ಉಗ್ರರ ಅಟ್ಟಹಾಸ: ದಿಗ್ಭ್ರಮೆಯಲ್ಲಿ ಅಮೆರಿಕದಲ್ಲಿನ ಭಾರತೀಯರು
ನ್ಯೂಯಾರ್ಕ್ : ಭಾರತದ ಸಂಸತ್ ಭವನದ ಮೇಲೆ ಗುರುವಾರ ನಡೆದ ಭಯೋತ್ಪಾದಕರ ದಾಳಿಯಿಂದ ಗಾಬರಿ, ದಿಗ್ಭ್ರಮೆಗೊಂಡಿರುವ ಅಮೆರಿಕದಲ್ಲಿ ನ ಭಾರತೀಯರು- ಭಯೋತ್ಪಾದನೆಯನ್ನು ತೊಡೆದುಹಾಕಲು ಸರ್ಕಾರ ಇನ್ನಷ್ಟು ಕ್ರಿಯಾಶೀಲವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದನೆಯ ನೆಲೆಗಳನ್ನು ಮೊದಲು ನಿರ್ಮೂಲಗೊಳಿಸದ ಹೊರತು ಭಯೋತ್ಪಾದನೆಯನ್ನು ತೊಡೆದುಹಾಕುವುದು ಅಸಾಧ್ಯ ಎಂದು ಪಿಟಿಐ ಪ್ರತಿನಿಧಿಯಾಂದಿಗೆ ಮಾತನಾಡಿರುವ ಕೆಲವು ಭಾರತೀಯರು ತಿಳಿಸಿದ್ದಾರೆ. ಭಯೋತ್ಪಾದಕತೆಯನ್ನು ವಿಶ್ವದಿಂದ ಅಳಿಸಿಹಾಕುವ ತಮ್ಮ ಸಂಕಲ್ಪಕ್ಕೆ ಅಮೆರಿಕಾದ ಅಧ್ಯಕ್ಷ ಬುಷ್ ಅವರು ಬದ್ಧರಾಗಿರುತ್ತಾರೆ ಎನ್ನುವ ವಿಶ್ವಾಸವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.
ಸಂಸತ್ ಭವನದ ಮೇಲೆ ನಡೆದಿರುವ ದಾಳಿಯು, ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಈವರೆಗೂ ಭಾರತ ರೂಢಿಸಿಕೊಂಡಿದ್ದ ಜಾತ್ಯತೀತ ಮೌಲ್ಯಗಳ ಮೇಲಿನ ಪ್ರಹಾರವಾಗಿದೆ. ಈ ದಾಳಿಯು ಭಯ ಉಂಟುಮಾಡುವ ಗುರಿಯನ್ನು ಹೊಂದಿದೆ ಎಂದು ಓವರ್‌ಸೀಸ್ ಕಾಂಗ್ರೆಸ್‌ನ ಅಧ್ಯಕ್ಷ ಸುರೀಂದರ್ ಮಲ್ಹೋತ್ರ ಬಣ್ಣಿಸಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂಸತ್‌ಭವನದ ಮೇಲೆ ದಾಳಿ ಮಾಡುವ ಮೂಲಕ ವಿಶ್ವಕ್ಕೆ ಸಂದೇಶವೊಂದನ್ನು ರವಾನಿಸಲು ಭಯೋತ್ಪಾದಕರು ಉದ್ದೇಶಿಸಿದ್ದಾರೆ. ಎರಡು ದಶಕಗಳಿಂದ ಭಯೋತ್ಪಾದಕತೆಯ ವಿರುದ್ಧ ಹೋರಾಡುತ್ತಿರುವ ಭಾರತ, ಭಯೋತ್ಪಾದಕರು ತರಬೇತಿ ಪಡೆಯುತ್ತಿರುವ ನೆಲೆಗಳನ್ನು ಗುರ್ತಿಸಿ ನಾಶಗೊಳಿಸಬೇಕು.
ಭಯೋತ್ಪಾದಕತೆಯ ವಿರುದ್ಧ ಅಮೆರಿಕ ನಡೆಸುತ್ತಿರುವ ಹೋರಾಟವನ್ನು ಭಾರತ ಬೆಂಬಲಿಸುತ್ತಿದೆ. ಇದೇ ರೀತಿ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಹಬ್ಬಿರುವ ಭಯೋತ್ಪಾದಕತೆಯನ್ನು ತೊಡೆದುಹಾಕುವ ಪ್ರಯತ್ನವನ್ನು ಅಮೆರಿಕ ನಿಲ್ಲಿಸಬಾರದು ಎಂದು ಮಲ್ಹೋತ್ರ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications