ತಮಿಳುನಾಡಲ್ಲಿ ಗುಟ್ಕಾ ನಿಷೇಧ, ಕರ್ನಾಟಕದಲ್ಲಿ ಯಾವಾಗ ಕೃಷ್ಣ?
ಚೆನ್ನೈ: ದೇಶಾದ್ಯಂತ ಧೂಮಪಾನ ನಿಷೇಧಿಸಿ ಸುಪ್ರೀಂ ಕೋರ್ಟ್ ಆಜ್ಞೆ ಹೊರಡಿಸಿರುವ ಬೆನ್ನಿಗೇ ತಮಿಳುನಾಡು ಸರಕಾರ ರಾಜ್ಯದಲ್ಲಿ ಪಾನ್ ಮಸಾಲಾ, ಜಗಿಯುವ ತಂಬಾಕು ಮತ್ತು ಗುಟ್ಕಾವನ್ನು ನಿಷೇಧಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೋಮವಾರ ಆಜ್ಞೆ ಹೊರಡಿಸಿದೆ.
ಈ ನಿಷೇಧಾಜ್ಞೆ ಐದು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. ಸಾರ್ವಜನಿಕ ಆರೋಗ್ಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿದೆ. ಅಧ್ಯಯನ ವರದಿಗಳ ಪ್ರಕಾರ ಎಲ್ಲ ತಂಬಾಕು ಪದಾರ್ಥಗಳು ಬಾಯಿಯ ಕ್ಯಾನ್ಸರ್ ತರುತ್ತವೆ ಎಂಬುದನ್ನು ಸಾಬೀತು ಮಾಡಿವೆ. ಆದ್ದರಿಂದ ತಂಬಾಕಿನಂಶ ಇರುವ ಪದಾರ್ಥಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಎಸ್. ಸೆಮ್ಮಾಲೈ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಜನತೆ ಈ ನಿಷೇಧವನ್ನು ಸ್ವಾಗತಿಸಬಹುದೆಂಬ ನಂಬಿಕೆ ನಮಗಿದೆ. ದೇಶದಲ್ಲಿ ಮುಕ್ಕಾಲು ಭಾಗ ಮಂದಿ ತಂಬಾಕು ಜಗಿಯುವುದರಿಂದಲೇ ಬಾಯಿಯ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಇವರೆಲ್ಲ 35 ವರ್ಷಕ್ಕಿಂತ ಕಡಿಮೆ ಪ್ರಾಯದವರು ಎಂದು ಅಧ್ಯಯನ ವರದಿ ಹೇಳುತ್ತದೆ. ಈ ಅನಿರೀಕ್ಷಿತ ಆಜ್ಞೆಯನ್ನು ಜಾರಿ ತರುವ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ನಿರ್ದೇಶಕರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸೆಮ್ಮಾಲೈ ಹೇಳಿರುವುದಾಗಿ ನಮ್ಮ ಚೆನ್ನೈ ಕಾರ್ಯಾಲಯದ ಬಾತ್ಮಿದಾರರು ತಿಳಿಸಿದ್ದಾರೆ.
ಈ ನಡುವೆ, ತಮಿಳುನಾಡಿನ ವಿವಿಧ ಕಡೆಗಳಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿರುವ ಆರೋಗ್ಯ ಕಾರ್ಯಪಡೆ, ಆಜ್ಞೆ ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಶ್ರಮಿಸುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications