ಮಳೆಯ ಮೊಂಡುತನದಿಂದ ಲಕ್ಷ್ಮೇಶ್ವರದಜನ ಗುಳೆ ಹೊರಟರು
ಲಕ್ಷ್ಮೇಶ್ವರ : ದಾಂಡೇಲಿ ಬಳಿಯ ಈ ಊರಿನಲ್ಲಿ ರಾಜ್ಯಕ್ಕೆ ಅಪ್ಪಳಿಸಿದ ಬರಗಾಲದ ಅಚ್ಚು ಇನ್ನೂ ಎದ್ದು ಕಾಣುತ್ತಿದೆ. ತಡವಾಗಿ ಬಂದ ಮಳೆ ಇಲ್ಲಿನ ಬೆಳೆಗಳನ್ನು ನಳನಳಿಸುವಂತೆ ಮಾಡುವಲ್ಲಿ ಸೋತುಹೋಗಿದೆ. ಆ ಸೋಲಿನ ಕರಾಳ ಛಾಯೆ ರೈತರ ಮೊಗದಲ್ಲೂ.
ಮಾನ್‌ಸೂನ್ ಬಾರದೇ ಇದ್ದರೂ ಸೆಪ್ಟೆಂಬರ್ ಹೊತ್ತಿಗಾದರೂ ಉತ್ತರ ಕರ್ನಾಟಕದ ಇತೆರೆಡೆಗಳಲ್ಲಿ ನಾಲ್ಕು ಹನಿ ಮಳೆ ಚೆಲ್ಲಿತ್ತು. ಆದರೆ ಲಕ್ಷ್ಮೇಶ್ವರದ ಹೊಲಗದ್ದೆಗಳ ಬಿರುಕು ಮುಚ್ಚಿಕೊಳ್ಳುವಷ್ಟೂ ಮಳೆ ಬರಲಿಲ್ಲ. ಹೊಲದಲ್ಲಿ ಕಷ್ಟಪಟ್ಟು ಬಿತ್ತಿದ್ದ ಬೆಳೆಯನ್ನು ಅರ್ಧಕ್ಕೇ ಬಿಟ್ಟು ಇಲ್ಲಿನ ನಿವಾಸಿಗಳು ಗೋವಾ ಮತ್ತು ಮಂಗಳೂರಿಗೆ ವಲಸೆ ಹೊರಟು ಹೋಗಿದ್ದಾರೆ.
ಪಕ್ಕದೂರುಗಳಾದ ಗೋಜನೂರು, ಮಾಡಗಿ, ಶಿಗ್ಲಿ, ದೊಡ್ಡೂರು, ಶ್ಯಾಬಾಲ್, ಉಲ್ಲಟ್ಟಿ, ಬೆಲ್ಲಟ್ಟಿಗಳಲ್ಲಿಯೂ ಅರೆ ಬರೆ ಸುರಿದ ಮಳೆ, ಹೊಲದ ಬೆಳೆಯನ್ನು ಕಾಪಾಡಲಿಲ್ಲ. ಆದರೂ ಲಕ್ಷ್ಮೇಶ್ವರಕ್ಕೆ ಹೋಲಿಸಿದಲ್ಲಿ ತುಸು ಮೇಲು. ಲಕ್ಷ್ಮೇಶ್ವರದಲ್ಲಿ ಕೃಷಿಯನ್ನು ನಂಬಿದ ಮಂದಿಯ ತಲೆ ಮೇಲೆ ಸಾಲದ ಗಂಟಿದೆ. ವಲಸೆ ಹೋಗಿ ದುಡಿದು ಆ ಸಾಲವನ್ನು ತೀರಿಸುವುದು ಕಷ್ಟದ ಮಾತು.
ಬಿತ್ತಿದ ಜೋಳ ಸಸಿಯಾಗುವ ಮುನ್ನವೇ ಎಲ್ಲವೂ ಮುರುಟಿ ಹೋಗಿದೆ ಎಂಬುದು ಗಂಟು ಮೂಟೆ ಕಟ್ಟಿ ಮಂಗಳೂರು ಕಡೆ ವಲಸೆ ಹೊರಟ ರೈತ ಹರ್ಯಾಪ್ಪನ ಗೋಳು.
ಇಲ್ಲಿನ ಮಾಜಿ ಎಂಎಲ್‌ಎ, ಗಂಗಮ್ಮ ಮಹಾಂತ ಶೆಟ್ಟರ್ ಮತ್ತು ಶಿರಹಟ್ಟಿ ತಾಲ್ಲೂಕಿನ ಸಂಯುಕ್ತ ಜನತದಾಳದ ಅಧ್ಯಕ್ಷ ಸೋಮಣ್ಣ ಹಾಗೂ ವಿವಿಧ ಸಂಘಟನೆಯ ಮುಖ್ಯಸ್ಥರು ಲಕ್ಷ್ಮೇಶ್ವರ ತಾಲ್ಲೂಕಿನ ಪರಿಸ್ಥಿತಿಯ ಬಗ್ಗೆ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿ, ಪ್ರತಿ ಎಕರೆಗೆ 5 ಸಾವಿರ ರೂಪಾಯಿ ಪರಿಹಾರನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಸರಕಾರದ ಪರಿಹಾರ ಹಣವನ್ನು ನಂಬಿ ಕುಳಿತರೆ ಹೊಟ್ಟೆ ಹೊರೆಯುವುದು ಹೇಗೆ ಎಂಬುದು ಹರ್ಯಾಪ್ಪನ ಪ್ರಶ್ನೆ.
ಇಲ್ಲಿನ ಮಜ್ಜಾಪುರ ಹಳ್ಳಿಯ ಕೃಷಿ ಇಲಾಖೆ ಕಚೇರಿಯ ವರದಿಯಂತೆ 10, 200 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತಲಾಗಿದೆ. ಆದರೆ ಈ ಬೀಜ ಮೊಳಕೆಯಾಡೆಯುವಷ್ಟೂ ಮಳೆ ಬೀಳದೇ ಇರುವುದರಿಂದ ಬೆಳೆಯನ್ನು ರೈತರು ಮರೆತುಬಿಡುವುದು ವಾಸಿ. ಕಚೇರಿಯ ಅಂದಾಜು ವರದಿಯ ಪ್ರಕಾರ, 27 ಸಾವಿರ ಹೆಕ್ಟೇರು ಪ್ರದೇಶದಲ್ಲಿ ಬಿತ್ತಿದ ಜೋಳ ಮಳೆಯ ಇಲ್ಲದೆ ಒಣಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications