ಬೆಂಗಳೂರು ನಗರ ಪಾಲಿಕೆಯ 939 ಕೋಟಿ ರು.ಗಳ ಮಹತ್ವಾಕಾಂಕ್ಷೆಯ ಬಜೆಟ್
ಬೆಂಗಳೂರು : ಮಹಾನಗರದ ಅಭಿವೃದ್ಧಿಗೆ 18 ಹೊಸ ಯೋಜನೆಗಳುಳ್ಳ 939 ಕೋಟಿ ರುಪಾಯಿಗಳ ಮಹತ್ವಾಕಾಂಕ್ಷೆಯ ಬಜೆಟ್ಟನ್ನು ಬೆಂಗಳೂರು ಮಹಾ ನಗರ ಪಾಲಿಕೆ ಸೋಮವಾರ ಮಂಡಿಸಿದ್ದು , ಯಾವುದೇ ಹೊಸ ತೆರಿಗೆ ವಿಧಿಸದೆ ತನ್ನ ಉದ್ದೇಶಿತ ಗುರಿಗಳನ್ನು ತಲುಪಲು ನಿರ್ಧರಿಸಿದೆ.
ನಿರ್ವಸತಿಕರಿಗೆ ವಸತಿ ಕಲ್ಪಿಸುವ- ಸೂರು ಯೋಜನೆ, ಸಂಪನ್ಮೂಲ ಕ್ರೋಢೀಕರಣಕ್ಕೆ- ಸುಮಾರ್ಗ, 2 ಕೋಟಿ ರುಪಾಯಿ ವೆಚ್ಚದಲ್ಲಿ - ಕೆರೆಸಿರಿ ಯೋಜನೆ, ಪ್ರತಿ ವಾರ್ಡ್‌ನಲ್ಲೂ ಉದ್ಯಾನ ನಿರ್ಮಿಸುವ- ಜನೋದ್ಯಾನ, ನಾಗರೀಕ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುವ- ಸಮ್ಮುಖ ಮುಂತಾದ ಮಹತ್ವದ ಯೋಜನೆಗಳು ಪಾಲಿಕೆಯ 2002-03 ನೇ ಸಾಲಿನ ಬಜೆಟ್‌ನ ಮುಖ್ಯಾಂಶಗಳು.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು 937.91 ಕೋಟಿ ರುಪಾಯಿಗಳ ಬಜೆಟ್ಟನ್ನು ಸೋಮವಾರ ಮಂಡಿಸಿದರು. ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸದೆ ಜಂಟಿ ಯೋಜನೆಗಳ ಮೂಲಕ ಸಂಪನ್ಮೂಲ ಕ್ರೋಢೀಕರಿಸಲು ನಿರ್ಧರಿಸಿರುವ ಪಾಲಿಕೆ 18 ಜಂಟಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಮೇಯರ್ ಚಂದ್ರಶೇಖರ್ ಬಜೆಟ್ ಮಂಡನೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಬಜೆಟ್‌ನ ಪ್ರಮುಖ ಅಂಶಗಳು :
- ಜನರಿಗೆ ಸುಗಮ ಮತ್ತು ತ್ವರಿತ ಸೇವೆ ಕಲ್ಪಿಸುವ ಉದ್ದೇಶದಿಂದ ಕಾರ್ಯಾಚರಣೆಯಲ್ಲಿ ದಕ್ಷತೆ ಹಾಗೂ ಪಾರದರ್ಶಕತೆಯನ್ನು ಅನುಸರಿಸಲಾಗುವುದು.
- ಆಡಳಿತ ವಿಕೇಂದ್ರೀಕರಣವನ್ನು ವಾರ್ಡ್ ಮಟ್ಟ ದಲ್ಲಿ ಸಾಧಿಸುವ ಮೂಲಕ ಕಾರ್ಯಾಚರಣೆಗೆ ವೇಗ ತರಲಾಗುವುದು.
- ನಗರದ ಸೌಂದರ್ಯ ವರ್ಧನೆಗಾಗಿ ಪ್ರಜ್ವಲ ಯೋಜನೆಯಡಿ ಸೋಡಿಯಂ ದೀಪಗಳನ್ನು ಎಲ್ಲೆಡೆ ಅಳವಡಿಸಲಾಗುವುದು.
- ಉದ್ಯಾನವನಗಳ ನಿರ್ವಹಣೆ ಖಾಸಗೀಕರಣ.
- ಬೆಂಗಳೂರು ನಗರ ವ್ಯಾಪ್ತಿಯ ಹಳ್ಳಿಗಳ ಮೂಲಭೂತ ಸೌಕರ್ಯಗಳ ಉತ್ತಮೀಕರಣ.
- ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚುವರಿ ಹಣ ನೀಡುವ ಮೂಲಕ, ದೇಶದಲ್ಲೇ ಬೆಂಗಳೂರನ್ನು ಆದರ್ಶಪ್ರಾಯ ನಗರವನ್ನಾಗಿಸುವುದು.
- ಹೊಸ ವಾರ್ಡ್‌ಗೆ 93.80 ಲಕ್ಷ ರುಪಾಯಿ, ಪಾರ್ಷಿಯಲ್ ವಾರ್ಡ್‌ಗೆ 77.70 ಲಕ್ಷ ರುಪಾಯಿ ಹಾಗೂ ಹಳೆಯ ವಾರ್ಡ್‌ಗೆ 66.70 ಲಕ್ಷ ರುಪಾಯಿಗಳನ್ನು ವಾರ್ಡ್‌ಗಳ ಅಭಿವೃದ್ಧಿಗಾಗಿ ಪಾಲಿಕೆಯ ಸದಸ್ಯರು ಪಡೆಯುವ ಅವಕಾಶ ಹೊಂದಿರುತ್ತಾರೆ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications