ಕನಕಪುರ ಚುನಾವಣೆ : 12 ಗಂಟೆರವರೆಗೆ ಶೇ.25ರಷ್ಟು ಶಾಂತ ಮತದಾನ
ಬೆಂಗಳೂರು : ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ವಾಗ್ವಾದ, ವಿದ್ಯುನ್ಮಾನ ಮತಯಂತ್ರ ಜೋಡಣೆಯಲ್ಲಿ ಉಂಟಾದ ಗೊಂದಲದಿಂದ ಕೆಲವೆಡೆ ಮತದಾನ ವಿಳಂಬ ಪ್ರಕರಣಗಳನ್ನು ಹೊರತುಪಡಿಸಿ ಕನಕಪುರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಶಾಂತಿಯುತವಾಗಿತ್ತು.
ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಮಧ್ಯಾಹ್ನ 12 ಗಂಟೆವರೆಗೆ ಶಾಂತಿಯುತವಾಗಿದೆ ಎಂದು ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ತಿಳಿಸಿದ್ದಾರೆ. ಈ ವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಗಳಾಗಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಳ್ಳು ಆರೋಪ : ಅಕ್ರಮ ಮತದಾನಕ್ಕಾಗಿ ಕಾಂಗ್ರೆಸ್ ಪಕ್ಷ ಬನ್ನೂರು - ಮೈಸೂರಿನಿಂದ ಬಾಡಿಗೆ ಜನರನ್ನು ಬಸ್‌ನಲ್ಲಿ ಕರೆಸಿದೆ ಎಂದು ದೇವೇಗೌಡರು ಆರೋಪಿಸಿದ್ದರೆ, ಇದೆಲ್ಲಾ ಗೌಡರು ಆಡುತ್ತಿರುವ ನಾಟಕ. ಅವರ ಪುತ್ರ ಹೇಗೂ ಚಲನಚಿತ್ರ ನಿರ್ಮಾಪಕರು, ಅವರು ಸಿನಿಮೀಯ ಕಥೆ ಹೆಣೆದಿದ್ದಾರೆ. ಗೌಡರ ಕಡೆಯವರೇ ಜನರನ್ನು ಬಸ್‌ನಲ್ಲಿ ಕರೆತಂದು ತಮ್ಮ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಮ್ಮ ಮೇಲಿನ ಆರೋಪ ಅಲ್ಲಗಳೆದಿದ್ದಾರೆ.
ಕನಕಪುರ ಲೋಕಸಭೆ ವ್ಯಾಪ್ತಿಗೆ ಬರುವ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಗುರುತಿನ ಚೀಟಿ ವಿಷಯದಲ್ಲಿ ಮತದಾರರು ಹಾಗೂ ಚುನಾವಣಾ ಸಿಬ್ಬಂದಿಯ ನಡುವೆ ಮಾತುಕತೆಗಳು ನಡೆದ ವರದಿಗಳಿವೆ.
ಚನ್ನಪಟ್ಟಣ, ರಾಮನಗರ, ಉತ್ತರಹಳ್ಳಿಗಳಲ್ಲಿ ಗುರುತಿನ ಚೀಟಿ ಇಲ್ಲದ ಮತದಾರರು ಮತ ಚಲಾಯಿಸದೆ ಮನೆಗೆ ಹಿಂತಿರುಗಿದರೆ, ಕೆಲವು ಕಡೆ 9 ಗಂಟೆಯಾದರೂ ಮತಯಂತ್ರಗಳ ಜೋಡಣೆ ಆಗದೆ ಇದ್ದ ಕಾರಣ ಮತದಾರರು ಮತಚಲಾಯಿಸದೆ ಮನೆಗೆ ಮರಳಿದ ಘಟನೆಗಳೂ ನಡೆದಿವೆ. ಒಟ್ಟಾರೆಯಾಗಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್.ಪಿ. ಭಾಸ್ಕರ್‌ರಾವ್ ತಿಳಿಸಿದ್ದಾರೆ.
ಭಾನುವಾರ ಫಲಿತಾಂಶ : ಮತಗಳ ಎಣಿಕೆ ಬೆಂಗಳೂರಿನ ಮಹಾರಾಣಿ ಕಲಾಕಾಲೇಜಿನಲ್ಲಿ ಭಾನುವಾರ (ಫೆ.24) ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಮತ ಎಣಿಕೆ ಆರಂಭವಾದ 6-7 ಗಂಟೆಯಲ್ಲಿ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ರಾಜ್ಯ ಚುನಾವಣೆ ಇಲಾಖೆ ತಿಳಿಸಿದೆ.(ಪಿ.ಟಿ.ಐ/ಇನ್‌ಫೋವಾರ್ತೆ)












Click it and Unblock the Notifications