ಇಲ್ಲಿ ಗಾಂಧೀಜಿಗೆ ದಿನವೂ ಆರತಿ, ಗಾಂಧಿ ಭಕ್ತರಿಗೆ ತೀರ್ಥ ಪ್ರಸಾದ...
ಕೊಯಂಬತ್ತೂರಿನಗಾಂಧೀಜಿ ದೇವಸ್ಥಾನದಲ್ಲಿ ಗಣರಾಜ್ಯೋತ್ಸವದಂದು ವಿಶೇಷ ಪೂಜೆ. ಸಂಭ್ರಮ. ಆ ದೇವಳದ ಗರ್ಭ ಗುಡಿಯಲ್ಲಿ ಗಾಂಧಿ ತಾತ ಕೋಲು ಹಿಡಿದು ನಿಂತಿದ್ದಾರೆ. ಪೂಜಾರಿ ತಂಗವೇಲು ಗಾಂಧೀಜಿ ಗೆ ಆರತಿ ಬೆಳಗಿ, ತೀರ್ಥ ಪ್ರಸಾದ ಹಂಚುತ್ತಾರೆ. ಅದು ತಂಗವೇಲು ಅವರ ಸ್ವಂತ ದೇವಸ್ಥಾನ. ತ್ರಿವರ್ಣ ಬಣ್ಣದಲ್ಲಿರುವ ದೇವಸ್ಥಾನದಲ್ಲಿ ಗಾಂಧಿ ತಾತನಿಗೆ ನಿತ್ಯ ಪೂಜೆ.
ಪೂಜಾರಿಯ ಮಡಿ ಬಟ್ಟೆ ಖಾದಿಯದು. ಅದರಲ್ಲಿ ರಾಷ್ಟ್ರ ಪಕ್ಷಿ, ರಾಷ್ಟ್ರ ಧ್ವಜ, ಕಮಲದ ಎಂಬ್ರಾಯಿಡರಿ ಚಿತ್ರಗಳು. ಮುಂಡಾಸಿನ ಬದಲಿಗೆ ‘ವಂದೇ ಮಾತರಂ’ ಎಂದು ಬರೆದ ಟೋಪಿ. ಕಳೆದ ಎಂಟು ವರ್ಷಗಳಿಂದ ತಂಗವೇಲು ಈ ಕಾಯಕ ಮಾಡುತ್ತಿದಾರೆ. ಅವರಿಗೀಗ 56 ವರ್ಷ ವಯಸ್ಸು. ಈ ದೇವಸ್ಥಾನವೊಂದೇ ಜೀವನ ಮಾರ್ಗ.
ಸರವನಂಪಟ್ಟಿಯ ತಮ್ಮ ಸ್ವಂತ ಜಾಗದಲ್ಲಿ ಕಟ್ಟಿದ ಗಾಂಧಿ ದೇವಸ್ಥಾನದ ಪಕ್ಕವೇ ತಂಗವೇಲು ಮನೆಯಿದೆ. ಯಾಕೆ ಈ ಗಾಂಧಿ ದೇವಸ್ಥಾನ ಕಟ್ಟಿದಿರಿ... ಎಂದು ಪ್ರಶ್ನಿಸಿದರೆ, ‘1969ರಲ್ಲಿ , ಆವಾಗಿನ ಕೇಂದ್ರ ಮಂತ್ರಿ ಸಿ. ಸುಬ್ರಮಣಿಯನ್ ಆವರೊಂದಿಗೆ ಪಾದ ಯಾತ್ರೆಯಲ್ಲಿ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ ಗಾಂಧೀಜಿ ಮಾರ್ಗ ಪಥ್ಯವಾಯಿತು. ಪಾದಯಾತ್ರೆ ಸಂದರ್ಭದಲ್ಲಿ ನಾವೆಲ್ಲರೂ ಗಾಂಧೀಜಿಯ ದಾರಿಯಲ್ಲಿ ನಡೆಯುತ್ತೇವೆ ಅಂತ ಪ್ರತಿಜ್ಞೆ ಮಾಡಿದ್ದೇವೆ. ಇತರರು ಆ ಪ್ರತಿಜ್ಞೆಯನ್ನು ಉಳಿಸಿಕೊಂಡಿದ್ದಾರೊ ಇಲ್ಲವೋ.. ನಾನು ಮಾತಿಗೆ ತಪ್ಪುವ ಜಾಯಮಾನದವನಲ್ಲ’ ಎನ್ನುತ್ತಾರೆ.
ಸಮಾಜದ ಹಣದಲ್ಲಿ ಸಮಾಜಕ್ಕೇ ಸೇವೆಯೇ ?
ಶನಿವಾರ, ಗಣರಾಜ್ಯೋತ್ಸವದ ಪ್ರಯುಕ್ತ ತಂಗವೇಲು 12 ಸಾವಿರ ತ್ರಿವರ್ಣ ಧ್ವಜ ಹಾಗೂ ಬ್ಯಾಡ್ಜ್‌ಗಳನ್ನು ಹಂಚಿದ್ದಾರೆ. 200 ಕ್ಕೂ ಹೆಚ್ಚು ಮಂದಿ ಬಡವರಿಗೆ ಊಟವಿಕ್ಕಿದ್ದಾರೆ. ಅವರ ತಟ್ಟೆಗೆ ಸಿಹಿ ಪೊಂಗಲು ಬಡಿಸಿ ಖುಷಿ ಪಟ್ಟಿದ್ದಾರೆ. ನೀವು ಬೇರೆ ದೇವರನ್ನು ಪೂಜಿಸುವುದಿಲ್ಲವೇ... ಎಂದು ಕೇಳಿದರೆ, ‘ನಾನು ಗಾಂಧೀಜಿಯಲ್ಲಿ ದೇವರನ್ನು ಕಾಣುತ್ತೇನೆ’ ಎಂದು ಹೇಳುತ್ತಾರೆ.
ಸಮಾಜ ಸೇವಕರೂ ಆಗಿರುವ ತಂಗವೇಲು ಸಮಾಜ ಸೇವೆಯನ್ನು ವ್ಯಾಖ್ಯಾನಿಸುವುದು ಹೀಗೆ : ‘ ಸಾರ್ವಜನಿಕರ ಹಣವನ್ನೇ ಬಳಸಿಕೊಂಡು ಸಮಾಜ ಸೇವೆ ಮಾಡಿದರೆ ಅದು ಸಮಾಜ ಸೇವೆಯಲ್ಲ. ಕಷ್ಟ ಪಟ್ಟು ದುಡಿದ ಹಣದಲ್ಲಿ ಇತರರಿಗೆ ನೆರವಾಗಬೇಕು.’
ತನ್ನ ಅನಂತರ ಗಾಂಧಿ ದೇವಸ್ಥಾನ ಮುಂದುವರೆದುಕೊಂಡು ಹೋಗಬೇಕು ಎನ್ನುವ ದೃಷ್ಟಿಯಿಂದ ತಂಗವೇಲು ಬ್ಯಾಂಕಿನಲ್ಲಿ ಒಂದಿಷ್ಟು ಹಣ ಡೆಪಾಸಿಟ್ ಇಟ್ಟಿದ್ದಾರೆ. ಶ್ರೀಮಂತ ಕುಟುಂಬದಿಂದಲೇ ಬಂದ ತಂಗವೇಲು ಓದಿದ್ದು ಬರೇ 2ನೇ ತರಗತಿ. ನಂತರ ಮುಂಬಯಿಯ ವಿಕ್ಟೋರಿಯಾ ಟರ್ಮಿನಸ್ ಬಳಿ ತಿಲಕ್, ನೇತಾಜಿ, ಪಟೇಲರಂತಹ ಗಣ್ಯರ ಫೋಟೋ ಮಾರುವ ಕಾಯಕ ಆರಂಭಿಸಿದರು. ವೃದ್ಧರನ್ನು, ಅಂಧರನ್ನು ರಸ್ತೆ ದಾಟಿಸುವುದು ತಂಗವೇಲು ಹವ್ಯಾಸ. ಬಡ ರೋಗಿಗಳಿಗೆ ಉಪಚರಿಸುವ ಇವರನ್ನು ಊರಿನವರು ಪ್ರೀತಿಯಿಂದ ಫ್ರೀ ಡಾಕ್ಟರ್ ಎಂದೇ ಕರೆಯುತ್ತಾರೆ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications