‘ಜನರಿಗೆ ಕುಡಿಯಲೂ ನೀರಿಲ್ಲ ಭೀಮೆಗೆಕೂಡಲೇ ನೀರು ಬಿಡಿ’
ಬೆಂಗಳೂರು : ಬೆಂಗಳೂರು ಸುತ್ತ ಮುತ್ತ ಕಳೆದ ನಾಲ್ಕಾರು ದಿನದಿಂದ ಸಣ್ಣಗೆ ಮಳೆ ಜಿನುಗುತ್ತಿದೆ. ಆದರೆ, ವಿಜಾಪುರ, ಗುಲ್ಬರ್ಗಾ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಬವಣೆ ಬಂದಿದೆ. ಈ ನಿಟ್ಟಿನಲ್ಲಿ ಭೀಮಾ ನದಿಗೆ ಕೂಡಲೇ 1 ಟಿಎಂಸಿ ನೀರು ಬಿಡುವಂತೆ ರಾಜ್ಯ ಸರಕಾರ ಮಹಾರಾಷ್ಟ್ರಕ್ಕೆ ಪತ್ರ ಬರೆದು ಮನವಿ ಮಾಡಿದೆ.
ಈ ವಿಷಯವನ್ನು ತಿಳಿಸಿದ ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಎಚ್.ಕೆ. ಪಾಟೀಲ್ ಅವರು, ಪ್ರತಿವರ್ಷ ಬೇಸಿಗೆಯಲ್ಲಿ ಈ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಈವರ್ಷ ಬರದ ಕಾರಣ ಬೇಸಿಗೆಗೆ ಮೊದಲೇ ನೀರಿನ ಸಮಸ್ಯೆ ಎದುರಿಸಬೇಕಾಗಿ ಬಂತು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸಕಲ ಪ್ರಯತ್ನ ಮಾಡಲಾಗುವುದು ಎಂದರು. ಬ್ಯಾರೇಜ್‌ಗಳ ಕಾರ್ಯ ಪ್ರಗತಿಯಲ್ಲಿದ್ದು, ಬರುವ ಜೂನ್ ವೇಳೆಗೆ ಇಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಆದರೆ, ಈಗ ಜನ - ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲ, ಆದ ಕಾರಣ ತತ್‌ಕ್ಷಣವೇ ಕನಿಷ್ಠ 1 ಟಿ.ಎಂ.ಸಿ. ನೀರನ್ನು ಭೀಮಾ ನದಿಗೆ ಬಿಡುವಂತೆ ಕೋರಿ ತಾವು ಮಹಾರಾಷ್ಟ್ರದ ನೀರಾವರಿ ಸಚಿವ ಅಜಿತ್ ಪವಾರ್ ಅವರಿಗೆ ಪತ್ರ ಬರೆದಿರುವುದಾಗಿ ಪಾಟೀಲ್ ಹೇಳಿದರು.
ಸಂಕೇಶ್ವರದ ಜನತೆಗೆ ಕುಡಿಯಲು ಹಾಗೂ ಆ ಪ್ರದೇಶದಲ್ಲಿ ಒಣಗುತ್ತಿರುವ ಬೆಳೆಗೆ ಚಿತ್ರಿ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡುವಂತೆ ಕೂಡ ಮನವಿ ಮಾಡಲಾಗಿದೆ. ಮಹಾರಾಷ್ಟ್ರ ನೀರು ಬಿಡುಗಡೆ ಮಾಡಿದರೆ, ಸಂಕೇಶ್ವರ ಸುತ್ತಮುತ್ತಲ ಭಾಗದ 5 ಸಾವಿರ ಎಕರೆಯಲ್ಲಿ ಕಬ್ಬು ಬೆಳೆದಿರುವ ರೈತರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
(ಇನ್‌ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications