ಇಲೆಕ್ಟ್ರಾನಿಕ್ ಮಾಧ್ಯಮಗಳ ಪತ್ರಕರ್ತರಿಗೂ ಪ್ರಶಸ್ತಿ :ಎಸ್.ಎಂ.ಕೃಷ್ಣ
ಮೈಸೂರು : ಜಿಲ್ಲಾ ಮಟ್ಟದ ಪತ್ರಿಕೆಗಳು ಕಷ್ಟ ಅನುಭವಿಸುತ್ತಿದ್ದರೂ, ಜನರ ನಿರೀಕ್ಷೆಗಳಿಗೆ ತಕ್ಕಂತೆ ಸ್ಪಂದಿಸುತ್ತಿವೆ ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೊಂಡಾಡಿದ್ದಾರೆ.
ಮಂಗಳವಾರ ಆಂದೋಲನ ದಿನ ಪತ್ರಿಕೆಯ ಹೊಸ ಕಟ್ಟಡ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಸಣ್ಣ ಪತ್ರಿಕೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಇಂಥಾ ಸನ್ನಿವೇಶದಲ್ಲೂ ಪತ್ರಿಕೆ ನಡೆಸುವವರನ್ನು ಜನ ಖಂಡಿತ ಮೆಚ್ಚುತ್ತಾರೆ. ಜಾಹೀರಾತುಗಳಿಲ್ಲದ ಕನ್ನಡ ಪತ್ರಿಕೆಯನ್ನು ಉಳಿಸಿಕೊಳ್ಳುವ ಹೆಣಗಾಟ ಅಷ್ಟಿಷ್ಟಲ್ಲ. ಸಣ್ಣ ಪತ್ರಿಕೆಗಳ ಸಮಸ್ಯೆಯ ಪಟ್ಟಿಯಂತೂ ದೊಡ್ಡದಿದೆ. ಈ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿಯೇ ರಾಮಯ್ಯ ಸಮಿತಿಯ ಅನೇಕ ಶಿಫಾರಸ್ಸುಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.
ಗ್ರಾಮೀಣಾಭ್ಯುದಯಕ್ಕೆ ಹೆಚ್ಚು ಒತ್ತು ನೀಡುವ ಪತ್ರಿಕಾ ಬರೆಹಗಳಿಗೆ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಕೇಂದ್ರ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಆಂದೋಲನ ಪತ್ರಿಕೆಯ ವಿಶೇಷ ಪುರವಣಿ ಬಿಡುಗಡೆ ಮಾಡಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಚ್.ವಿಶ್ವನಾಥ್, ಸಾಹಿತಿ ದೇವನೂರು ಮಹಾದೇವಸ ಕರ್ನಾಟಕ ಪತ್ರಿಕಾ ಅಕಾಡೆಮಿ ಅಧ್ಯಕ್ಷ ಗರುಡನಗಿರಿ ನಾಗರಾಜ್ ಸಮಾರಂಭದಲ್ಲಿ ಮಾತಾಡಿದರು. ಮೇಯರ್ ಬಿ.ಕೆ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications