ಅಂತಿಮ ಘಟ್ಟದಲ್ಲಿ ಭಯೋತ್ಪಾದಕತೆ ವಿರುದ್ಧದ ಹೋರಾಟ-ಪ್ರಧಾನಿ
ನವದೆಹಲಿ : ಭಯೋತ್ಪಾದಕತೆಯ ವಿರುದ್ಧದ ಹೋರಾಟವು ಅಂತಿಮ ಘಟ್ಟವನ್ನು ಮುಟ್ಟಿದ್ದು , ಈ ಹೋರಾಟ ನಿರ್ಣಾಯಕ ಹಂತದಲ್ಲಿ ನಡೆಯಲಿದೆ ಎಂದು ಪ್ರಧಾನಿ ವಾಜಪೇಯಿ ಘೋಷಿಸಿದ್ದಾರೆ.
ದೆಹಲಿಯ ಪಾರ್ಲಿಮೆಂಟ್ ಭವನದ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ, ಭಯೋತ್ಪಾದಕರ ದಾಳಿಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದರು. ಭಯೋತ್ಪಾದಕರು ಕೇವಲ ಸಂಸತ್ ಭವನದ ಮೇಲೆ ಮಾತ್ರ ದಾಳಿ ನಡೆಸಿಲ್ಲ . ಈ ದಾಳಿ ಇಡೀ ದೇಶದ ಮೇಲೆ ನಡೆದಿದೆ ಎಂದು ವಾಜಪೇಯಿ ಭಾವುಕರಾಗಿ ನುಡಿದರು.
ಭಯೋತ್ಪಾದಕರ ಪ್ರಯತ್ನಗಳು ವಿಫಲವಾಗಿವೆ. ಎರಡು ದಶಕಗಳಿಂದ ಭಾರತ ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಿದ್ದು , ಈ ಹೋರಾಟದಲ್ಲಿ ಇಡೀ ರಾಷ್ಟ್ರ ಭಾಗಿಯಾಗಿದೆ ಎಂದು ಪ್ರಧಾನಿ ಬಣ್ಣಿಸಿದರು. ಪಾರ್ಲಿಮೆಂಟ್ ಭವನದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮೃತರಾದ ಕುಟುಂಬದವರ ನೋವಿನಲ್ಲಿ ತಾವು ಭಾಗಿಯಾಗಿರುವುದಾಗಿ ವಾಜಪೇಯಿ ಹೇಳಿದರು.
ಈ ನಡುವೆ- ಗುರುವಾರ ಏರ್ಪಡಿಸಲಾಗಿದ್ದ ಇಫ್ತಾರ್ ಕೂಟ ರದ್ದಾಗಿದೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ. ಭಯೋತ್ಪಾದಕರ ದಾಳಿಯಿಂದ ಮೃತರಾದವರ ಗೌರವಾರ್ಥ ಇಫ್ತಾರ್ ಕೂಟವನ್ನು ವಾಜಪೇಯಿ ರದ್ದು ಪಡಿಸಿದ್ದಾರೆ ಎನ್ನಲಾಗಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications