ಬಂಗಾರದೊಡವೆ ಏಕೆ? ಸಾಂಗ್ಲಿಯಾನ ಉಪದೇಶಕ್ಕೆ ಬಂಡೆದ್ದ ಪ್ರಮೀಳಾ ಪಡೆ
*ವಿಶ್ವಕರ್ಮ
ಸಂಸಾರ ತಾಪತ್ರಯದ ನಡುವೆಯೂ ಕವಿ ಹೃದಯ ಉಳಿಸಿಕೊಂಡು ‘ನೀನೇ ಚಿನ್ನ ; ನಿನಗೇಕೆ ಬೇಕು ಚಿನ್ನ’ ಎನ್ನುವ ಮುದ್ದಣರು ಸಾಕಷ್ಟು ಸಂಖ್ಯೆಯಲ್ಲಿ ಇರಬಹುದಾದರೂ, ‘ನಾನು ಬಡವಿ ನೀನು ಬಡವ ಒಲವೆ ನಮ್ಮ ಬದುಕು’ ಎಂದು ಸಂತೋಷ ಪಡುವ ಮನೋರಮೆಯರು ಸಿಗುವುದು ಕಷ್ಟ ಕಷ್ಟ !
ಚಿನ್ನಾ ಎಂದರೆ ‘ಎಲ್ಲಿ ಚಿನ್ನ ?’ ಎಂದು ಕಣ್ಣರಳಿಸುವ, ಅನ್ನಕ್ಕಿಂಥ ಚಿನ್ನವನ್ನೇ ಹೆಚ್ಚು ಇಷ್ಟ ಪಡುವ, ಚಿನ್ನ ಹೇರಿದಷ್ಟೂ ಗಂಡನ ಮೇಲೆ ಹೆಚ್ಚು ಪ್ರೀತಿ ಬೆಳೆಸಿಕೊಳ್ಳುವ ಮಹಿಳಾ ಮಣಿಗಳೇ ನಮ್ಮ ನಡುವೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇನೂ ಮಹಿಳೆಯರ ಮೇಲಿನ ಆರೋಪವಲ್ಲ ; ಅಲಂಕಾರ ಪ್ರಿಯಳಾದ ಹೆಣ್ಣು ಹೊನ್ನು ಬಯಸುವುದರಲ್ಲಿ ಅಚ್ಚರಿಯೂ ಇಲ್ಲ . ಚಿನ್ನ ಅಪೇಕ್ಷಿಸುವ ನಮ್ಮ ಮಹಿಳೆಯರ ಮನೋವೃತ್ತಿಯಲ್ಲಿ ಅಲಂಕಾರ ಅಪೇಕ್ಷೆ ಮಾತ್ರವಲ್ಲ ದೆ, ಆಪತ್ತಿಗೆ ಆಪದ್ಧನವನ್ನು ಹೊಂಚಿಕೊಳ್ಳುವ ಜಾಣತನವೂ ಇರುವುದನ್ನು ನಾವು ಗಮನಿಸಬೇಕು.
ಅಂದಹಾಗೆ- ಹೆಣ್ಣು ಹಾಗೂ ಚಿನ್ನದ ಕುರಿತ ಈ ಜಿಜ್ಞಾಸೆಗೆ ಕಾರಣರಾದವರು- ಬೆಂಗಳೂರು ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ. ಇವತ್ತು ಸಾಂಗ್ಲಿಯಾನ ಬೆಂಗಳೂರಿನ ಮಹಿಳೆಯರ ಮುನಿಸಿಗೆ ಕಾರಣವಾಗಿದ್ದಾರೆ. ಮಹಿಳೆಯರ ಚಿನ್ನಾಭರಣದ ಬಗ್ಗೆ ಮಾತನಾಡಿದ್ದೇ ಅವರು ಮಾಡಿದ ಅಪರಾಧ.
ಸಾಂಗ್ಲಿಯಾನ ಹೇಳಿದ್ದಿಷ್ಟು : ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು. ಚಿನ್ನದ ಮೇಲಿನ ಮೋಹವನ್ನು ಬಿಡಬೇಕು. ಚಿನ್ನವನ್ನು ಧರಿಸುವುದರಿಂದ ಕಳ್ಳರ ಗಮನವನ್ನು ಸೆಳೆಯುವ ಮೂಲಕ ಕಳ್ಳತನಕ್ಕೆ ನಾವಾಗಿಯೇ ಆಹ್ವಾನ ಕೊಟ್ಟಂತಾಗುತ್ತದೆ; ಆ ಕಾರಣದಿಂದ ಒಡವೆ ಕೊಡಿಸಿ ಎಂದು ಗಂಡಂದಿರಿಗೆ ದುಂಬಾಲು ಬೀಳಬೇಡಿ. ಒಡವೆ ಇಲ್ಲದಿರುವುದರಿಂದ ಅಪಹರಣದ ಪ್ರಶ್ನೆಯೇ ಇಲ್ಲ . ಯಾರ್ಯಾರೋ ನಿಮ್ಮ ಕೊರಳಿಗೆ ಕೈ ಹಾಕುವುದೂ ತಪ್ಪುತ್ತದೆ.
ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನ, ದರೋಡೆ ಹಿನ್ನೆಲೆಯಲ್ಲಿ ಸಾಂಗ್ಲಿಯಾನ ಅವರು ಹೇಳಿದ ಹಿತೋಪದೇಶ ‘ಚಿನ್ನವೇ ಪ್ರಾಣ’ ಮನೋಭಾವದ ನಮ್ಮ ಹೆಣ್ಣು ಮಕ್ಕಳಿಗೆ ಪಥ್ಯವಾಗಿಲ್ಲ . ಹೆಣ್ಣು ಮಕ್ಕಳದು ಎರಡು ರೀತಿಯ ಆಕ್ಷೇಪ.
- ಚಿನ್ನ ತೊಡುವವರು ನಾವು, ಕೊಡಿಸುವ ಗಂಡ ನಮ್ಮವನು- ಮಧ್ಯೆ ಸಾಂಗ್ಲಿಯಾನ ಅವರದೇನು ತಕರಾರು.
- ತಮ್ಮ ಕೆಲಸವನ್ನು ಹಗುರ ಮಾಡಿಕೊಳ್ಳುವ ಉದ್ದೇಶದಿಂದ ಮಹಿಳೆಯರ ಮೈ ಹಗುರ ಮಾಡುವ ಸಂಚನ್ನು ಸಾಂಗ್ಲಿಯಾನ ಹೂಡಿದ್ದಾರೆ. ಕೂರೆಗೆ ಹೆದರಿ ಸೀರೆ ಉಡದೆ ಇರಲು ಸಾಧ್ಯವೇ ಅನ್ನುವುದು ಅವರ ಪ್ರಶ್ನೆ .
ಮಹಿಳೆಯರ ಆಕ್ರೋಶಕ್ಕೆ ಸಾಂಗ್ಲಿಯಾನ ತುತ್ತಾಗುತ್ತಿರುವುದು ಇದೇ ಮೊದಲೇನಲ್ಲ . ನಗರದ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ದಿನಗಳಲ್ಲಿ - ಇಲಾಖೆಯ ಮುಂದೆ ಸಾಕಷ್ಟು ಜವಾಬ್ದಾರಿಗಳಿವೆ; ಮಹಿಳೆಯರ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಾಂಗ್ಲಿಯಾನ ವಿವಾದಕ್ಕೆ ತುತ್ತಾಗಿದ್ದರು. ಆನಂತರ ಉಗುರು ಬೆಳೆಸಿ, ಗಂಡು ಗೂಳಿಗಳನ್ನು ಎದುರಿಸಿ ಎಂದು ಸ್ತ್ರೀಯರಿಗೆ ನೀಡಿದ ಕರೆಯೂ ಸ್ತ್ರೀ-ಪುರುಷ ವಲಯಗಳಲ್ಲಿ ಸಂಚಲನೆಗೆ ಉಂಟು ಮಾಡಿತ್ತು.
ಸಾಂಗ್ಲಿಯಾನ ಅವರನ್ನು ವಿರೋಧಿಸಲಿಕ್ಕೆ ಮಹಿಳೆಯರಿಗೆ ಇನ್ನೂ ಒಂದು ಕಾರಣವಿದೆ- ಇವತ್ತು ಚಿನ್ನ ತೊಡಬೇಡಿ ಎನ್ನುವ ಕಮೀಷನರ್ ನಾಳೆ ಬರುಖಾ ತೊಡಿ. ಮನೆಯಲ್ಲೇ ಇರಿ. ಬೀದಿಯಲ್ಲಿ ಅಡ್ಡಾಡದಿದ್ದರೆ ಕಾಮಣ್ಣರ ಕಣ್ಣಿಗೆ ಬೀಳುವುದಿಲ್ಲ , ತೊಂದರೆಯೂ ಉಂಟಾಗುವುದಿಲ್ಲ ಎಂದಾರು ಅನ್ನುವುದರ ಆತಂಕ.
ಪೊಲೀಸ್ ಕಮೀಷನರ್ ಕಳ್ಳರನ್ನು ಹಿಡಿದರೆ ಸಾಕು; ನಮ್ಮ ಸಹವಾಸ ಅವರಿಗೇಕೆ ಬೇಕು ಎನ್ನುವ ಸದ್ದು ಮಹಿಳಾ ಮಂಡಳಿಗಳ ಅಂಗಳದಿಂದ ಕೇಳಿ ಬರುತ್ತಿದೆ. ಈ ಸದ್ದು ಜೋರಾಗುವ ಮುನ್ನವೇ ಸಾಂಗ್ಲಿಯಾನ ಕೇಳಿಸಿಕೊಳ್ಳಬೇಕು. ನಾರಿ ಮುನಿದರೆ ಮಾರಿ ಅನ್ನುವ ಕನ್ನಡ ಗಾದೆಯನ್ನು ಸಾಂಗ್ಲಿಯಾನ ಅವರ ಕಿವಿಗೆ ಯಾರಾದರೂ ಹಾಕಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ , ಈಗಾಗಲೇ ಕೆಲಸದ ಹೊರೆಯಿಂದ ಕಂಗೆಟ್ಟಿರುವ ಬೆಂಗಳೂರು ಪೊಲೀಸರಿಗೆ ಮಹಿಳೆಯರ ಬಂಡಾಯ ಬೆಟ್ಟದಂತೆ ಎದುರಾದೀತು!
ಕೊನೆಯದಾಗಿ-
ಸಾಂಗ್ಲಿಯಾನ ಅವರನ್ನು ಅವರ ಅರ್ಧಾಂಗಿ ಚಿನ್ನಕ್ಕಾಗಿ ಪೀಡಿಸುತ್ತಾರಾ? ಈ ಕುರಿತು ಸಾಂಗ್ಲಿಯಾನ ಕೂಡಲೇ ಸ್ಪಷ್ಟನೆ ನೀಡಬೇಕಿದೆ!
ಮುಖಪುಟ / ಸಾಂಗ್ಲಿಯಾನಾ ವಾಚ್












Click it and Unblock the Notifications