ಕೊಡಗು: ಸರ್ವಶಿಕ್ಷಣ ಅಭಿಯಾನ ಅನುಷ್ಠಾನಕ್ಕೆ 45 ಕೋಟಿ ನೆರವು
ಮಡಿಕೇರಿ: ಜಿಲ್ಲೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಸರ್ವ ಶಿಕ್ಷಣ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯಸರಕಾರಗಳು ಒಟ್ಟು 45 ಕೋಟಿ ರೂಪಾಯಿಗಳ ನೆರವು ನೀಡಲಿವೆ.
ಕೊಡಗು ಜಿಲ್ಲಾ ಪಂಚಾಯತ್‌ನ ಸಿಇಒ, ಎಂ.ಕೆ. ಬಲದೇವ ಕೃಷ್ಣ ಈ ವಿಷಯವನ್ನು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸರ್ವ ಶಿಕ್ಷಣ ಅಭಿಯಾನವನ್ನು ಜಾರಿಗೊಳಿಸಲು ಕೇಂದ್ರಸರಕಾರವು ಜಿಲ್ಲೆಗೆ ಶೇ 75ರಷ್ಟು ಹಣ ಒದಗಿಸಲಿದೆ ಉಳಿದ ಹಣ ರಾಜ್ಯ ಸರಕಾರದಿಂದ ಮಂಜೂರಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಯೋಜನೆ ಆರಂಭವಾಗಲಿದೆ.
ಎಲ್ಲ ಮಕ್ಕಳಿಗೂಶಿಕ್ಷಣ ನೀಡುವ ಉದ್ದೇಶದಿಂದ, ಚಿಣ್ಣರ ಅಂಗಳ ಕಾರ್ಯಕ್ರಮದಡಿ, ಅರ್ಧದಲ್ಲಿಯೇ ಶಾಲೆ ಬಿಟ್ಟು ಹೋಗಿದ್ದ ಜಿಲ್ಲೆಯ ಸುಮಾರು 7 ಸಾವಿರ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲಾಗಿದೆ. ರಾಜ್ಯದೆಲ್ಲೆಡೆ ಅರ್ಧದಲ್ಲಿಯೇ ಶಾಲೆಬಿಟ್ಟು ಶಿಕ್ಷಣ ವಂಚಿತರಾದ ಮಕ್ಕಳ ಮರು ಸೇರ್ಪಡೆಗೆ ಸರಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೊಡಗಿನಲ್ಲಿಯೂ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಬಲದೇವ ಕೃಷ್ಣ ಹೇಳಿದರು.
ಇತ್ತೀಚೆಗೆ ಜಿಲ್ಲೆಯ ಶಾಲೆಯಾಂದರಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಲು ವಿರೋಧಿಸಿದ ಪ್ರಕರಣವನ್ನು ಉಲ್ಲೇಖಿಸಿದ ಬಲದೇವ ಅವರು, ಮಕ್ಕಳಲ್ಲಿ ರಾಷ್ಟ್ರೀಯ ಏಕತೆಯ ಅರಿವನ್ನು ಮೂಡಿಸಲು ಹೆತ್ತವರೂ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications