಇವುಗಳ ಮಾಲೀಕ ಅಯೂಬ್‌ ಖಾನ್‌ಗೆ ಆನೆಗಳ ಮನಸ್ಸನ್ನು ಉಲ್ಲಾಸಭರಿತವಾಗಿ ಮಾಡುವುದು ಹೇಗೆಂಬುದು ಕರಗತ. ಕಬ್ಬು, ಬಾಳೆಹಣ್ಣು, ಕಿತ್ತಳೆ ತಿನ್ನಿಸಿದರೆ ಸಾಕು. ಆನೆಗಳ ಕಿವಿಗಳು ನಿಮಿರುತ್ತವೆ. ಕುಂಚವನ್ನು ಸೊಂಡಿಲಿಗೆ ಕೊಟ್ಟರೆ, ಕ್ಯಾನ್‌ವಾಸ್‌ ಮೇಲೆ ಬಣ್ಣಗಳು.

ಯೂಸಫ್‌ ಅರಕ್ಕಲ್‌, ಪರೇಶ್‌ ಮೇಯ್ಟಿ, ಅಪರ್ಣಾ ಕೌರ್‌ ಸೇರಿದಂತೆ ಅನೇಕ ಕಲೆಗಾರರು ಆನೆಗಳ ಕಲೆಗೆ ಫೈನಲ್‌ ಟಚ್‌ ಕೊಡುತ್ತಾರೆ. 8 ಅಡಿ ಎತ್ತರ, 15 ಅಡಿ ಅಗಲದ ದೊಡ್ಡ ಕ್ಯಾನ್‌ವಾಸ್‌ ಮೇಲೆ ಆನೆಗಳ ಕಲೆಯ ಬಿಂಬ.

ಆನೆಗಳು ರಾಜಸ್ಥಾನದ ಪ್ರತಿಷ್ಠೆಯ ಪ್ರತೀಕ. ಅವುಗಳ ಮೂಲಕ ಕಲೆ ಮೂಡುವುದೆಂದರೆ, ಅದು ಚರಿತ್ರೆಯ ಪುಟ ಸೇರುವುದರಲ್ಲಿ ಸಂದೇಹವೇ ಇಲ್ಲ. ಇದೊಂದು ಕಲಾ ಜಗತ್ತಿನ ಮೈಲುಗಲ್ಲು ಎನ್ನುತ್ತಾರೆ ಜೈಪುರ ಕಲಾ ಶಿಬಿರದ ನಿರ್ದೇಶಕ ಟಿಮ್ಮಿ ಕುಮಾರ್‌.

ಆನೆಗಳ ಚಿತ್ರಗಳನ್ನು ಭಾರೀ ಮೊತ್ತಕ್ಕೆ ಬಿಕರಿ ಮಾಡಲಾಗುತ್ತದೆ. ಬಂದ ಹಣದಲ್ಲಿ ಇನ್ನಷ್ಟು ಜಂಬೋಗಳನ್ನು ರವಿವರ್ಮರನ್ನಾಗಿಸುವ ಯತ್ನ ಸಾಗಲಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X