ಅಯ್ಯಪ್ಪ ಪ್ರಭಾವಳಿಯ ಪಂಪಾ ಕಣಿವೆಯಲ್ಲಿ‘18th Step Resort
ಕೊಚ್ಚಿ : ಶಬರಿಮಲೆಗೀಗ ಹೈಟೆಕ್ ರಂಗು. ಸ್ವಾಮಿ ಶರಣಂ ಅಯ್ಯಪ್ಪನ ಪ್ರಭಾವಳಿಯ ಪಂಪಾ ಕಣಿವೆಯಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ವಲಯದ ರೆಸಾರ್ಟ್ ತಲೆಯೆತ್ತಿ ನಿಂತಿದೆ. 1.25 ಕೋಟಿ ರುಪಾಯಿ ಬಂಡವಾಳ ಹೂಡಿಕೆಯ ಈ ರೆಸಾರ್ಟ್ ಕಾರ್ಯಾರಂಭ ಭಾನುವಾರದಿಂದ.
ಪ್ರಸ್ತುತ 160 ಮಂದಿ ಯಾತ್ರಾರ್ಥಿಗಳು ತಂಗಲು ಅನುಕೂಲವಿರುವ ಈ ರೆಸಾರ್ಟ್ ಪೂರ್ಣಗೊಂಡ ನಂತರ ಇನ್ನೂ 320 ಮಂದಿಗೆ ಸೌಲಭ್ಯ ಒದಗಿಸಬಲ್ಲುದು ಎನ್ನುತ್ತಾರೆ ರೆಸಾರ್ಟ್‌ನ ರೂವಾರಿ ಬಿಜು ಆಂಟೋನಿ. ಅಯ್ಯಪ್ಪನ ಯಾತ್ರಾರ್ಥಿಗಳಿಗೆ ಈ ರೆಸಾರ್ಟ್‌ನಲ್ಲಿ ಸಕಲ ಸೌಲಭ್ಯಗಳು ಲಭ್ಯ. ದಣಿವು ಕಳಕೊಳ್ಳಲಿಕ್ಕೆ, ಚೈತನ್ಯ ತುಂಬಿಕೊಳ್ಳಲಿಕ್ಕೊಂದು ತಾವು.
ಸಸ್ಯಾಹಾರಿ ಊಟದ ಸೌಲಭ್ಯವಿದೆ. ಆಂಧ್ರ, ತಮಿಳುನಾಡು, ಕೇರಳ ಮೂರೂ ಬಗೆಯ ಆಹಾರ ವೈವಿಧ್ಯ ಯಾತ್ರಾರ್ಥಿಗಳ ಆಯ್ಕೆಗುಂಟು. ಕರ್ನಾಟಕದಿಂದ ಹೆಚ್ಚಿನ ಭಕ್ತರು ಶಬರಿಮಲೆಗೆ ಆಗಮಿಸುತ್ತಿದ್ದರೂ, ರೆಸಾರ್ಟ್‌ನಲ್ಲಿ ಕರ್ನಾಟಕದ ಆಹಾರದ ಬಗೆಗೆ ಯಾವುದೇ ಸುದ್ದಿ ಲಭ್ಯವಿಲ್ಲ . ಕನ್ನಡಿಗರಾರೂ ಈ ಬಗ್ಗೆ ತಲೆ ಕೆಡಿಸಿಕೊಂಡೂ ಇಲ್ಲ .
ಮುಂದಿನ ಯಾತ್ರಾಋತುವಿನ ಹೊತ್ತಿಗೆ ಹತ್ತು ಕಾಟೇಜುಗಳು ಸಿದ್ಧವಾಗುತ್ತವೆ, ಹೆಚ್ಚಿನ ಸೌಲಭ್ಯಗಳೂ ಕೂಡ. ಇಲ್ಲಿ ಕಾಲ ಹಂಚಿಕೆ ಅವಕಾಶವೂ ಉಂಟು ಎನ್ನುತ್ತಾರೆ ಬಿಜು. ಅಂದರೆ ಒಟ್ಟಿಗೆ 4 ಸಾವಿರ ರುಪಾಯಿ ನೀಡಿ ರೆಸಾರ್ಟ್‌ನ ಮೆಂಬರ್‌ಷಿಪ್ ಪಡೆದಲ್ಲಿ : ಮಂಡಲ- ಮಕರವಿಲಕ್ಕು ಅವಧಿಯ ಎರಡು ರಾತ್ರಿ ಹಾಗೂ ತಿಂಗಳ ಪೂಜೆ ಅವಧಿಯಲ್ಲಿ ಮೂರು ದಿನಗಳ ಕಾಲ ರೆಸಾರ್ಟ್‌ನಲ್ಲಿ ತಂಗಬಹುದು. ಈ ಸೌಲಭ್ಯ 5 ವರ್ಷಗಳ ಕಾಲಾವಧಿಯದು.
ರೆಸಾರ್ಟ್‌ನ ಸದಸ್ಯತ್ವ ಪಡೆದವರು 5 ವರ್ಷಗಳ ಅವಧಿಯ 50 ಸಾವಿರ ರುಪಾಯಿಯ ವೈಯಕ್ತಿಕ ಅಪಘಾತ ವಿಮೆಗೆ ಅರ್ಹರು. ಅಂದಹಾಗೆ- ಈ ರೆಸಾರ್ಟ್‌ನ ಹೆಸರು 18 ನೇ ಮೆಟ್ಟಿಲ ರೆಸಾರ್ಟ್(18th Step Resorts). ಪಂಪಾದಿಂದ 19 ಕಿಮೀ ದೂರದಲ್ಲಿ , ಇರುಮೇಲಿ- ಪಂಪಾ ಶಬರಿ ಹೆದ್ದಾರಿಯಲ್ಲಿದೆ. ಈ ಬಾರಿಯ ನಿಮ್ಮ ಶಬರಿಮಲೆ ಯಾತ್ರೆ ಸುಖಕರವಾಗಿರಲಿ!
(ಪಿಟಿಐ)
ಪಂಪಾಕ್ಷೇತ್ರದ ಸುತ್ತಮುತ್ತ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications