ಕುಸಿಯುತ್ತಿರುವ ವ್ಯವಸ್ಥೆಗೆ ಶಿಕ್ಷಕನೇ ದಾರಿದೀಪ- ಸಿದ್ಧಗಂಗೆ ಸ್ವಾಮೀಜಿ
ಬೆಂಗಳೂರು: ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ಹಲ್ಲೆಯ ಕುರಿತು ಸಿದ್ಧಗಂಗೆ ಮಠದ ಡಾ। ಶಿವಕುಮಾರ ಸ್ವಾಮೀಜಿ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ.
ಅತಿದೊಡ್ಡ ಪ್ರಜಾಪ್ರಭುತ್ವವೆಂದು ಇಡೀ ರಾಷ್ಟ್ರ ಭಾರತದೆಡೆಗೆ ನೋಡುತ್ತಿದೆ. ಆದರಿಲ್ಲಿ ಪ್ರಜ್ಞೆಗಳು ನಾಶವಾಗುತ್ತಿವೆ. ಇದನ್ನು ತಪ್ಪಿಸಲು ಉತ್ತಮ ಶಿಕ್ಷಕರಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಕ ಉತ್ತಮ ಸಮಾಜ ಸುಧಾರಕನೂ ಹೌದು. ಆ ಕಾರಣದಿಂದ ನಾವು ನಮ್ಮ ಆಚಾರ್ಯ ಪರಂಪರೆಯನ್ನು ಉಳಿಸಿಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು. ಅವರು ಸೋಮವಾರ ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಸ್ಮಾರಕ ಉಪನ್ಯಾಸ ಮಾಲೆಯಲ್ಲಿ ಮಾತನಾಡುತ್ತಿದ್ದರು.
ಕಂಠಿ ಶಿಕ್ಷಣದ ಮಹತ್ವವನ್ನು ಅರಿತಿದ್ದರು. ಅವರು ಶಿಕ್ಷಣ ಸಚಿವರಾಗಿದ್ದಾಗ ಗ್ರಾಮೀಣ ಶಿಕ್ಷಣಕ್ಕೆ ಒತ್ತು ನೀಡಿದ್ದರು. ರಾಜಕೀಯ ಹಾಗೂ ಜಾತಿ ಮಾಲಿನ್ಯದಿದ್ದ ದೂರವಿದ್ದ ಅವರು ಸಚ್ಚಾರಿತ್ರ್ಯ ಜೀವನ ನಡೆಸಿದ್ದರು. ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಕಂಠಿ ಅವರನ್ನು ಸ್ವಾಮೀಜಿ ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲೆ ವಿ.ಎಸ್.ರಮಾದೇವಿ ಅವರು ಇತ್ತೀಚಿನ ದಿನಗಳಲ್ಲಿ ಕುಟುಂಬ ಪದ್ಧತಿ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಶಿಕ್ಷಣ ಮತ್ತು ವೃತ್ತಿಯಲ್ಲಿ ಮೌಲ್ಯಗಳನ್ನು ಕಾಪಾಡಿಕೊಂಡು ಬರಲು ಅವರು ಕರೆ ನೀಡಿದರು.
ಪತ್ರಕರ್ತ ಜಯಶೀಲರಾವ್, ಪ್ರೊ.ಎಸ್.ಕೆ.ರಾಮಚಂದ್ರರಾವ್, ಕಂಠಿ ಅವರ ಪತ್ನಿ ಮರಿಬಸಮ್ಮ , ಪುತ್ರ ಡಾ. ಮಹೇಂದ್ರ ಹಾಗೂ ಮೊಮ್ಮಗಳು ಯೋಗಿನಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications