ಉರುಳಿಗೆ ಕೊರಳೊಡ್ಡಿ ವಿಲವಿಲ ಒದ್ದಾಡಿ, ಅಸುನೀಗಿದನಾ ಹುಲಿರಾಯ
ಚಿಕ್ಕಮಗಳೂರು : ಇತ್ತೀಚೆಗಷ್ಟೇ ಮೈಸೂರು ಮೃಗಾಲಯದಲ್ಲಿ ಬಿಳಿಹುಲಿ ‘ಸ್ಮಿತಾ’ ಮರಿಯಾಂದಕ್ಕೆ ಜನ್ಮಕೊಟ್ಟಾಗ, ವಿನಾಶದ ಅಂಚಿನಲ್ಲಿರುವ ಹುಲಿಗಳ ಸಂತತಿ ಸಾವಿರ ಸಾವಿರವಾಗಲಿ ಎಂದು ವನ್ಯಜೀವಿ ಪ್ರೇಮಿಗಳು ಹರಸಿದರು.
ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಂದಿನ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಕೂಡ ಹುಲಿಗಳ ಸಂರಕ್ಷಣೆಗೆ ಆಗ್ರಹಿಸಿದ್ದರು. ಈ ಮಧ್ಯೆ ಚಿಕ್ಕಮಗಳೂರಿನ ತೋಟದ ಮಾಲಿಕರೊಬ್ಬರು ಕಾಡು ಪ್ರಾಣಿಗಳನ್ನು ಹಿಡಿಯಲು ಕಟ್ಟಿದ್ದ ಉರುಳಿಗೆ ಕೊರಳೊಡ್ಡಿದ ಭಾರಿ ಹುಲಿರಾಯ, ವಿಲವಿಲ ಒದ್ದಾಡಿ ಅಸುನೀಗಿದ ದುರಂತ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಕಾಡುಪ್ರಾಣಿಗಳನ್ನು ಹಿಡಿಯಲೆಂದೇ ಕಡವಂತಿ ಸಮೀಪದ ಬಾಳೆಖಾನ್ ರಸ್ತೆಯಲ್ಲಿರುವ ಮೊನಿಷ ತೋಟದಲ್ಲಿ ಹಾಕಲಾಗಿತ್ತು ಎನ್ನಲಾದ ಕುಣಿಕೆಗೆ 10 ವರ್ಷದ ಹುಲಿಯ ಕುತ್ತಿಗೆ ಸಿಲುಕಿತು. ಬಿಡಿಸಿಕೊಳ್ಳಲು ಒದ್ದಾಡಿದ ಹುಲಿ, ಬಂಧನದಿಂದ ಹೊರಬರಲಾರದೆ ಉಸಿರುಕಟ್ಟಿ ಕೊನೆಯುಸಿರೆಳೆಯಿತು.
ಭಾನುವಾರ ಬೆಳಗ್ಗೆ ತೋಟದ ರೈಟರ್ ವಿನ್ಸೆಂಟ್ ಹುಲಿ ಉರುಳಿಗೆ ಸಿಲುಕಿ ಒದ್ದಾಡುತ್ತಿದ್ದುದನ್ನು ಗಮನಿಸಿ, ತತ್‌ಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು. ಸಿಬ್ಬಂದಿ ಹುಲಿಯ ರಕ್ಷಣೆಗೆ ಬರುವಷ್ಟರಲ್ಲಿ ದುರ್ದೈವಿ ಹುಲಿ ಕೊನೆಯುಸಿರೆಳೆದಿತ್ತು.
2.17 ಮೀಟರ್ ಉದ್ದ, 0.85 ಮೀಟರ್ ಎತ್ತರ ಇರುವ ಕಪ್ಪು ಪಟ್ಟೆಯ ಕೆಂಪು ಹುಲಿಯ ವಯಸ್ಸು ಸುಮಾರು ಹತ್ತು - ಹನ್ನೆರಡು ವರ್ಷ ಇರಬಹುದು ಎಂದು ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಹೇಳಿದ್ದಾರೆ. ಈ ತೋಟ ಜಾನ್ ಮೊನಿಷ ಎಂಬುವವರಿಗೆ ಸೇರಿದ್ದು, ಕಾಡುಪ್ರಾಣಿಗಳನ್ನು ಹಿಡಿಯಲು ಕುಣಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications