ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ ಅಜೀಜ್ ಸೇಠ್ ನಿಧನ
ಮೈಸೂರು : ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಜೀಜ್ ಸೇಠ್ ಶುಕ್ರವಾರ ರಾತ್ರಿ ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಐವರು ಪುತ್ರಿಯರಿದ್ದಾರೆ.
ವಕ್ಫ್, ಕೈಗಾರಿಕೆ, ಕಾರ್ಮಿಕ, ಕಂದಾಯ ಹಾಗೂ ಸಾರಿಗೆ ಸಚಿವರಾಗಿದ್ದ ಅಜೀಜ್ ಸೇಠ್ ಅವರು ಪ್ರಸ್ತುತ ಅಲ್ಪ ಸಂಖ್ಯಾಕ ಆಯೋಗದ ಅಧ್ಯಕ್ಷರಾಗಿದ್ದರು. ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸೇಠ್ ಅವರು ಧಾರವಾಡ ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೂ ಒಮ್ಮೆ ಆಯ್ಕೆಯಾಗಿದ್ದರು.
ಉಗಿಬಂಡಿಯಂತೆ ಸದಾ ಸಿಗರೇಟು ಹಚ್ಚಿ ಹೊಗೆ ಬಿಡುತ್ತಿದ್ದ ಅಜೀಜ್ ಸೇಠ್, ಬೀಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಅವಿರತ ಹೋರಾಟ ನಡೆಸಿದ್ದರು. ಇತ್ತೀಚೆಗೆ ಒಂದು ಸಾರ್ವಜನಿಕ ಸಮಾರಂಭದಲ್ಲಿ ಪೊಲೀಸ್ ಮಹಾನಿರ್ದೇಶಕ ವಿ.ವಿ. ಭಾಸ್ಕರ್ ಅವರ ಆಕ್ಷೇಪಣೆಯ ನಡುವೆಯೂ ಅವರ ಸಮ್ಮುಖದಲ್ಲೇ (ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇವನೆ ನಿಷೇಧ) ಕಾನೂನು ಉಲ್ಲಂಘಿಸಿ ಸಿಗರೇಟ್ ಸೇದಿದ್ದರು. ‘ಪ್ರಾಣವನ್ನಾದರೂ ಬಿಟ್ಟೇನು, ಸಿಗರೇಟ್ ಮಾತ್ರ ನಾ ಬಿಡಲಾರೆ’ ಎಂದು ಅಜೀಜ್‌ಸೇಠ್ ಪದೇ ಪದೇ ಹೇಳುತ್ತಿದ್ದರು.
ಅತ್ಯಂತ ವೇಗವಾಗಿ ಕಾರು ಓಡಿಸುವುದು ಸೇಠ್‌ರ ಮತ್ತೊಂದು ಹಾಬಿ. ಒಮ್ಮೆ ಚಿತ್ರನಟ ಹಾಗೂ ಸಂಸತ್ ಸದಸ್ಯ ಅಂಬರೀಶ್ ಅವರೊಂದಿಗೆ ಪಂಥಕಟ್ಟಿ ಕಾರು ಓಡಿಸಿದ ಅವರು, ಕೇವಲ 2 ಗಂಟೆಯ ಅವಧಿಯಲ್ಲಿ ಬೆಂಗಳೂರಿನಿಂದ ಮೈಸೂರು ತಲುಪಿದ್ದರು.
ಸಂತಾಪ: ಹಿರಿಯ ರಾಜಕೀಯ ನಾಯಕ ಹಾಗೂ ವರ್ಣರಂಜಿತ ವ್ಯಕ್ತಿತ್ವದ ಅಜೀಜ್ ಸೇಠ್ ಅವರ ನಿಧನಕ್ಕೆ ಮುಖ್ಯಮಂತ್ರಿ ಕೃಷ್ಣ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್. ವಿಶ್ವನಾಥ್, ಎಂ. ಶಿವಣ್ಣ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಮೊದಲಾದವರು ಸಂತಾಪ ಸೂಚಿಸಿದ್ದಾರೆ.
ಬಾಲಂಗೋಸಿ: ಸಾಮಾನ್ಯವಾಗಿ ಗಣ್ಯರು ಸಾವನ್ನಪ್ಪಿದಾಗ, ..... ಅವರ ಅಗಲಿಕೆಯಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂಬ ಅತ್ಯಂತ ಸವಕಲಾದ ಸಂತಾಪ ಸೂಚಕ ಶಬ್ದಗಳು ಕೇಳಿಬರುತ್ತವೆ. ಆದರೆ, ಬೀಡಿ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಬಗ್ಗೆ ಕಾಳಜಿ ಹೊಂದಿದ್ದ ಸೇಠ್‌ರ ನಿಧನದಿಂದ ಕಾರ್ಮಿಕ ವಲಯಕ್ಕೆ ನಿಜಕ್ಕೂ ತುಂಬಲಾರದ ನಷ್ಟ ಆಗಿದೆ. ಮಿಗಿಲಾಗಿ ಚೈನ್ ಸ್ಮೋಕರ್ ಒಬ್ಬರನ್ನು ಕಳೆದುಕೊಂಡ ಸಿಗರೇಟ್ ಕಂಪನಿಗಂತೂ ಭಾರಿ ನಷ್ಟವೇ ಸಂಭವಿಸಿದೆ.
(ಇನ್‌ಫೋ ವಾರ್ತೆ)ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications