ಬಂಡವಾಳ ಹೊತ್ತು ಭಾರತಕ್ಕೆ ಬನ್ನಿ - ಜಪಾನಿಯರಿಗೆ ಅಟಲ್ ಕರೆ
ಒಸಾಕ : ರಾಜಕೀಯ ಸ್ಥಿರತೆಯನ್ನು ಸಾಧಿಸಿ, ಹಣಕಾಸು ಸುಧಾರಣೆಯ ಹೊಸ ಮನ್ವಂತರದಲ್ಲಿ ಕಾಲಿಟ್ಟಿರುವ ಭಾರತದಲ್ಲಿ ಬಂಡವಾಳ ಹೂಡುವಂತೆ ಜಪಾನ್ ವಾಣಿಜ್ಯೋದ್ಯಮಿಗಳಿಗೆ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕರೆ ನೀಡಿದ್ದಾರೆ.
ಭಾರತದಲ್ಲಿ ಬಂಡವಾಳ ಹೂಡಲು ವಿಫುಲ ಅವಕಾಶಗಳಿವೆ. ಹಿಂದೆಂದಿಗಿಂತಲೂ ಇಂದು ಉದ್ಯಮ - ವ್ಯವಹಾರದಲ್ಲಿ ಅವಕಾಶಗಳು ಹೆಚ್ಚಾಗಿವೆ. ಉಭಯ ದೇಶಗಳ ವಾಣಿಜ್ಯ ಸಂಬಂಧ ವರ್ಧನೆಗಿದು ಸಕಾಲ ಎಂದ ಅವರು, ಮೂಲಭೂತ ಸೌಕರ್ಯ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಜವಳಿ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವಂತೆ ವಾಣಿಜ್ಯೋದ್ಯಮಿಗಳಿಗೆ ಕರೆಯಿತ್ತರು.
ಇಲ್ಲಿನ ಭಾರತೀಯ ಉದ್ಯಮಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಈಗಾಗಲೇ ಭಾರತದಲ್ಲಿ ರಾಜಕೀಯ ಸ್ಥಿರತೆ ಸಾಧಿಸಲಾಗಿದೆ. ಆರ್ಥಿಕ ಸುಧಾರಣೆ ಮಾಡುವ ಸಂಕಲ್ಪ ಹಾಗೂ ಅದನ್ನು ಕಾಪಾಡುವ ಬದ್ಧತೆ ನಮ್ಮಲ್ಲಿದೆ ಎಂದು ಘೋಷಿಸಿದರು.
ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಜಪಾನ್ ದೇಶವು ಭಾರತದ ಮೇಲೆ ವಿಧಿಸಿದ್ದ ಆರ್ಥಿಕ ದಿಗ್ಭಂಧನವನ್ನು ವಾಪಸ್‌ಪಡೆದದ್ದನ್ನು ಪ್ರಶಂಸಿಸಿದ ಅವರು ಈ ಸುಸಂದರ್ಭದ ಲಾಭ ಪಡೆದು ಭಾರತದಲ್ಲಿ ಬಂಡವಾಳ ತೊಡಗಿಸುವಂತೆ ಕರೆ ನೀಡಿದರು.
ಎನ್.ಡಿ.ಎ. ಸರಕಾರವು ಸರಳತೆ, ಸುಧಾರಣಾವಾದಿ ಧೋರಣೆ ಮತ್ತು ಪಾರದರ್ಶಕತೆಯನ್ನು ಆಡಳಿತದಲ್ಲಿ ತರಲು ಬದ್ಧವಾಗಿದೆ ಎಂದು ಜಪಾನ್ ವಾಣಿಜ್ಯೋದ್ಯಮಿಗಳಿಗೆ ಅವರು ಭರವಸೆ ನೀಡಿದರು. ಭಾರತದಲ್ಲಿ ಹಲವಾರು ಪವಿತ್ರ ಬೌದ್ಧ ಕ್ಷೇತ್ರಗಳಿವೆ.
ಅಜಂತಾ, ಎಲ್ಲೋರಾ, ಬುದ್ಧಗಯಾ, ನಳಂದ ಮತ್ತು ವಾರಾಣಸಿ, ಸಾಂಚಿ ಪ್ರದೇಶಗಳಿಗೆ ಬೌದ್ಧ ಧರ್ಮೀಯರು ಮತ್ತು ಜಪಾನ್ ಪ್ರವಾಸಿಗರು ಸಹಸ್ರಾರು ಸಂಖ್ಯೆಯಲ್ಲಿ ಭೇಟಿನೀಡುತ್ತಾರೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಜಪಾನ್ ಉದ್ಯಮಿಗಳು ಬಂಡವಾಳ ಹೂಡಬಹುದಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಜಪಾನ್ ಸಹಯೋಗದಲ್ಲಿ ಭಾರತದೇಶವು ವಿದ್ಯುತ್, ಬಂದರು, ಸೇತುವೆ, ಹೆದ್ದಾರಿ ನಿರ್ಮಾಣವೇ ಮೊದಲಾದ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮುಂದೆಯೂ ನಾವು ಜಪಾನ್ ಸಹಯೋಗ ಬಯಸುತ್ತೇವೆ. ಮಹತ್ವದ ರೈಲ್ವೆ ಯೋಜನೆಗಳಲ್ಲಿ ನಾವು ಜಪಾನ್ ಸಹಭಾಗಿತ್ವವನ್ನು ನಿರೀಕ್ಷಿಸುತ್ತೇವೆ ಎಂದರು ಅಟಲ್.
ನಾಗಾ ನಾಯಕರೊಂದಿಗೆ ಭೇಟಿ : ನಾಗಾಲ್ಯಾಂಡ್‌ನಲ್ಲಿ ಶಾಂತಿ ಪ್ರಕ್ರಿಯೆ ಮುಂದುವರಿಸುವ ನಿಟ್ಟಿನಲ್ಲಿ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ವಾಜಪೇಯಿ ಅವರು, ಇಲ್ಲಿ ನಾಗಾ ನಾಯಕರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ನಾಗಾ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications