ತ್ವರಿತ ನ್ಯಾಯದಾನಕ್ಕೆ ಸರಕಾರದ ಕ್ರಮ :ನ್ಯಾ. ಎನ್.ಕೆ. ಜೈನ್
ಉಡುಪಿ : ತ್ವರಿತ ನ್ಯಾಯದಾನ ನೀಡುವ ನಿಟ್ಟಿನಲ್ಲಿ ಬಾಕಿ ಉಳಿದಿರುವ ದಾವೆಗಳ ಇತ್ಯರ್ಥಕ್ಕೆ ಕರ್ನಾಟಕ ಸರಕಾರವು ಪ್ರಯತ್ನ ಮಾಡುತ್ತಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ನರೇಂದ್ರ ಕುಮಾರ್ ಜೈನ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ರಾಜ್ಯ ಹೈಕೋರ್ಟ್ ಸೇರಿದಂತೆ, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ದೊಡ್ಡ ಪ್ರಮಾಣದ ಕ್ರಿಮಿನಲ್ ಮೊಕದ್ದಮೆಗಳು ಇತ್ಯರ್ಥವಾಗದೆ ಉಳಿದಿವೆ.
ಸಾಕ್ಷಿದಾರರು ಸಕಾಲದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಇರುವುದರಿಂದ ಕ್ರಿಮಿನಲ್ ಮೊಕದ್ದಮೆಗಳು ಮತ್ತು ಜಾಮೀನುರಹಿತ ವ್ಯಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಉಳಿಯಲು ಕಾರಣವಾಗಿದೆ ಎಂದು ಅವರು ಹೇಳಿದರು. ಪ್ರತಿ ಜಿಲ್ಲೆಯಲ್ಲೂ ಕಾನೂನು ಸಲಹಾ ಕೇಂದ್ರಗಳನ್ನು ಸ್ಥಾಪಿಸಿ, ಇವುಗಳ ನೆರವಿನಿಂದ ಜಿಲ್ಲಾ ನ್ಯಾಯಾಲಯಗಳಲ್ಲಿ ಕ್ಷಿಪ್ರವಾಗಿ ಮೊಕದ್ದಮೆಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ ಎಂದರು.
ಉಡುಪಿ ಜಿಲ್ಲೆ ಸ್ಥಾಪನೆಯಾದ ದಿನದಿಂದಲೂ ಇಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಬೇಕೆಂಬ ಬೇಡಿಕೆ ಇತ್ತು. ಅದರ ಅಗತ್ಯವೂ ಇತ್ತು. ಆದರೆ, ಮೂಲಭೂತ ಸೌಕರ್ಯ ಹಾಗೂ ಹಣಕಾಸು ವ್ಯವಸ್ಥೆಗಳಿಂದಾಗಿ ಇದು ಕೊಂಚ ವಿಳಂಬವಾಯಿತು ಎಂದೂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾ. ಎಂ.ಎಫ್. ಸಲ್ಡಾನ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿ. ವಿಶ್ವನಾಥ್ ಮೊದಲಾದವರು ಪಾಲ್ಗೊಂಡಿದ್ದರು.
(ಪಿ.ಟಿ.ಐ /ಇನ್‌ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications