ಕ್ರಿಕೆಟ್: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ನಾಯಕನಾಗಿ ಗಂಗೂಲಿ ಮುಂದುವರಿಕೆ
ಕೊಚ್ಚಿ : ಜಿಂಬಾಬ್ವೆ ವಿರುದ್ಧದ ಟೆಸ್ಟ್ ಹಾಗೂ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮತ್ತೆ ತಮ್ಮ ಬ್ಯಾಟಿಂಗ್ ಲಯವನ್ನು ಕಂಡುಕೊಂಡಿರುವ ಸೌರವ್ ಗಂಗೂಲಿ, ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾಗುವ ಮೂಲಕ ನಾಯಕ ಪಟ್ಟವನ್ನು ಉಳಿಸಿಕೊಂಡಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ನಿರಂಜನ್ ಷಾ ಈ ವಿಷಯವನ್ನು ಬುಧವಾರ ಪ್ರಕಟಿಸಿದ್ದಾರೆ. ಏಪ್ರಿಲ್ 2 ರಿಂದ ಎರಡು ತಿಂಗಳ ಕಾಲ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಐದು ಟೆಸ್ಟ್ ಪಂದ್ಯ ಹಾಗೂ 5 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳನ್ನು ಭಾರತ ಆಡಲಿದೆ. ಮುಂಬರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಹತ್ವದ್ದೆನಿಸಿದೆ.
ವಿದೇಶದಲ್ಲಿ ಗೆಲುವು :
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಕ್ರಿಕೆಟ್ ತಂಡ ವಿದೇಶದಲ್ಲಿ ಸರಣಿ ಗೆಲುವಿನ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿದೆ. ಮೊನ್ನೆಯಷ್ಟೇ ಜಿಂಬಾಬ್ವೆ ವಿರುದ್ಧ ಟೆಸ್ಟ್ ಸರಣಿ ಜಯ ದಾಖಲಿಸಿದ ಭಾರತ, ವಿದೇಶದಲ್ಲಿ ಸರಣಿ ಜಯ ಸಾಧಿಸುವ ಉತ್ಸಾಹದಲ್ಲಿದೆ ಎಂದು ಗಂಗೂಲಿ ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದ್ದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications