ಬಸ್ ಪ್ರಯಾಣಿಕರಿಗೆ ವಿಮೆ ಒದಗಿಸಲು ಸರ್ಕಾರದ ಚಿಂತನೆ
ಯಾದಗಿರಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಪಘಾತ ವಿಮಾ ಸೌಲಭ್ಯವನ್ನು ಜಾರಿಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ.
ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಸಂಚರಿಸುವುದನ್ನು ತಡೆಯಲು ಹಾಗೂ ರಾಜ್ಯದ ಪ್ರಯಾಣಿಕರ ಹಿತದೃಷ್ಟಿಯಿಂದ ಅಪಘಾತ ವಿಮೆ ಸೌಲಭ್ಯ ಒದಗಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ ಎಂದು ಗುರುಮಠಕಲ್‌ನಲ್ಲಿ ನೂತನ ಬಸ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಸಾರಿಗೆ ಸಚಿವ ಸಗೀರ್ ಅಹ್ಮದ್ ತಿಳಿಸಿದರು.
ಅಪಘಾತ ವಿಮೆ ಯೋಜನೆಯಡಿಯಲ್ಲಿ ಕನಿಷ್ಠ 20 ರುಪಾಯಿ ಹಾಗೂ 1 ರುಪಾಯಿ ಸರ್‌ಚಾರ್ಜ್ ಹೊಂದಿದ ಪ್ರಯಾಣಿಕರು 1 ಲಕ್ಷ ರುಪಾಯಿ ವಿಮೆ ಹಣ ಪಡೆಯಲು ಅರ್ಹರಾಗಿರುತ್ತಾರೆ. ಈ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಸಗೀರ್ ಅಹ್ಮದ್ ಹೇಳಿದರು. ಉತ್ತರ ಕರ್ನಾಟಕದ ಗ್ರಾಮಾಂತರ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ 17.5 ಕೋಟಿ ರುಪಾಯಿ ಯೋಜನೆ ಕಲ್ಪಿಸಿದ್ದು , ಈಗಾಗಲೇ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಹೈದರಾಬಾದ್- ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರಸಕ್ತ ಸಾಲಿಗೆ ಸರ್ಕಾರ 100 ಕೋಟಿ ರುಪಾಯಿ ನೆರವು ನೀಡಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications