ಮೊದಲ ಟೆಸ್ಟ್‌ನಲ್ಲಿ ಶೆವಾಗ್ ಆಡುವುದಿಲ್ಲ, ಇಂಗ್ಲೆಂಡ್ ಆಡುತ್ತದೆ
ಲಂಡನ್ : ಡಿಸೆಂಬರ್ 3ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ವೀರೇಂದ್ರ ಶೆವಾಗ್ ಆಡುವುದಿಲ್ಲ. ಈ ಮೂಲಕ ಐಸಿಸಿ- ಬಿಸಿಸಿಐ ನಡುವಣ ಟಂಗಾಟುಂಗಿ ಮುಕ್ತಾಯವಾಗಿದೆ.
ಲಂಡನ್ನಿನಲ್ಲಿರುವ ಐಸಿಸಿ ಅಧ್ಯಕ್ಷ ಮಾಲ್ಕಂ ಗ್ರೇ, ಸಿಡ್ನಿಯಲ್ಲಿರುವ ಐಸಿಸಿ ಕಾರ್ಯನಿರ್ವಾಹಕ ಅಧಿಕಾರಿ ಮಾಲ್ಕಂ ಸ್ಪೀಡ್ ಹಾಗೂ ಕೋಲ್ಕತಾದಲ್ಲಿರುವ ಬಿಸಿಸಿಐ ಅಧ್ಯಕ್ಷ ಜಗನ್ಮೋಹನ ದಾಲ್ಮಿಯಾ ದೂರವಾಣಿಯಲ್ಲಿ ಪರಸ್ಪರ ಮಾತುಕತೆ ನಡೆಸಿದ ನಂತರ ಈ ನಿರ್ಣಯ ಕೈಗೊಳ್ಳಲಾಗಿದೆ. ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಸಚಿನ್ ಸೇರಿದಂತೆ ಭಾರತದ ಆರು ಮಂದಿ ಕ್ರಿಕೆಟಿಗರ ವಿರುದ್ಧ ರೆಫ್ರಿ ಮೈಕ್ ಡೆನ್ನಿಸ್ ವಿಧಿಸಿರುವ ಶಿಸ್ತು ಕ್ರಮವನ್ನು ಪುನರ್ ಪರಿಶೀಲಿಸಲು ಆಯೋಗವೊಂದನ್ನು ರಚಿಸಲು ಐಸಿಸಿ ಒಪ್ಪಿಕೊಂಡಿದೆ.
ಶೆವಾಗ್ ಅವರನ್ನು ಆಡಿಸಬೇಕೆ ಬೇಡವೇ ಎಂಬುದರ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲು ಮಾಲ್ಕಂ ಗ್ರೇ ಹಾಗೂ ದಾಲ್ಮಿಯಾ ಶನಿವಾರ ಕೌಲಾಲಂಪುರದಲ್ಲಿ ಸಭೆ ಸೇರಬೇಕಿತ್ತು. ಆದರೆ ಈ ಮೊದಲೇ ಐಸಿಸಿ ಕೇಳಿದ್ದಂತೆ ಶುಕ್ರವಾರದೊಳಗೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ದೃಷ್ಟಿಯಿಂದ ದೂರವಾಣಿ ಮೂಲಕವೇ ಸಮಾಲೋಚನಾ ಸಭೆ ನಡೆಯಿತು.
ಐಸಿಸಿಯ ಸಂಹಿತೆಯನ್ನು ಮೈಕ್ ಡೆನ್ನಿಸ್ ಪಾಲಿಸಿದ್ದಾರೆ ಎಂಬ ನಂಬಿಕೆ ನಮಗೆ ಇದೆ. ಸ್ವತಂತ್ರ ಆಯೋಗದಿಂದ ಅದನ್ನು ದೃಢಪಡಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಜನವರಿ ತಿಂಗಳೊಳಗೆ ಆಯೋಗವು ಈ ಕುರಿತು ತನ್ನ ವರದಿ ಸಲ್ಲಿಸಲಿದೆ ಎಂದು ಸುದ್ದಿಗಾರರಿಗೆ ಸ್ಪೀಡ್ ಹೇಳಿದರು.
ಸಚಿನ್ ಚಾರಿತ್ರ್ಯಕ್ಕೆ ಮಸಿ ಬಳಿದ ಡೆನ್ನಿಸ್ ಅವರನ್ನು ವಜಾ ಮಾಡಬೇಕು, ದಕ್ಷಿಣ ಆಫ್ರಿಕ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವನ್ನು ಅಧಿಕೃತ ಎಂದು ಘೋಷಿಸಬೇಕು ಮತ್ತು ಆಟಗಾರರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮವನ್ನು ಪುನರ್ ಪರಿಶೀಲಿಸಬೇಕು ಎಂಬ ಬೇಡಿಕೆಗಳನ್ನು ಐಸಿಸಿ ಮುಂದಿಟ್ಟಿದ್ದೇವೆ. ಡೆನ್ನಿಸ್ ಕೊಟ್ಟಿರುವ ಶಿಕ್ಷೆಯ ಮರುಪರಿಶೀಲನೆಗೆ ಆಯೋಗ ರಚಿಸಲು ಐಸಿಸಿ ಒಪ್ಪಿದ ಕಾರಣಕ್ಕೇ ಶೆವಾಗ್ ಅವರನ್ನು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡಿಸದಿರಲು ತೀರ್ಮಾನಿಸಿದೆವು ಎಂದು ದಾಲ್ಮಿಯಾ ಸುದ್ದಿಗಾರರಿಗೆ ತಿಳಿಸಿದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications