ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ: ಪ್ರತಿಪಕ್ಷಗಳಿಗೆ ಕೃಷ್ಣ ಕರೆ
ಚನ್ನಪಟ್ಟಣ : ದೇಶದ ಬೆನ್ನಲುಬಾದ ರೈತರ ಸಮಸ್ಯೆಗಳಿಗೆ ಎಲ್ಲ ರಾಜಕೀಯ ಪಕ್ಷಗಳೂ ಸ್ಪಂದಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕರೆ ನೀಡಿದ್ದಾರೆ. ರೈತರ ಸಮಸ್ಯೆಗಳ ನಿವಾರಣೆಗೆ ಕಾರ್ಯಕ್ರಮ ರೂಪಿಸುವುದು ಕೇವಲ ಸರಕಾರದಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಎಲ್ಲ ಪ್ರತಿಪಕ್ಷಗಳೂ ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದರು.
ಚನ್ನಪಟ್ಟಣದ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಬೃಹತ್ ರೈತ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಪಕ್ಷ ತತ್ವ ಸಿದ್ಧಾಂತಗಳಿಗೆ ಹೆಸರಾದ ಪಕ್ಷ. ತಮ್ಮ ಪಕ್ಷಕ್ಕೆ ರೈತರ ಬಗ್ಗೆ ಕಳಕಳಿ ಇದೆ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಭಾವಾವೇಶದಿಂದ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರೆ, ರೈತರನ್ನು ಪಕ್ಷಾತೀತವಾಗಿ ಸಂಘಟಿಸುವುದೇ ಈ ರ್ಯಾಲಿಯ ಉದ್ದೇಶವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಮಾಜಿ ಪ್ರಧಾನಿ ಇಂದಿರಾಗಾಂಧೀ ಅವರ ಜನ್ಮದಿನಾಚರಣೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನತೆ ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಲು ಈ ಸಭೆ ನಡೆಯುತ್ತಿದೆ ಎಂದು ಘೋಷಿಸಲಾಯಿತಾದರೂ, ವಾಸ್ತವವಾಗಿ ಜಾತ್ಯಾತೀತ ಜನತಾದಳದ ವಿರುದ್ಧ ಶಕ್ತಿ ಪ್ರದರ್ಶನಕ್ಕಾಗಿಯೇ ಈ ಸಭೆಯನ್ನು ಏರ್ಪಡಿಸಲಾಗಿತ್ತು.
ರೈತರ ಬೃಹತ್ ರ್ಯಾಲಿ ನಡೆದದ್ದೇಕೆ: ನೀರಾ ಚಳವಳಿ ಸಂದರ್ಭದಲ್ಲಿ ಅಕ್ಟೋಬರ್ 9ರಂದು ಚನ್ನಪಟ್ಟಣ ಬಳಿಯ ವಿಠಲೇನಹಳ್ಳಿಯಲ್ಲಿ ನಡೆದ ಗೋಲಿಬಾರ್ ಪ್ರಕರಣ, ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ನಡುವಿನ ಆಂತರಿಕ ಕಲಹವಾಗಿ ಮಾರ್ಪಟ್ಟಿದೆ.
ಮಾಜಿ ಪ್ರಧಾನಿ ದೇವೇಗೌಡರು ಪೊಲೀಸ್ ಗೋಲಿಬಾರ್ ವಿರೋಧಿಸಿ, ವಿಠಲೇನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದರು. ಜಾತ್ಯತೀತ ಜನತಾದಳದ ವರಿಷ್ಠರು ರಾಜ್ಯ ಸಹಕಾರ ಸಚಿವ ಡಿ.ಕೆ. ಶಿವಕುಮಾರ್ ಅವರೇ ಈ ಗೋಲಿಬಾರ್‌ಗೆ ಕಾರಣ ಎಂದು ವಾಗ್ದಾಳಿಯನ್ನೇ ನಡೆಸಿದರು.
ಗೋಲಿಬಾರ್‌ನಲ್ಲಿ ಸತ್ತ ವ್ಯಕ್ತಿಯ ತಿಥಿಯಲ್ಲಿ ಭಾಗವಹಿಸಿದ ದೇವೇಗೌಡರು ಸಹಕಾರ ಸಚಿವ ಡಿ.ಕೆ. ಶಿವಕುಮಾರ್ ಅವರೇ ಈ ಅಕೃತ್ಯಕ್ಕೆ ಕಾರಣ ಎಂದು ಆರೋಪಿಸಿದರೆ, ದೇವೇಗೌಡರು ‘ಹೆಣ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ’ ಎಂದು ಡಿ.ಕೆ. ಶಿವಕುಮಾರ್ ಪ್ರತ್ಯಾರೋಪ ಮಾಡಿದರು.
ಈ ಮಧ್ಯೆ ಕೆ.ಎಚ್. ಶ್ರೀನಿವಾಸ್ ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ, ಚನ್ನಪಟ್ಟಣಕ್ಕೆ ಹೋಗಿ ಸಭೆ ನಡೆಸಲಿ ಎಂದು ಬಹಿರಂಗ ಸವಾಲು ಹಾಕಿದರು. ಈ ಸವಾಲನ್ನು ಸ್ವೀಕರಿಸಿದ ಕಾಂಗ್ರೆಸ್ ನ.19ರಂದು ಚನ್ನಪಟ್ಟಣದಲ್ಲಿ ಬೃಹತ್ ರೈತರ ರ್ಯಾಲಿಗೆ ಸಿದ್ಧತೆ ನಡೆಸಿತು.
ಈ ಸಮಾವೇಶದಲ್ಲಿ ಲಕ್ಷ ರೈತರನ್ನು ಕಲೆ ಹಾಕುವುದಾಗಿ ಘೋಷಿಸಿತು. ಚನ್ನಪಟ್ಟಣ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ 12,040 ಅಡಿ ವಿಸ್ತೀರ್ಣದ ವೇದಿಕೆಯೂ ಸಿದ್ಧವಾಗಿ ಜನಸಾಗರದ ನಡುವೆ ಸಮಾವೇಶಕ್ಕೆ ಸಜ್ಜಾಯಿತು.
ಈ ಮಧ್ಯೆ ಸಮಾವೇಶಕ್ಕೆ ಅಡ್ಡಿಯನ್ನುಂಟುಮಾಡದಂತೆ ದೇವೇಗೌಡರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರೆ, ಕೆ.ಎಚ್. ಶ್ರೀನಿವಾಸ್ ತಾವು ಆ ರೀತಿ ಸವಾಲೇ ಹಾಕಿಲ್ಲ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದರು.
ಬಾಲಂಗೋಸಿ: ಪಾದಯಾತ್ರೆ, ರೈತ ರ್ಯಾಲಿ ಈ ಎರಡೂ ರಾಜಕೀಯ ಲಾಭಕ್ಕೆ ಮತ್ತು ವೈಯಕ್ತಿಕ ಪ್ರತಿಷ್ಠೆಗೆ ನಡೆಯುತ್ತಿದೆಯೇ ಹೊರತು ರಾಜ್ಯದ ಹಿತಕ್ಕಲ್ಲ . ಇದರಿಂದ ರಾಜ್ಯದ ಜನತೆಗೆ ಒಂದಿನಿತೂ ಪ್ರಯೋಜನವಿಲ್ಲ ಎಂದು ನಿಮಗನಿಸಿದರೂ ರಾಜಕಾರಣಿಗಳು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಬಿಡಿ...
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications