ಸಹಜ ಸ್ಥಿತಿಗೆ ಮರಳುತ್ತಿರುವ ಕೊಡಗು: ಕರ್ಫ್ಯೂ ವಾಪಸ್
ಮಡಿಕೇರಿ : ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕ್ಷುಬ್ಧಗೊಂಡಿದ್ದ ಕೊಡಗು ಜಿಲ್ಲೆಯಲ್ಲಿ ಈಹೊತ್ತು ಪರಿಸ್ಥಿತಿ ತಿಳಿಯಾಗಿದ್ದು, ಸಹಜ ಸ್ಥಿತಿಯತ್ತ ಮರಳುತ್ತಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಸಾರಿಗೆ ಸಂಚಾರ ವಿರಳವಾಗಿದ್ದು, ಜನಸಂಚಾರ ಮಾಮೂಲು ಸ್ಥಿತಿಯತ್ತ ಸಾಗಿದೆ.
ಈ ಮಧ್ಯೆ ಬುಧವಾರ ರಾತ್ರಿ ಶುಂಟಿಕೊಪ್ಪದಲ್ಲಿ ವ್ಯಕ್ತಿಯಾಬ್ಬರಿಗೆ ಚಾಕುವಿನಿಂದ ತಿವಿದು ಗಾಯಗೊಳಿಸಲಾಗಿದೆ. ಗಾಯಾಳು ಸೋಮಯ್ಯ ಎಂಬುವವರನ್ನು ಮಡಿಕೇರಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಜಿಲ್ಲೆಯಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಸಡಿಲಿಸಿದ್ದರೂ, ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಶಾಲೆ ಕಾಲೇಜುಗಳಿಗೆ ಗುರುವಾರವೂ ರಜೆ ನೀಡಲಾಗಿದೆ.
ಜಿಲ್ಲೆಯಲ್ಲಿ ಶಾಂತಿಯನ್ನು ಮತ್ತೆ ಸ್ಥಾಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಶಾಂತಿ ಸಭೆ ನಡೆಸಿದರು. ಈ ಸಭೆಯಲ್ಲಿ ಸಚಿವೆ ಸುಮಾವಸಂತ್, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸುಭಾಷ್ ಭರಣಿ ಮೊದಲಾದವರು ಪಾಲ್ಗೊಂಡಿದ್ದರು. ಈಗ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸುಭಾಷ್ ಭರಣಿ ತಿಳಿಸಿದರು.
ಸಭೆಯಲ್ಲಿ ಹಾಜರಾಗಿದ್ದ ಎರಡೂ ಕೋಮುಗಳ ಮುಖಂಡರು, ಜಿಲ್ಲೆಯಲ್ಲಿ ನಡೆದ ಗಲಭೆ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಯಾವುದೇ ವದಂತಿಗಳಿಗೆ ಕಿವಿಗೊಡದೆ, ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಎರಡೂ ಕೋಮಿನ ಮುಖಂಡರು ನಾಗರಿಕರಲ್ಲಿ ಮನವಿ ಮಾಡಿದರು. ವೀರಾಜಪೇಟೆ, ಸಿದ್ಧಾಪುರಗಳಲ್ಲೂ ಶಾಂತಿ ಸಭೆ ನಡೆಸಲಾಯಿತು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications