ಕಂಠೀರವದಲ್ಲಿ ಚಿಣ್ಣರ ಕಲರವ
(ಇನ್ಫೋ ಇನ್‌ಸೈಟ್)
ಬೆಂಗಳೂರು : ಭಾನುವಾರ ಮುಂಜಾನೆ ಒಂಬತ್ತೂವರೆ ಗಂಟೆ. ಕಂಠೀರವ ಕ್ರೀಡಾಂಗಣದಲ್ಲಿ ಬಣ್ಣ ಬಣ್ಣದ ಚಿಣ್ಣರು. ಅಂಕಲ್, ಆಟೋಗ್ರಾಫ್ ಕೊಡಿ ಅಂತ ಕನ್ನಡ- ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಕೋರಿಕೆ. ಮಕ್ಕಳ ಹಿಂಡಿನ ನಡುವೆ ಸಾಂಗ್ಲಿಯಾನ ಅಂಕಲ್. ಅಂಕಲ್ ಬರುವ ಮುನ್ನವೇ ಮಕ್ಕಳು ಅವರಿಗೆ ಸ್ವಾಗತದ ಬ್ಯಾನರ್‌ಗಳ ಹಿಡಿದು ನಿಂತಿದ್ದರು.
ಎಂ.ಜಿ.ರಸ್ತೆ ಕಿಷ್ಕಿಂಧೆಯಾದೀತೆಂಬ ಕಾರಣಕ್ಕೋ ಏನೋ ಮೊದಲ ಮಕ್ಕಳಾಟ ಕೂಟ ಕಂಠೀರವ ಕ್ರೀಡಾಂಗಣಕ್ಕೆ ಸ್ಥಳಾಂತರವಾಯಿತು. ಆದರೇನಂತೆ 35 ಸಾವಿರ ಮಕ್ಕಳ ಕಲರವ. ಇಂಥಾ ಒಂದು ಮಕ್ಕಳಾಟ ಆಯೋಜಿಸಿದ್ದಕ್ಕೆ ಎಲ್ಲರ ಬಾಯಲ್ಲೂ ಕೇಳಿಬರುತ್ತಿದ್ದ ಹೆಸರು ನಗರ ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ ಅವರದು. ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಜಂಟಿಯಾಗಿ ಮಕ್ಕಳಾಟದ ಉಸ್ತುವಾರಿ ನೋಡಿಕೊಂಡರು. ಮೇಳಾಟದ ಪ್ರತಿ ಕ್ಷಣವನ್ನೂ ಸಾಂಗ್ಲಿಯಾನ ಮಕ್ಕಳೊಟ್ಟಿಗೇ ಕಳೆದದ್ದು ಇನ್ನೊಂದು ವಿಶೇಷ.
ಕೈಯಾಡಿಸಿ, ಬೂಟನ್ನು ನೆಲಕ್ಕೆ ಕುಟ್ಟಿ ಅಟೆಂನ್ಷನ್ ಪ್ಲೀಸ್ ಎಂದ ಸಾಂಗ್ಲಿಯಾನ ಅಂಕಲ್ ಕಡೆ ಚಿಣ್ಣರ ದೃಷ್ಟಿ ಹರಿಯಿತು. ಆಟಕ್ಕೆ ಅಲ್ಪವಿರಾಮ. ನಮ್ಮ ಬಳಿ ಪೊಲೀಸ್ ನಾಯಿಗಳಿವೆ. ಅವು ಕಳ್ಳರನ್ನು ಎಳೆದು ತಂದು ನಿಲ್ಲಿಸುತ್ತವೆ. ಬಾಂಬ್‌ಗಳನ್ನು ಹುಡುಕುತ್ತವೆ. ಅಂಡರ್‌ಗ್ರೌಂಡನಲ್ಲಿ ಬಾಂಬ್ ಇಟ್ಟಿದ್ದರೂ ನಾಯಿಗಳಿಗೆ ಅದು ಗೊತ್ತಾಗುತ್ತದೆ. ಇವೆಲ್ಲಾ ಬಂದೂಕುಗಳು. ತಪ್ಪು ಮಾಡುವವರಿಂದ ನಿಮ್ಮನ್ನು ಕಾಪಾಡಲು ಇದನ್ನು ನಾವು ಉಪಯೋಗಿಸುತ್ತೇವೆ.... ಸಾಂಗ್ಲಿಯಾನ ಅಂಕಲ್ ಪಾಠ ಹೇಳಿದರು.
ಬರೀ ಆಟವಲ್ಲ. ಶ್ವಾನ ಪ್ರದರ್ಶನ, ಮ್ಯಾಜಿಕ್ ಷೋ, ಸಿನಿಮಾಗಳು, ಚಲಿಸುವ ಕಾರ್ಟೂನ್‌ಗಳು ಇನ್ನೂ ಏನೇನೋ. ಬಣ್ಣ ಬಣ್ಣದ ಬಲೂನುಗಳು ಹಾರಿದವು. ಒಂದಷ್ಟು ಪೋರರು ಸ್ಕೇಟಿಂಗ್ ತೊಟ್ಟು ಸರಸರನೆ ಜಾರಿದರು. ಇನ್ನಷ್ಟು ಚಿಣ್ಣರು ಟ್ರೆೃಸಿಕಲ್, ಬೈಸಿಕಲ್ ಸವಾರಿ ಮಾಡಿ ಮಜಾ ಅನುಭವಿಸಿದರು. ದಣಿದ ಚಿಣ್ಣರಿಗೆ ತಿನಿಸುಗಳೂ ಇದ್ದವು.
ಮಕ್ಕಳಿಗೆ ಇದೊಂದು ಛೇಂಜ್. ಜೊತೆಗೆ ಕಲಿಯಲು ಒಳ್ಳೆಯ ವೇದಿಕೆ. ಪೊಲೀಸರ ಬಗ್ಗೆ ತಿಳಿಯುವ ಅಪರೂಪದ ಅವಕಾಶ. ಇಂತಾ ಅವಕಾಶ ಕಲ್ಪಿಸಿಕೊಟ್ಟ ಸಾಂಗ್ಲಿಯಾನ ಅವರಿಗೆ ಧನ್ಯವಾದಗಳು ಎನ್ನುತ್ತಾರೆ ತಮ್ಮ ಮಗನನ್ನು ಆಟಕ್ಕೆ ಕರೆ ತಂದಿದ್ದ ಒಬ್ಬ ಪೋಷಕರು.
ಸಾಕಷ್ಟು ಪೂರ್ವಸಿದ್ಧತೆ ಇರಲಿಲ್ಲ. ಎಂ.ಜಿ.ರೋಡಿನಲ್ಲಿ ಹಮ್ಮಿಕೊಳ್ಳಬೇಕೆಂದಿದ್ದ ಮಕ್ಕಳಾಟವನ್ನು ಹಠಾತ್ತಾಗಿ ಕಂಠೀರವಕ್ಕೆ ವರ್ಗಾಯಿಸಬೇಕಾಯಿತು. ಆದರೂ ಸಾಕಷ್ಟು ಮಕ್ಕಳು ಸೇರಿದ್ದರು. ಆಟದ ಜೊತೆಗೇ ಮಕ್ಕಳಿಗೆ ಒಳಿತು ಕೆಡಕಿನ ಪಾಠ ಕಲಿಸುವ ನನ್ನ ಆಶಯ ಈ ಮೂಲಕ ಪ್ರಾರಂಭವಾಗಿದೆ. ಇನ್ನು ಪ್ರತಿ ತಿಂಗಳ ಮೊದಲ ಭಾನುವಾರ ಇದು ಮುಂದುವರೆಯುತ್ತದೆ. ಇನ್ನೊಂದು ವರ್ಷ ಪ್ರತಿ ತಿಂಗಳ ಮೊದಲ ಭಾನುವಾರದ 2 ತಾಸನ್ನು ಮಕ್ಕಳಾಟಕ್ಕೇ ಮೀಸಲಿಟ್ಟಿದ್ದೇವೆ; ಇದೇ ಕಂಠೀರವ ಕ್ರೀಡಾಂಗಣದಲ್ಲಿ. ಮುಂದಿನ ತಿಂಗಳೂ ಎಲ್ಲಾ ಮಕ್ಕಳಿಗೂ ಸ್ವಾಗತ ಎಂದರು ಸಾಂಗ್ಲಿಯಾನ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications