ಡಿ.22ರಿಂದ ಸೋಲಾಪುರದಲ್ಲಿ 3 ದಿನಗಳ ಶರಣ ಸಮ್ಮೇಳನ
ಗುಲ್ಬರ್ಗಾ : 1976ರಲ್ಲಿ ಜನ್ಮತಳೆದ ಕಲ್ಯಾಣ ನಾಡಿನ ಶರಣಪರಿಷತ್ತಿಗೆ 25 ವರ್ಷ ತುಂಬಿದೆ. ಈ ಸಂಬಂಧ ರಜತ ಮಹೋತ್ಸವಕ್ಕೆ ಸಂಭ್ರಮದ ಸಿದ್ಧತೆಗಳೂ ನಡೆದಿವೆ. ರಜತ ಮಹೋತ್ಸವದ ಅಂಗವಾಗಿ ಪರಿಷತ್ತು ಡಿಸೆಂಬರ್ 22ರಿಂದ ಮೂರು ದಿನಗಳ ಕಾಲ ಸೋಲಾಪುರದಲ್ಲಿ ಶರಣ ಸಮ್ಮೇಳನ ಹಮ್ಮಿಕೊಂಡಿದೆ. ಪರಿಷತ್ತಿನ 21ನೆ ಶರಣ ಸಮ್ಮೇಳನ ಇದಾಗಿದೆ ಎಂದು ಕಲ್ಬುರ್ಗಿ ಬಸವಕೇಂದ್ರದ ಅಧ್ಯಕ್ಷ ಶಿವಶರಣಪ್ಪ ಕಲ್ಬುರ್ಗಿ ಅವರು ಸುದ್ದಿಗಾರರಿಗೆ ತಿಳಿಸಿದರು.
ತುಳಜಾಪೂರ ರಸ್ತೆಯಲ್ಲಿರುವ ಅಣ್ಣಪ್ಪ ಕಾಡಾದಿ ಹೈಸ್ಕೂಲ್ ಮೈದಾನದಲ್ಲಿ ಜರುಗಲಿರುವ ಈ ಶರಣ ಸಮ್ಮೇಳನವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಉದ್ಘಾಟಿಸುವರು ಎಂದು ಅವರು ಹೇಳಿದರು. 24ರಂದು ಯುವಕರು ಮತ್ತು ಬಸವ ಪ್ರಜ್ಞೆ ಕುರಿತ ಬಹಿರಂಗ ಅಧಿವೇಶನದೊಂದಿಗೆ ಸಮಾರೋಪ ಸಮಾರಂಭವೂ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ, ಮರಾಠಿ ಹಾಗೂ ತೆಲುಗು ಭಾಷೆಯಲ್ಲಿ ಬಸವ ಸಂಗೀತ ರಸಗಂಗೆ ಹರಿಯಲಿದೆ. ವಿವಿಧ ಜಿಲ್ಲೆಗಳಲ್ಲಿ ಆಯಾ ಭಾಷೆಯಲ್ಲೇ ಬಸವತತ್ವ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಚಿತ್ರದುರ್ಗದ ಜಗದ್ಗುರು ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜೀ, ಇಳಕಲ್‌ನ ಮಹಾಂತ ಸ್ವಾಮಿಗಳು, ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳು ಪಾಲ್ಗೊಳ್ಳುವರೆಂದೂ ಅವರು ಹೇಳಿದರು.
ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ : ಈ ಸಂದರ್ಭದಲ್ಲಿ ಮಾತನಾಡಿದ ಶರಣ ಪರಿಷತ್‌ನ ಕಾರ್ಯದರ್ಶಿ ಬಸವರಾಜ ತಂಬಾಕೆ ಅವರು, ಕರ್ನಾಟಕ ಸರಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ಮಹಾರಾಷ್ಟ್ರದಲ್ಲಿ ಶರಣ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.
ಮಹಾರಾಷ್ಟ್ರ ಸರಕಾರದ ಸಚಿವ ಸಂಪುಟದಲ್ಲಿ ಒಬ್ಬ ಲಿಂಗಾಯಿತರೂ ಇಲ್ಲ, ಕನ್ನಡಿಗರೂ ಇಲ್ಲ ಆದಾಗ್ಯೂ ಮಹಾರಾಷ್ಟ್ರ ಸರಕಾರ ಕಳೆದ ವರ್ಷದ ಏಪ್ರಿಲ್‌ನಿಂದ ಮಹಾತ್ಮ ಬಸವೇಶ್ವರ ಜಯಂತಿ ಅತ್ಯಂತ ಅದ್ಧೂರಿಯಿಂದ ಆಚರಿಸುತ್ತಿದೆ. ಆದರೆ, ಕರ್ನಾಟಕ ಸರಕಾರ ಸಂಭ್ರಮದಿಂದ ಬಸವೇಶ್ವರ ಜಯಂತಿ ಆಚರಿಸಲು ನಿರ್ಧರಿಸಿಲ್ಲ ಆದಕ್ಕಾಗೇ ಈ ಬಾರಿ ಸೋಲಾಪುರದಲ್ಲಿ ಸಮ್ಮೇಳನ ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications