ಪ್ರೇಮವೆನಲು ಹಾಸ್ಯವೆ ? ಸುಮ್ಮನೆ ಒಮ್ಮೆ ನಾಪತ್ತೆಯಾಗಿ ನೋಡಿ !
* ಶ್ಯಾಮ್
ಕೆಲವು ವಿಚಿತ್ರಗಳು ಹೀಗೂ ಸಂಭವಿಸುತ್ತವೆ. ನನ್ನದೇ ಬದುಕಿನಲ್ಲಿ ಇದು ಸಂಭವಿಸುವ ತನಕ ಈ ಬಗ್ಗೆ ನನಗೂ ಗೊತ್ತಿರಲಿಲ್ಲ. ಏನು ಗೊತ್ತೆ? ಶಾಮಿಲಿ ಮತ್ತು ನಾನು ತುಂಬ ಆತ್ಮೀಯರು. ಪರಿಚಯವಾಗಿ ಪೂರ್ತಿ ಎರಡು ವರ್ಷಗಳಾಗಿವೆ. ಎಷ್ಟೋ ಸಲ ಇಬ್ಬರೂ ಕೂತು ರಾತ್ರಿಯಿಡೀ ಮಾತನಾಡಿದ್ದೇವೆ. ಏಕಾಂತ ನಮಗೆ ಸಮಸ್ಯೆಯಲ್ಲ. ಆದರೆ ಎಂಥ ಏಕಾಂತದಲ್ಲೂ ನಾನು ಮನದೊಳಗಿನ ಮಾತನ್ನು ಶಾಮಿಲಿಯ ಮುಂದೆ ಹೇಳಿಕೊಳ್ಳಲಾಗಲಿಲ್ಲ. ಅವಳಾದರೂ ಹೇಳುತ್ತಾಳೇನೋ ಎಂದು ಕಾದೆ. ಅವಳೂ ಹೇಳಲಿಲ್ಲ. ‘ಇವತ್ತು ಹೇಳೇ ಬಿಡ್ತೀನಿ’ ಅಂದುಕೊಂಡು ಇಬ್ಬರೂ ಭೇಟಿಯಾಗುತ್ತಿದ್ದೆವು. ಆದರೆ, ಇಬ್ಬರೂ ಹೇಳಿಕೊಳ್ಳುತ್ತಿರಲಿಲ್ಲ.
ಕೆಲವು ಸಂಬಂಧಗಳೇ ಹಾಗೆ : ಪರಿಚಯವಾಗುತ್ತಿರುವುದೇ ಪರಸ್ಪರ ಪ್ರೇಮಿಸುವುದಕ್ಕಾಗಿ ಎಂಬಂತೆ ಹುಟ್ಟಿಕೊಂಡಿರುತ್ತವೆ ‘ಐ ಲವ್ ಯೂ’ ಅನ್ನುವುದು ಕಷ್ಟವಲ್ಲ. ಆದರೆ, ಒಳಗೇ ಪ್ರೀತಿಯಿಟ್ಟುಕೊಂಡು, ಅದನ್ನು ನೇರವಾಗಿ ಹೇಳಿಕೊಳ್ಳಲಾರದೆ ಗೆಳೆತನದ ಚಾದರ ನೇಯುತ್ತ ಉಳಿದು ಬಿಡುತ್ತೇವಲ್ಲ? ಅಲ್ಲಿ ‘ಐ ಲವ್ ಯೂ’ ಅನ್ನುವುದು ಎಂಥ ಧೈರ್ಯಸ್ಥನಿಗೂ ಕಷ್ಟವಾಗಿ ಬಿಡುತ್ತದೆ. ನನಗೆ ಆದದ್ದೇ ಅದು. ಅವಳೆಡೆಗೆ ನನಗಿರುವ ಪ್ರೀತಿಯನ್ನು ನೇರವಾಗಿ ಹೇಳಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಅನ್ನಿಸಿದಾಗ ; ಮೂರನೆಯವರ್ಯಾರಾದರ ಮೂಲಕ ಹೇಳಿಸಲಾ ಅಂತ ಯೋಚಿಸಿದೆ. ಏಕೋ ಸರಿಯೆನ್ನಿಸಲಿಲ್ಲ. ಅಕಸ್ಮಾತ್ ಶ್ಯಾಮಿಲಿ ರಿಜೆಕ್ಟ್ ಮಾಡಿದರೆ, ಅದು ನಮ್ಮಿಬ್ಬರ ನಡುವಿನದಷ್ಟೇ ಅಗಿರಲಿ. ಮೂರನೆಯವರಿಗೆ ಗೊತ್ತಾಗುವುದೇಕೆ ಅನ್ನಿಸಿ ಸುಮ್ಮನಾದೆ. ಅನ್ನಿಸಿದ್ದನ್ನೆಲ್ಲ ಒಂದು ಪತ್ರದಲ್ಲಿ ಬರೆದು ಕೊಟ್ಟು ಬಿಡಲಾ ಅಂದುಕೊಂಡೆ. ತೀರ ಎದುರಿಗೇ ಇದ್ದು ಪತ್ರ ಬರೆಯುವುದು ಹೇಗೆ ಅನ್ನಿಸಿ ಸಮ್ಮನಾದೆ.
ಹಾಗೆ, ಶಾಮಿಲಿಗೆ ನನ್ನ ಪ್ರೀತಿಯನ್ನಿನ್ನು ಹೇಳಿಕೊಳ್ಳಲು ಸಾಧ್ಯವೇ ಇಲ್ಲ ಅಂತ ಖಚಿತವಾಗತೊಡಗಿದ ದಿನಗಳಲ್ಲೇ ನಾನು ಆರು ದಿನಗಳ ಮಟ್ಟಿಗೆ ಅಂತ ಗುಜರಾತದ ಚಿಕ್ಕ ಊರೊಂದಕ್ಕೆ ಕೆಲಸದ ನಿಮಿತ್ತ ಹೋಗಬೇಕಾಗಿ ಬಂದ್ದದ್ದು. ಅವಳಿಗೆ ಹೇಳಿಯೇ ಹೊರಟೆ. ಶಾಮಿಲಿ ಏನೇನೂ ಆತಂಕವಿಲ್ಲದೆ ‘ಹೋಗಿ ಬಾ, ಹ್ಯಾಪಿಜರ್ನಿ’ ಅಂತ ಮಾಮೂಲಿ ಗೆಳೆಯರು ಹೇಳಿದಂತೆಯೇ ಹೇಳಿದ್ದಳು. ಕೊಂಚವಾದರೂ ಪ್ರೀತಿಯಿದ್ದಿದ್ದರೆ, ಅಷ್ಟು ದೂರಕ್ಕೆ ಕಳಿಸುವಾಗ ಒಂದಷ್ಟು ಭಾವುಕ ಮಾತು ಹೊರಡುತ್ತಿದ್ದವಲ್ಲವೇ - ಅನ್ನಿಸಿತು. ಅದೇ ಭಾವ ಹೊತ್ತು ಗುಜರಾತಕ್ಕೆ ಹೋದೆ. ಆರು ದಿನಗಳಲ್ಲಿ ಮುಗಿಯಬೇಕಿದ್ದ ಕೆಲಸ ಹದಿನಾರು ದಿನಗಳ ತನಕ ಎಳೆದುಬಿಟ್ಟಿತು. ಹದಿನೇಳನೇ ದಿನ, ಇನ್ನೇನು ಹೊರಡಬೇಕು ಎಂಬಷ್ಟರಲ್ಲಿ ಅದೆಂಥದೋ ಜ್ವರ. ಎದ್ದು ಕೂಡುವುದಕ್ಕೂ ತ್ರಾಣವಿಲ್ಲದಂತಾಗಿ ಪೂರ್ತಿ ಹತ್ತು ದಿನ ಮಲಗಿಬಿಟ್ಟೆ. ಹೇಗೋ ಚೇತರಿಸಿಕೊಂಡು, ರೈಲಿನಲ್ಲಿ ಮೈ ಬಿಸಾಕಿಕೊಂಡು ಊರಿಗೆ ಹಿಂತಿರುಗಿದೆ ನೋಡಿ ; ಅವತ್ತಿಗೆ ಪೂರ್ತಿ ಒಂದು ತಿಂಗಳಾಗಿತ್ತು.
ಶಾಮಿಲಿ ಅವಳ ಮನೆಯ ಬಾಗಿಲಲ್ಲೇ ನಿಂತಿದ್ದಳು. ಕಣ್ತುಂಬ ನೀರು. ಥಟ್ಟನೆ ಕೈ ಹಿಡಿದು ಒಳಮನೆಗೆ ಕರೆದೊಯ್ದಳು. ಒಂದೇ ಒಂದು ಪೀಠಿಕೆ-ಪೂರ್ವ ಸೂಚನೆ ಕೂಡ ಇಲ್ಲದೆ ಎದೆಗೆ ಮುಖವಿಕ್ಕಿ ಬಿಕ್ಕಿದಳು, ‘ಎಷ್ಟು ದಿನ ಹೊರಟು ಹೋಗಿದ್ದು ನೀನು? ತುಂಬ miss ಮಾಡ್ಕೊಂಡೆ. ಇನ್ನೊಂದ್ಸಲ ಎಲ್ಲೂ ಹೋಗಬೇಡ,Ilove You.. ಅಂದುಬಿಟ್ಟಿದ್ದಳು.
ಎರಡು ವರ್ಷ ಎದುರಿಗಿದ್ದರೂ ಬಾಯಿಗೆ ಬಾರದ ಮಾತನ್ನು ಒಂದು ತಿಂಗಳ ಗೈರುಹಾಜರಿ ಈಚೆಗಳೆದು ಬಿಟ್ಟಿತಾ? ಗೊತ್ತಿಲ್ಲ.Out of sight is out of mind ಅಂತಾರೆ, ನನ್ನ ವಿಚಾರದಲ್ಲಿ ಅದು ತದ್ವಿರುದ್ಧ. ನಾನು ಹೇಳಿಕೊಳ್ಳಲಾಗದ್ದನ್ನು ನನ್ನ ಗೈರು ಹಾಜರಿ ಹೇಳಿತ್ತು.
ಈಗ ಮದುವೆಗೆ ಸಿದ್ಧತೆಗಳು ನಡೆದಿವೆ !
ಹಾಯ್ ಬೆಂಗಳೂರ್ !
ನನ-ಗೂ ಹೀಗಾ-ಯಿ-ತು/ ಇಂಥ ಭಾಗ್ಯ ನನ-ಗೆ ಒದ-ಗಿ ಬರ-ಲೇ ಇಲ್ಲ
ಮುಖಪುಟ / ಲೋಕೋಭಿನ್ನರುಚಿ












Click it and Unblock the Notifications